ಕಾವೇರಿ, ಗೋದಾವರಿ, ಕೃಷ್ಣಾ, ಯಮುನಾ ಸೇರಿ ಇತರೆ ನದಿಗಳು ಕಳೆದೊಂದು ದಶಕದ ಹಿಂದೆ ಹರಿಯುತ್ತಿದ್ದಂತೆ ಈಗ ಹರಿಯುತ್ತಿಲ್ಲ. ಪವಿತ್ರ ನದಿ ಎಂದೇ ಜನಜನಿತವಾಗಿದ್ದ ಗಂಗಾ ಇಂದು ಜಗತ್ತಿನಲ್ಲಿ ಅತಿ ಹೆಚ್ಚು ಅಪಾಯಕಾರಿ ನದಿಗಳಲ್ಲಿ ಒಂದಾಗಿದೆ. ಅನ್ನದಾತ ಸಾವಿಗೆ ಶರಣಾಗುತ್ತಿದ್ದಾನೆ. ಭಾರತದ ಶೇ.25 ಭಾಗ ಮರುಭೂಮಿಯಾಗಿದೆ. ನೀರಿಗಾಗಿ ರಾಜ್ಯ ರಾಜ್ಯಗಳ ನಡುವೆ ಕಿತ್ತಾಟ ಶುರುವಾಗಿದೆ, ಹನಿ ನೀರಿಗಾಗಿ ಹಾಹಾಕಾರ ಜೋರಾಗುತ್ತಿದೆ. ನೀರಿಗಾಗಿ ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದೆ. ಇದು ಹೀಗೆಯೇ ಮುಂದುವರೆದರೆ ಮುಂದಿನ ದಿನಗಳಲ್ಲಿ ನದಿ ನೀರಿಗಾಗಿ ರಾಜ್ಯದೊಳಗೆ ಕಿತ್ತಾಡಬೇಕಾದ ಸನ್ನಿವೇಶ ಸೃಷ್ಟಿಯಾದರೂ ಆಶ್ಚರ್ಯವಿಲ್ಲ. ಈ ಹಿನ್ನೆಲೆಯಲ್ಲಿ ನದಿ ಹಾಗೂ ನದಿ ನೀರು ಸಂರಕ್ಷಿಸುವ ಬಗ್ಗೆ ಜಾಗೃತಿ ಮೂಡಿಸಲು ಇಶಾ ಫೌಂಡೇಷನ್ ಸೆ.3ರಿಂದ ಅ.2ರವರೆಗೆ ‘ನದಿಗಾಗಿ ಜಾಥಾ’ ಹಮ್ಮಿಕೊಂಡಿದೆ. ಸೆ.1ರಂದು ಆಂದೋಲನಕ್ಕೆ ಜನರನ್ನು ಆಹ್ವಾನಿಸಿ, ಕಾರ್ಯಕ್ರಮ ಉದ್ಘಾಟಿಸಲಾಗುತ್ತದೆ. ಸದ್ಗುರು ಜಗ್ಗಿ ವಾಸುದೇವ ಅವರು ಈ ಜಾಥಾದ ಮುಂದಾಳತ್ವ ವಹಿಸಿದ್ದಾರೆ. ರ್ಯಾಲಿ ಎಲ್ಲಿಂದ ಪ್ರಾರಂಭವಾಗಿ, ಎಲ್ಲೆಲ್ಲಿ ಸಾಗಲಿದೆ? ರ್ಯಾಲಿಯ ಉದ್ದೇಶವೇನು? ಜನರ ಪಾಲ್ಗೊಳ್ಳುವಿಕೆ ಹೇಗೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ
ನದಿ ಹಾಗೂ ನದಿ ನೀರು ಸಂರಕ್ಷಿಸುವ ಬಗ್ಗೆ ಜಾಗೃತಿ ಮೂಡಿಸಲು ಇಶಾ ಫೌಂಡೇಷನ್ ಸೆ.3ರಿಂದ ಅ.2ರವರೆಗೆ ‘ನದಿಗಾಗಿ ಜಾಥಾ’ ಹಮ್ಮಿಕೊಂಡಿದೆ. ಸೆ.1ರಂದು ಆಂದೋಲನಕ್ಕೆ ಜನರನ್ನು ಆಹ್ವಾನಿಸಿ, ಕಾರ್ಯಕ್ರಮ ಉದ್ಘಾಟಿಸಲಾಗುತ್ತದೆ. ಸದ್ಗುರು ಜಗ್ಗಿ ವಾಸುದೇವ ಅವರು ಈ ಜಾಥಾದ ಮುಂದಾಳತ್ವ ವಹಿಸಿದ್ದಾರೆ. ರ್ಯಾಲಿ ಎಲ್ಲಿಂದ ಪ್ರಾರಂಭವಾಗಿ, ಎಲ್ಲೆಲ್ಲಿ ಸಾಗಲಿದೆ? ರ್ಯಾಲಿಯ ಉದ್ದೇಶವೇನು? ಜನರ ಪಾಲ್ಗೊಳ್ಳುವಿಕೆ ಹೇಗೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ
ನದಿ ಉಳಿಸಿ ರ್ಯಾಲಿ ನಡೆಯೋದು ಹೇಗೆ?
ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಇಶಾ ಫೌಂಡೇಷನ್'ನಲ್ಲಿ ರ್ಯಾಯಾಲಿಗೆ ಸೆ.1ರಂದು ಚಾಲನೆ ನೀಡಲಾಗುತ್ತದೆ. ಸೆ.3ರಿಂದ 16 ರಾಜ್ಯಗಳ ಪ್ರಮುಖ ನಗರಗಳಲ್ಲಿ ಒಟ್ಟು 7 ಸಾವಿರ ಕಿ.ಮೀ. ರ್ಯಾಲಿ ಸಾಗಲಿದೆ. ರ್ಯಾಲಿಯುದ್ದಕ್ಕೂ ಸದ್ಗುರು ಭಾಗಿಯಾಗಲಿದ್ದು, ಆಯಾ ರಾಜ್ಯಗಳಲ್ಲಿ ಸಾರ್ವಜನಿಕ ಸಮಾವೇಶಗಳನ್ನು ಹಮ್ಮಿಕೊಳ್ಳಲಾಗುತ್ತದೆ. ನಾಯಕರು, ಸಿನಿಮಾ ತಾರೆಯರು, ವಿವಿಧ ಕ್ಷೇತ್ರದ ತಜ್ಞರು, ಶಾಲಾ- ಕಾಲೇಜು, ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು, ಎನ್'ಜಿಎ, ರೈತರು, ಪರಿಸರವಾದಿಗಳು ಹಾಗೂ ಆಯಾ ರಾಜ್ಯ ಸರ್ಕಾರಗಳೊಂದಿಗೆ ನದಿ ಉಳಿಸುವಿಕೆ ಬಗ್ಗೆ ಸಂವಾದ ನಡೆಯಲಿದೆ. ಈ ಮೂಲಕ ಜನರಲ್ಲಿ ನದಿ, ನೀರು ಹಾಗೂ ಪ್ರಕೃತಿ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸಿ ಅವರನ್ನು ಹುರಿದುಂಬಿಸುವ ಕೆಲಸ ಮಾಡಲಾಗುತ್ತದೆ. ರ್ಯಾಲಿಯಲ್ಲಿ ನೀರಿನ ಸಂರಕ್ಷಣೆಗೆ ಸಂಬಂಧಿಸಿದಂತೆ ಸಾರ್ವಜನಿಕರು ಯಾವುದೇ ಸಲಹೆ ನೀಡಬಹುದು. 5ರಿಂದ 7ನೇ ತರಗತಿ ಮಕ್ಕಳು ‘ನದಿಗಳ ರಕ್ಷಣೆ; ಭಾರತದ ಜೀವನ ಕ್ರಮ’ದ ಬಗ್ಗೆ 40 ಪದಗಳಲ್ಲಿ ವಿಶೇಷವಾಗಿ ಮಾತನಾಡುವ ಮೂಲಕ ಪ್ರಶಸ್ತಿಯನ್ನೂ ಗೆಲ್ಲುವ ಅವಕಾಶ ಈ ರ್ಯಾಲಿಯಲ್ಲಿದೆ. ಅ.2ರಂದು ದೆಹಲಿಯಲ್ಲಿ ಸಮಾರೋಪಗೊಳ್ಳುವ ರ್ಯಾಲಿ ಅಲ್ಲಿ ಕೇಂದ್ರ ಸರ್ಕಾರಕ್ಕೆ ‘ನದಿಗಳ ಪುನರುಜ್ಜೀವನ ನೀತಿ’ ವರದಿಯನ್ನು ಸಲ್ಲಿಸುವುದರೊಂದಿಗೆ ಸಮಾಪ್ತಿಗೊಳ್ಳುತ್ತದೆ.
ನಿರ್ವಹಣೆ ಇಲ್ಲದೆ ಕಣ್ಮರೆಯಾದ ನದಿಗಳು!
ದೇಶದಲ್ಲಿ ಹೆಚ್ಚಿದ ಜನಸಂಖ್ಯೆ ಹಾಗೂ ಅಭಿವೃದ್ಧಿಯ ಹೆಸರಿನಲ್ಲಿ ಈಗಾಗಲೇ ದೇಶದ ಹಲವು ನದಿಗಳು ಸಂಪೂರ್ಣ ಕಣ್ಮರೆಯಾಗಿ ಹೋಗಿವೆ. ಕೇರಳದಲ್ಲಿ ಭಾರತಪ್ಪುಳ, ಕರ್ನಾಟಕದಲ್ಲಿ ಕಬಿನಿ, ತಮಿಳುನಾಡಿನಲ್ಲಿ ಪಾಲಾರ್ ಮತ್ತು ವೈಗೈ, ಒಡಿಶಾದಲ್ಲಿ ಮುಸಾಲ್, ಮಧ್ಯಪ್ರದೇಶದಲ್ಲಿ ಕ್ಷಿಪ್ರಾ ಹೀಗೆ ಎಲ್ಲ ರಾಜ್ಯಗಳಲ್ಲೂ ಸಣ್ಣಪುಟ್ಟ ನದಿಗಳು ಬತ್ತಿ ಬರಿದಾಗಿ ಹೋಗಿವೆ.
ಆಂದೋಲನಕ್ಕೆ ನೀವು ಕೈಜೋಡಿಸೋದು ಹೇಗೆ?
ಸೆ.1ರಂದು (ಇಂದು) ದೇಶದ ಪ್ರಮುಖ 60 ನಗರಗಳಲ್ಲಿ ‘ನದಿಗಳನ್ನು ಉಳಿಸುವುದು ಹೇಗೆ’ ಎಂಬ ಜಾಗೃತಿ ಸಮಾವೇಶ ನಡೆಯಲಿದೆ. ಇಲ್ಲಿ ಆಯಾ ನಗರಗಳಲ್ಲಿ ಜನರು ನೀರಿನ ಸಂರಕ್ಷಣೆ, ಮಹತ್ವದ ಬಗ್ಗೆ ಜಾಗೃತಿ ಮೂಡಿಸಲಿದ್ದಾರೆ. ಯಾರು ಬೇಕಾದರೂ ಈ ರ್ಯಾಲಿಯಲ್ಲಿ ಭಾಗವಹಿಸಬಹುದು. ಆಯಾ ನಗರಗಳಲ್ಲಿ ಬೆಳಗ್ಗೆ 8ರಿಂದ 11 ಗಂಟೆಯವರೆಗೆ ಸಮಾವೇಶ ನಡೆಯಲಿದೆ. ಈ ಸಮಯದಲ್ಲಿ ಜನರು ರ್ಯಾಯಾಲಿಗೆ ತಮ್ಮ ಬೆಂಬಲ ಸೂಚಿಸಬಹುದು. ಜಾಥಾದಲ್ಲಿ ಪಾಲ್ಗೊಳ್ಳಬಯಸುವರು ಈ ವೆಬ್ಸೈಟ್ಗೆ ಹೋಗಿ ನಿಮ್ಮ ಮಾಹಿತಿ ನೋಂದಣಿ ಮಾಡಿಸಿಕೊಳ್ಳಿ. ಹೆಚ್ಚು ಜನರ ಪಾಲ್ಗೊಳ್ಳುವಿಕೆಯಿಂದ ಈ ರ್ಯಾಲಿ ಬೃಹತ್ ಆಂದೋಲನ ವಾದಾಗ ಸರ್ಕಾರ ಸರಿಯಾದ ಜಲ ನೀತಿ ರೂಪಿಸುತ್ತದೆ. ವಿವರಗಳಿಗೆ http://isha.sadhguru.org/rally-for-rivers/ ನೋಡಿ.
ಅಷ್ಟೇ ಅಲ್ಲ, ಜನರಿಗೆ 80009 80009 ಸಂಖ್ಯೆಗೆ ಮಿಸ್ ಕಾಲ್ ನೀಡಲು ಮನವಿ ಮಾಡಲಾಗಿದೆ. ಈ ಮಿಸ್ಡ್ ಕಾಲ್‌ಗಳ ಸಂಖ್ಯೆ ಸರಿಸುಮಾರು 30 ಕೋಟಿ ಮುಟ್ಟುವ ಗುರಿಯನ್ನ ಹೊಂದಲಾಗಿದೆ. ನಂತರದ ದಿನಗಳಲ್ಲಿ ದೇಶಾದ್ಯಂತ ಇರುವ ಎಲ್ಲ ನದಿಗಳ ದಡದ ಎರಡೂ ಕಡೆ 1 ಕಿ.ಮೀ. ವ್ಯಾಪ್ತಿಯಲ್ಲಿ ಹಸಿರು ಸೃಷ್ಟಿ ಮಾಡುವ ಗುರಿ ಹೊಂದಲಾಗಿದೆ.
ನದಿ ಏಕೆ ಉಳಿಸಬೇಕು? ಸದ್ಗುರು ಹೀಗೆನ್ನುತ್ತಾರೆ
ರ್ಯಾಲಿ ಫಾರ್ ರಿವರ್ಸ್ ಇದು ಪ್ರತಿಭಟನೆಯಲ್ಲ. ಇದೊಂದು ಶ್ರದ್ಧೆ, ಪ್ರಚಾರ. ಜಾಗೃತಿ ಮೂಡಿಸುವ ಅಭಿಯಾನ. ದೇಶದ ಪ್ರತಿಯೊಬ್ಬ ನಾಗರಿಕನೂ ನದಿ ನೀರಿನ ಬಳಕೆದಾರನಾಗಿದ್ದಾನೆ. ಆದ್ದರಿಂದ ನದಿಯನ್ನು ಉಳಿಸುವುದು ಎಲ್ಲರ ಕರ್ತವ್ಯ ಮತ್ತು ಜವಾಬ್ದಾರಿಯಾಗಿದೆ. ನಾಡು ಮತ್ತು ನಾವು ಚೆನ್ನಾಗಿ ಇರಬೇಕು ಎಂದರೆ ನದಿಗಳು ಚೆನ್ನಾಗಿರಬೇಕು. ವರ್ಷಪೂರ್ತಿ ತುಂಬಿ ಹರಿಯುತ್ತಿದ್ದ ನದಿಗಳು ಈಗ ಎಂಟತ್ತು ತಿಂಗಳು ಮಾತ್ರ ಹರಿಯುತ್ತಿವೆ. ಮತ್ತೆ ನದಿಗಳು ವರ್ಷದ ಹನ್ನೆರಡೂ ತಿಂಗಳು ಹರಿಯುವಂತೆ ಮಾಡಬೇಕಾಗಿದೆ. ಕಳೆದ 12 ವರ್ಷಗಳಲ್ಲಿ 3 ಲಕ್ಷಕ್ಕೂ ಹೆಚ್ಚು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬುದು ಸಾಮಾನ್ಯ ವಿಷಯವಲ್ಲ. ಭಾರತದಂತಹ ಕೃಷಿ ಪ್ರಧಾನ ದೇಶದಲ್ಲಿ ರೈತರು ನೆಮ್ಮದಿಯಾಗಿ ಇರಬೇಕು ಮತ್ತು ನಮ್ಮ ಮಕ್ಕಳು ಭವಿಷ್ಯದಲ್ಲಿ ಚೆನ್ನಾಗಿ ಇರಬೇಕು ಎಂದರೆ ನಾವು ಇಂದು ನದಿ ನೀರನ್ನು ಸಂರಕ್ಷಿಸಲೇಬೇಕು.
ಯಾವ ರಾಜ್ಯದಲ್ಲಿ ಏನು ಸಮಸ್ಯೆ?
ನದಿಗಳ ತೀರದಲ್ಲಿ ಅಭಿವೃದ್ಧಿ ಕಾಮಗಾರಿ, ಅರಣ್ಯ ನಾಶ, ನದಿ ಜಾಗ ಒತ್ತುವರಿಯಿಂದಾಗಿ ನದಿಗಳು ನಿಧಾನ ವಾಗಿ ವಿನಾಶದತ್ತ ಸಾಗುತ್ತಿವೆ. ಒಂದು ವರ್ಷ ಮಳೆ ಬಾರದಿದ್ದರೆ ಸಂಪೂರ್ಣ ಬತ್ತಿ ಹೋಗುವ ನದಿಗಳು ಮತ್ತೊಂದು ವರ್ಷದ ಮಳೆಗೆ ಪ್ರವಾಹ ಸ್ಥಿತಿ ತಂದೊಡ್ಡುತ್ತಿವೆ. ನದಿಗಳನ್ನು ಈ ಸ್ಥಿತಿಗೆ ದೂಡಿದ್ದರಿಂದ ಯಾವ ರಾಜ್ಯದಲ್ಲಿ ಯಾವೆಲ್ಲ ಸಮಸ್ಯೆಗಳು ಉಲ್ಬಣಿಸಿವೆ ಎಂಬುದರ ಮಾಹಿತಿ ಇಲ್ಲಿದೆ.
ಆಂಧ್ರಪ್ರದೇಶ: ತೀವ್ರ ಬರಗಾಲದಿಂದ ಬಸವಳಿದಿದ್ದ ಆಂಧ್ರಪ್ರದೇಶ 2009ರಲ್ಲಿ ಪ್ರವಾಹ ಪರಿಸ್ಥಿತಿಯನ್ನು ಎದುರಿಸಬೇಕಾಯಿತು. ಆ ವರ್ಷ ಕೃಷ್ಣಾ ನದಿಯಿಂದ ಉಕ್ಕಿದ ಶತಮಾನದ ದಾಖಲೆ ಪ್ರವಾಹಕ್ಕೆ 350 ಹಳ್ಳಿಯ ಜನರು ಊರು ತೊರೆಯಬೇಕಾಯಿತು.
ಬಿಹಾರ: ಬಿಹಾರ ರಾಜ್ಯದಲ್ಲೂ ಹರಿಯುವ ಗಂಗಾ ನದಿ ಬಹುತೇಕ ಖಾಲಿಯಾಗಿತ್ತು. ಬರಿದಾದ ಗಂಗೆ ಒಡಲಲ್ಲಿ ಜನ ನಡೆದಾಡುತ್ತಿದ್ದರು. ಆದರೆ, 2016ರ ಮೇನಲ್ಲಿ ಎದುರಾದ ಭೀಕರ ಪ್ರವಾಹ ಇಡೀ ರಾಜ್ಯವನ್ನೇ ತಲ್ಲಣಗೊಳಿಸಿತ್ತು.
ಗುಜರಾತ್: ನರ್ಮದಾ ನದಿ ಹಲವು ತಿಂಗಳುಗಳಿಂದ ಸಮುದ್ರ ತೀರವನ್ನು ಮುಟ್ಟಲಿಲ್ಲ. ಬದಲಾಗಿ ಸಮುದ್ರದ ಉಪ್ಪು ನೀರೇ ನದಿಗೆ ಸೇರಿತು. ನದಿ ನೀರಿನಲ್ಲಿ ಲವಣಾಂಶ ಹೆಚ್ಚಾಯಿತು.
ಕರ್ನಾಟಕ: ರಾಜ್ಯದ ಜೀವನದಿ ಕಾವೇರಿಯ ಮೂಲ ಸೆಲೆ ವರ್ಷದಿಂದ ವರ್ಷಕ್ಕೆ ಬರಿದಾಗುತ್ತಾ ಬರುತ್ತಿದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯ ಪ್ರಮಾಣ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ.
ಕೇರಳ: ಕೇರಳ ರಾಜ್ಯ ಈ ವರ್ಷ ಎದುರಿಸಿದ ಬರ 115 ವರ್ಷಗಳಲ್ಲಿಯೇ ಅತ್ಯಂತ ಭೀಕರವಾಗಿದೆ. ನದಿಗಳು ಬರಡಾದ ಕಾರಣ ಅಲ್ಲಿನ ಕೃಷಿಕರು ಗೋಳಿಡುತ್ತಿದ್ದಾರೆ.
ಮಹಾರಾಷ್ಟ್ರ: ದೇಶದ ಅತಿಉದ್ದವಾದ ನದಿಗಳಾದ ಕೃಷ್ಣಾ ಮತ್ತು ಗೋದಾವರಿ 2016ರಲ್ಲಿ ಬರಿದಾದವು. ಮಣಿಪುರ 2014ರಲ್ಲಿ ತೀವ್ರ ಬರದಿಂದಾಗಿ ಮಣಿಪುರ ನೀರಿನ ಅಭಾವ ಎದುರಿಸಬೇಕಾಯಿತು. 2009ರಲ್ಲೂ ಈ ರಾಜ್ಯ ಇದೇ ಪರಿಸ್ಥಿತಿ ಎದುರಿಸಿತ್ತು.
ತಮಿಳುನಾಡು: 140 ವರ್ಷಗಳಲ್ಲಿ ತಮಿಳುನಾಡು ಈ ವರ್ಷ ಎದುರಿಸಿದ ಬರ ಅತ್ಯಂತ ಭೀಕರವಾಗಿದೆ. ಇದರಿಂದ ಸಾವಿರಾರು ಹೆಕ್ಟೇರ್ ಪ್ರದೇಶದ ಬೆಳೆ ನಷ್ಟವಾಗಿದೆ.
ಉತ್ತರಪ್ರದೇಶ: ದೇಶದ ಪ್ರಮುಖ ನದಿಗಳಲ್ಲಿ ಒಂದಾದ ಯಮುನಾ ಸಂಪೂರ್ಣ ಬರಿದಾಗಿ, ಕೃಷಿ ಕ್ಷೇತ್ರದ ಮೇಲೆ ದೊಡ್ಡ ಪೆಟ್ಟು ನೀಡಿದೆ.
ಭವಿಷ್ಯದ ಭದ್ರತೆಗಾಗಿ ಆರಂಭವಾಗಿರುವ ಈ ರ್ಯಾಲಿ ಫಾರ್ ರಿವರ್ಸ್ ಅಭಿಯಾನಕ್ಕೆ ಜನ ಬೆಂಬಲವೇ ಅತಿಮುಖ್ಯ. 80009 80009 ಸಂಖ್ಯೆಗೆ ಮಿಸ್ ಕಾಲ್ ನೀಡಿ, ನಮ್ಮ ನದಿಗಳನ್ನ ಉಳಿಸುವ ಈ ಮಹತ್ವಾಕಾಂಕ್ಷಿ ಜಲಾಭಿಯಾನಕ್ಕೆ ಬೆಂಬಲವಾಗಿ ನಿಲ್ಲಿ.
