Asianet Suvarna News Asianet Suvarna News

ರಾಜ್ಯಸಭೆ ಚುನಾವಣೆ : ಕಾಂಗ್ರೆಸ್ ಮೂರನೇ ಅಭ್ಯರ್ಥಿ ಖಚಿತ.?

ರಾಜ್ಯಸಭಾ ಚುನಾವಣೆಯಲ್ಲಿ ಜೆಡಿಎಸ್‌ಗೆ ಬೆಂಬಲ ನೀಡುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿರೋಧ ವ್ಯಕ್ತಪಡಿಸಿದ್ದು, ಕಾಂಗ್ರೆಸ್‌ನಿಂದಲೇ ಮೂರನೇ ಅಭ್ಯರ್ಥಿಯೊಬ್ಬರನ್ನು ಕಣಕ್ಕಿಳಿಸುವ ಬಗ್ಗೆ ಒಲವು ಹೊಂದಿದ್ದಾರೆ ಎಂದು ತಿಳಿದು ಬಂದಿದೆ.

Rajya Sabha Election

ಬೆಂಗಳೂರು : ರಾಜ್ಯಸಭಾ ಚುನಾವಣೆಯಲ್ಲಿ ಜೆಡಿಎಸ್‌ಗೆ ಬೆಂಬಲ ನೀಡುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿರೋಧ ವ್ಯಕ್ತಪಡಿಸಿದ್ದು, ಕಾಂಗ್ರೆಸ್‌ನಿಂದಲೇ ಮೂರನೇ ಅಭ್ಯರ್ಥಿಯೊಬ್ಬರನ್ನು ಕಣಕ್ಕಿಳಿಸುವ ಬಗ್ಗೆ ಒಲವು ಹೊಂದಿದ್ದಾರೆ ಎಂದು ತಿಳಿದು ಬಂದಿದೆ.

ವಿಧಾನಸಭಾ ಚುನಾವಣೆಯ ಹೊಸ್ತಿಲಲ್ಲಿ ಜೆಡಿಎಸ್ ಅಭ್ಯರ್ಥಿಗೆ ಬೆಂಬಲ ನೀಡುವುದರಿಂದ ನಾವು ಮುಂಚಿತ ವಾಗಿಯೇ ಸೋಲು ಒಪ್ಪಿಕೊಂಡಿದ್ದೇವೆ ಎಂಬ ತಪ್ಪು ಸಂದೇಶ ರವಾನೆಯಾಗಬಹುದು ಎಂಬ ಆತಂಕವನ್ನೂ ಅವರು ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಒಟ್ಟು 4 ಸ್ಥಾನಗಳ ಪೈಕಿ ಎರಡು ಕಾಂಗ್ರೆಸ್ಸಿಗೆ ಮತ್ತು ಒಂದು ಬಿಜೆಪಿಗೆ ಖಚಿತವಾಗಿದ್ದು, ಮತ್ತೊಂದು ಸ್ಥಾನ ಯಾರ ಪಾಲಾಗುತ್ತದೆ ಎಂಬುದು ತೀವ್ರ ಕುತೂಹಲ ಮೂಡಿಸಿದೆ.

ಜತೆಗೆ ಪೈಪೋಟಿ ಏರ್ಪಡುವ ಸಾಧ್ಯತೆ ಯನ್ನೂ ಹೆಚ್ಚಿಸಿದೆ. ಬಿಬಿಎಂಪಿಯಲ್ಲಿ ಕಾಂಗ್ರೆಸ್ಸಿಗೆ ಬೆಂಬಲ ನೀಡಿರುವುದರಿಂದ ರಾಜ್ಯಸಭೆಯ ಒಂದು ಸ್ಥಾನಕ್ಕೆ ಕಡಿಮೆ ಬೀಳುವ ಮತಗಳ ನೆರವು ನೀಡಬೇಕು ಎಂಬ ಬೆದರಿಕೆ ರೂಪದ ಸಂದೇಶವನ್ನು ಜೆಡಿಎಸ್ ನಾಯಕರು ಕಾಂಗ್ರೆಸ್ ವರಿಷ್ಠರಿಗೆ ತಲುಪಿಸಿದ್ದಾರೆ. ಈಗಿನ ಬಿಬಿಎಂಪಿ ಆಡಳಿತ ಮತ್ತು ಮುಂಬರುವ ವಿಧಾನಸಭಾ ಚುನಾವಣೆಯ ಫಲಿತಾಂಶದ ನಂತರ ಎದುರಾಗಬಹುದಾದ ಸನ್ನಿವೇಶದಲ್ಲಿ ಜೆಡಿಎಸ್ ನೆರವು ಬೇಕಾಗಬಹುದು ಎಂಬ ಆತಂಕವನ್ನು ಕಾಂಗ್ರೆಸ್ಸಿನ ಕೆಲವು ನಾಯಕರು ವ್ಯಕ್ತಪಡಿಸಿದ್ದಾರೆ.

ಆದರೆ, ಇದನ್ನು ಒಪ್ಪದ ಸಿದ್ದರಾಮಯ್ಯ ಅವರ ಬಣವು ಯಾವುದೇ ಕಾರಣಕ್ಕೂ ಜೆಡಿಎಸ್‌ಗೆ ಬೆಂಬಲ ನೀಡುವುದು ಬೇಡ ಎಂಬ ಪಟ್ಟು ಹಿಡಿದಿದೆ. ಈ ವಿಷಯ ಅಂತಿಮವಾಗಿ ಕಾಂಗ್ರೆಸ್ ಹೈಕಮಾಂಡ್ ಮಟ್ಟದಲ್ಲೇ ಇತ್ಯರ್ಥವಾಗುವ ಸಾಧ್ಯತೆಯಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಈ ಹಿನ್ನೆಲೆಯಲ್ಲಿ ಶೀಘ್ರದಲ್ಲೇ ರಾಜ್ಯಸಭಾ ಚುನಾವಣೆಯ ಅಭ್ಯರ್ಥಿಗಳ ಕುರಿತು ಚರ್ಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ. ಬಹುತೇಕ ಮಾ.10ರಂದು ದೆಹಲಿಗೆ ತೆರಳಿ ರಾಜ್ಯಸಭೆ ಚುನಾವಣೆ ಸ್ಪರ್ಧೆ ಹಾಗೂ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.

ಸಿದ್ದು, ಪರಂ ಜತೆ ವೇಣು ಪ್ರತ್ಯೇಕ ಚರ್ಚೆ: ಈ ನಡುವೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ಅವರನ್ನು ಪ್ರತ್ಯೇಕ ವಾಗಿ ಭೇಟಿ ಮಾಡಿ ರಾಜ್ಯಸಭೆ ಚುನಾವಣೆ ಬಗ್ಗೆ ಸುದೀರ್ಘವಾಗಿ ಚರ್ಚೆ ನಡೆಸಿದರು. ಈ ವೇಳೆ ಎಷ್ಟು ಸ್ಥಾನಗಳಿಗೆ ಸ್ಪರ್ಧಿಸಬೇಕು ಹಾಗೂ ಯಾವ ಸಮುದಾಯದ ಅಭ್ಯರ್ಥಿಗಳಿಗೆ ಆದ್ಯತೆ ನೀಡಬೇಕು ಎಂಬ ಬಗ್ಗೆ ಚರ್ಚೆ ನಡೆದಿದ್ದು, ಮೂರೂ ಸ್ಥಾನಗಳಿಗೂ ಸ್ಪರ್ಧಿಸಬೇಕು ಎಂದು ತಮ್ಮ ಅಭಿಪ್ರಾಯ ವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವೇಣು ಗೋಪಾಲ್ ಬಳಿ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

Follow Us:
Download App:
  • android
  • ios