ನವದೆಹಲಿ (ಜ. 03): ರಾಮಮಂದಿರ ವಿವಾದಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರು, ‘ಸುಗ್ರೀವಾಜ್ಞೆ ಈಗಿಲ್ಲ’ ಎಂದು ನೀಡಿರುವ ಹೇಳಿಕೆಗೆ ವಿಶ್ವ ಹಿಂದೂ ಪರಿಷತ್ತು ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಮಂದಿರ ನಿರ್ಮಾಣಕ್ಕಾಗಿ ಸರ್ಕಾರವು ಕೋರ್ಟ್ ತೀರ್ಮಾನಕ್ಕೆ ಕಾಯದೇ ಕೂಡಲೇ ಶಾಸನ ಜಾರಿಗೆ ತರಬೇಕು ಎಂದು ಆಗ್ರಹಿಸಿದೆ. ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ವಿಶ್ವ ಹಿಂದೂ ಪರಿಷತ್ತು
ಅಂತಾರಾಷ್ಟ್ರೀಯ ಕಾರ್ಯಾಧ್ಯಕ್ಷ ಆಲೋಕ್ ಕುಮಾರ್, ‘ಕೋರ್ಟ್ ತೀರ್ಮಾನ ಪ್ರಕಟವಾಗುವ ತನಕ ಹಿಂದೂ ಸಮಾಜಕ್ಕೆ ಕಾಯಲಾಗದು. ಶಾಸನ ರಚನೆಯೊಂದೇ ಸೂಕ್ತ ನಿರ್ಧಾರವಾಗುತ್ತದೆ. ಅಧ್ಯಾದೇಶದ ಸಮಯವನ್ನು ಬದಲಿಸಿಕೊಳ್ಳುವಂತೆ ಮೋದಿ ಅವರ ಮನವೊಲಿಸಲಿದ್ದೇವೆ’ ಎಂದು ಹೇಳಿದರು.

ಈ ನಡುವೆ ನಾಗಪುರದಲ್ಲಿ ಮಾತನಾಡಿದ ಆರೆಸ್ಸೆಸ್ ಮುಖ್ಯಸ್ಥ ಮೋಹನ ಭಾಗವತ್, ‘ಅಯೋಧ್ಯೆಯಲ್ಲಿ ಮಂದಿರವೊಂದೇ ನಿರ್ಮಾಣ ಆಗಲಿದೆ’ ಎಂದರು.