ಚೆನ್ನೈ[ಫೆ.18]: ಬರುವ ಲೋಕಸಭಾ ಚುನಾವಣೆಯಲ್ಲಿ ತಮಿಳು ಸೂಪರ್‌ಸ್ಟಾರ್‌ ರಜನೀಕಾಂತ್‌ ಅವರ ಹೊಸ ಪಕ್ಷವಾದ ‘ರಜನಿ ಮಕ್ಕಳ್‌ ಮಂದ್ರಂ’ ಸ್ಪರ್ಧಿಸಲಿದೆ ಎಂಬ ನಿರೀಕ್ಷೆ ಹುಸಿಯಾಗಿದೆ. ‘ನಾನಾಗಲಿ ನನ್ನ ಪಕ್ಷವಾಗಲಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲ್ಲ. ನಾನು ಈ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೂ ಬೆಂಬಲ ನೀಡಲ್ಲ’ ಎಂದು ಖುದ್ದು ರಜನಿ ಭಾನುವಾರ ಘೋಷಿಸಿದ್ದಾರೆ.

ಅಲ್ಲದೆ, ‘ತಮಿಳುನಾಡು ಜನರು ರಾಜ್ಯದ ನೀರಿನ ಸಮಸ್ಯೆಗೆ ಯಾರು ಶಾಶ್ವತ ಪರಿಹಾರ ಕಂಡು ಹಿಡಿಯುತ್ತಾರೋ ಅಂಥವರಿಗೆ ಮತ ಹಾಕಬೇಕು’ ಎಂದೂ ಕರೆ ಕೊಟ್ಟಿದ್ದಾರೆ.

ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿದ ರಜನಿ, ‘ನಾನು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ನನ್ನ ಗುರಿ ಏನಿದ್ದರೂ ವಿಧಾನಸಭೆ ಚುನಾವಣೆ. ನಾನು ಯಾರನ್ನೂ ಬೆಂಬಲಿಸುತ್ತಿಲ್ಲ. ರಜನಿ ಮಕ್ಕಳ್‌ ಮಂದ್ರಂ ಕೂಡ ಯಾವ ಪಕ್ಷವನ್ನೂ ಬೆಂಬಲಿಸುವುದಿಲ್ಲ. ನನ್ನ ಭಾವಚಿತ್ರ, ನನ್ನ ಪಕ್ಷದ ಧ್ವಜವನ್ನು ಚುನಾವಣಾ ಪ್ರಚಾರದ ವೇಳೆ ಯಾರೂ ಬಳಸಿಕೊಳ್ಳಬಾರದು’ ಎಂದು ಹೇಳಿದರು.

ಈ ಘೋಷಣೆಯ ನಂತರ ಭಾನುವಾರ ತಮ್ಮ ಪೋಸ್‌ ಗಾರ್ಡನ್‌ ನಿವಾಸದಲ್ಲಿ ರಜನಿ ಅವರು, ಪಕ್ಷದ ಜಿಲ್ಲಾ ಕಾರ್ಯದರ್ಶಿಗಳೊಂದಿಗೆ ಚರ್ಚೆ ನಡೆಸಿದರು ಎಂದು ಮೂಲಗಳು ಹೇಳಿವೆ.

2017ರ ಡಿಸೆಂಬರ್‌ 31ರಂದು ರಜನಿ ಅವರು ರಾಜಕೀಯ ಪ್ರವೇಶ ಘೋಷಣೆ ಮಾಡಿ, ರಜನಿ ಮಕ್ಕಳ್‌ ಮಂದ್ರಂ ಪಕ್ಷದ ಘೋಷಣೆ ಮಾಡಿದ್ದರು. ಅವರು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಬಹುದು ಎಂಬ ನಿರೀಕ್ಷೆಯನ್ನು ಅವರ ಅಭಿಮಾನಿಗಳು ಹೊಂದಿದ್ದರು.

ಆದರೆ 2021ರಲ್ಲಿ ತಮಿಳುನಾಡು ವಿಧಾನಸಭೆ ಚುನಾವಣೆ ನಡೆಯಲಿದ್ದು, ಅಲ್ಲಿಯವರೆಗೆ ರಜನಿ ಏನು ಮ್ಯಾಜಿಕ್‌ ಮಾಡುತ್ತಾರೆ ಎಂಬುದನ್ನು ನೋಡಲು ಕಾಯಲೇಬೇಕು.