ಅಭಿಮಾನಿಗಳೊಂದಿಗಿನ ಸಂವಾದ ಮತ್ತು ಫೋಟೋ ಸೆಷನ್‌ ಕಾರ್ಯಕ್ರಮದ 5ನೇ ಹಾಗೂ ಕೊನೆಯ ದಿನ ಮಾತನಾಡಿದ ರಜನೀಕಾಂತ್‌, ‘ಇಂದು ವ್ಯವಸ್ಥೆ ಭ್ರಷ್ಟವಾಗಿದೆ. ನಾವೆಲ್ಲ ಇದನ್ನು ಒಟ್ಟುಗೂಡಿ ಹೋರಾಡಿ ಬದಲಿಸಬೇಕಿದೆ. ಹೀಗಾಗಿ ಅಭಿಮಾನಿಗಳು ಕರ್ತವ್ಯ ನಿಭಾಯಿಸಬೇಕು. ಯುದ್ಧಕ್ಕೆ ಸಿದ್ಧವಾಗಬೇಕು. ಯುದ್ಧ ಆರಂಭವಾಗುವವರೆಗೂ ತಾಳ್ಮೆಯಿಂದ ಇರಬೇಕು' ಎಂದು ಹೇಳಿದರು. 

ಚೆನ್ನೈ: 3-4 ತಿಂಗಳಲ್ಲಿ ರಜನಿ ಹೊಸ ಪ್ರಾದೇಶಿಕ ಪಕ್ಷವನ್ನು ಕಟ್ಟಬಹುದು ಎಂಬ ಸುದ್ದಿ ತಮಿಳುನಾಡಿನಲ್ಲಿ ಬಲವಾಗಿ ಹಬ್ಬಿದೆ. ತಾವು ಯಾವುದೇ ಪಕ್ಷವನ್ನು ಬೆಂಬಲಿಸುವುದಿಲ್ಲ ಎಂದು ರಜನಿ ಹೇಳಿಕೊಂಡು ಬಂದಿದ್ದರು. ಹಿಂದೊಮ್ಮೆ ಜಯಲಲಿತಾ ವಿರುದ್ಧ ಹೇಳಿಕೆ ನೀಡಿ ಎಐಎಡಿಎಂಕೆ ಸೋಲಿಗೆ ಕಾರಣರಾಗಿದ್ದ ರಜನಿ, ನಂತರ ಬಹಿರಂಗವಾಗಿ ಯಾವುದೇ ಪಕ್ಷದ ಜೊತೆ ಗುರುತಿಸಿಕೊಂಡಿರಲಿಲ್ಲ. ಆದರೆ ಇತ್ತೀಚಿನ ವಿಧಾನಸಭಾ ಉಪಚುನಾವಣೆ ವೇಳೆ ರಜನಿ ಮನೆಗೆ ಬಿಜೆಪಿ ಅಭ್ಯರ್ಥಿ ಭೇಟಿ ನೀಡಿದ್ದು ಕುತೂಹಲ ಮೂಡಿಸಿತ್ತು.

ಜೊತೆಗೆ ಪ್ರಧಾನಿ ಮೋದಿ ಆಡಳಿತವನ್ನು ರಜನಿ ಹಲವು ಬಾರಿ ಹೊಗಳಿದ್ದು, ಅವರು ಬಿಜೆಪಿ ಸೇರಬಹುದು ಎಂಬ ಊಹಾಪೋಹಕ್ಕೆ ಕಾರಣವಾಗಿತ್ತು. ಆದರೆ ಇಂಥ ವದಂತಿ ಬಂದಾಗಲೆಲ್ಲಾ ತಾವು ಯಾವುದೇ ರಾಜಕೀಯ ಪಕ್ಷವನ್ನು ಸೇರುವುದಿಲ್ಲ ಎಂದು ರಜನಿ ಹೇಳಿಕೊಂಡೇ ಬಂದಿದ್ದರು. ಆದರೆ ರಜನಿಗೆ ಆಪ್ತರಾಗಿರುವ ಆರ್‌ಎಸ್‌ಎಸ್‌ ಚಿಂತಕ ಗುರುಮೂರ್ತಿ ಅವರು ರಜನಿಗೆ ಹೊಸ ರಾಜಕೀಯ ಪಕ್ಷ ಕಟ್ಟುವಂತೆ ಸಲಹೆ ನೀಡಿದ್ದಾರೆ. ಹೀಗಾಗಿ ಅವರು ಮುಂದಿನ 3-4 ತಿಂಗಳಲ್ಲಿ ಹೊಸ ಪಕ್ಷ ಕಟ್ಟಬಹುದು ಎಂಬ ಸುದ್ದಿಗಳು ತಮಿಳುನಾಡಿನಲ್ಲಿ ಹರಿದಾಡುತ್ತಿದೆ. ನೇರವಾಗಿ ಯಾವುದೇ ರಾಷ್ಟ್ರೀಯ ಪಕ್ಷ ಸೇರುವ ಬದಲು ತಮ್ಮದೇ ಆದ ಪಕ್ಷ ಸ್ಥಾಪಿಸಿದರೆ ಆಗ ರಜನಿಗೆ ಹೆಚ್ಚಿನ ಬೆಂಬಲ ವ್ಯಕ್ತವಾಗುತ್ತದೆ ಎನ್ನುವುದು ಈ ಸಲಹೆಯ ಹಿಂದಿನ ರಣತಂತ್ರವಾಗಿದೆ ಎನ್ನಲಾಗಿದೆ.

ಯುದ್ಧಕ್ಕೆ ಸಿದ್ಧರಾಗಿ:
ಅಭಿಮಾನಿಗಳೊಂದಿಗಿನ ಸಂವಾದ ಮತ್ತು ಫೋಟೋ ಸೆಷನ್‌ ಕಾರ್ಯಕ್ರಮದ 5ನೇ ಹಾಗೂ ಕೊನೆಯ ದಿನ ಮಾತನಾಡಿದ ರಜನೀಕಾಂತ್‌, ‘ಇಂದು ವ್ಯವಸ್ಥೆ ಭ್ರಷ್ಟವಾಗಿದೆ. ನಾವೆಲ್ಲ ಇದನ್ನು ಒಟ್ಟುಗೂಡಿ ಹೋರಾಡಿ ಬದಲಿಸಬೇಕಿದೆ. ಹೀಗಾಗಿ ಅಭಿಮಾನಿಗಳು ಕರ್ತವ್ಯ ನಿಭಾಯಿಸಬೇಕು. ಯುದ್ಧಕ್ಕೆ ಸಿದ್ಧವಾಗಬೇಕು. ಯುದ್ಧ ಆರಂಭವಾಗುವವರೆಗೂ ತಾಳ್ಮೆಯಿಂದ ಇರಬೇಕು' ಎಂದು ಹೇಳಿದರು. 

‘ಹಿಂದಿನ ಕಾಲದಲ್ಲಿ ರಾಜರುಗಳು ಭಾರೀ ಸೈನ್ಯವನ್ನು ಕಟ್ಟುತ್ತಿರಲಿಲ್ಲ. ಆದರೆ ಅಗತ್ಯ ಪರಿಸ್ಥಿತಿ ಬಂದಾಗ, ದೇಶದಲ್ಲಿರುವ ಎಲ್ಲ ನಾಗರಿಕರು ತಮ್ಮ ತಾಯ್ನಾಡಿನ ಉಳಿವಿಗಾಗಿ ಹೋರಾಟಕ್ಕೆ ನಿಲ್ಲುತ್ತಿದ್ದರು. ಯುದ್ಧ ಬಂದಾಗ ಅವರು ತಮ್ಮ ತಾಯ್ನಾಡಿನ ರಕ್ಷಣೆಗೆ ಮುಂದಾಗುತ್ತಿದ್ದರು. ನಿಮ್ಮ ಹಾಗೇ ನನಗೂ ವೃತ್ತಿ, ಕೆಲಸ, ಕರ್ತವ್ಯಗಳಿವೆ. ನಿಮ್ಮ ಪ್ರದೇಶಗಳಿಗೆ ಮರಳಿ, ನಿಮ್ಮ ಕೆಲಸ ಕಾರ್ಯಗಳಲ್ಲಿ ನಿರತರಾಗಿರಿ. ಯುದ್ಧ ಬಂದಾಗ ಅದನ್ನು ಎದುರಿಸೋಣ' ಎಂದು ಅಭಿಮಾನಿಗಳ ಭಾರೀ ಚಪ್ಪಾಳೆಯ ನಡುವೆ ರಜನಿ ಮಾರ್ಮಿಕವಾಗಿ ನುಡಿದರು.

ಜನರು ರಾಜಕೀಯ ಮತ್ತು ಪ್ರಜಾಸತ್ತೆಯನ್ನು ನೋಡುವ ದೃಷ್ಟಿಕೋನ ಬದಲಾಗಿದೆ. ಈ ಬಗ್ಗೆ ಪ್ರತಿಯೊಬ್ಬರೂ ಚಿಂತಿಸಬೇಕಾಗಿದೆ. ವ್ಯವಸ್ಥೆ ಬದಲಾಗಲೇಬೇಕು ಎಂಬ ಗೂಢಾರ್ಥದ ಕರೆ ನೀಡಿದ ರಜನಿ, ಜನರು ವಿಚಾರ ಬದಲಿಸಿದಾಗ ಮಾತ್ರ ಅಭಿವೃದ್ಧಿಯಾಗಲು ಸಾಧ್ಯ ಎಂದರು. ‘ವ್ಯವಸ್ಥೆ ಕೊಳೆತು ನಾರುತ್ತಿದೆ. ನಾವು ವ್ಯವಸ್ಥೆಯನ್ನು ಬದಲಾಯಿಸಲೇ ಬೇಕಾಗಿದೆ' ಎಂದು ಅವರು ತಿಳಿಸಿದರು. 

ವಿಪಕ್ಷ ನಾಯಕ ಎಂ.ಕೆ. ಸ್ಟಾಲಿನ್‌ ಅವರನ್ನು ಉತ್ತಮ ಆಡಳಿತಗಾರ ಎಂದು ಶ್ಲಾಘಿಸಿದ ರಜನಿ, ‘ಹೌದು, ಎಂ.ಕೆ. ಸ್ಟಾಲಿನ್‌'ರಂಥ ಅತ್ಯುತ್ತಮ ದಕ್ಷ ಆಡಳಿತರಾರರು ಇದ್ದಾರೆ. ಚೋ ರಾಮಸ್ವಾಮಿ ಅವರು ನನಗೆ ಯಾವಾಗಲೂ ಒಂದು ಮಾತು ಹೇಳುತ್ತಿದ್ದರು. ಸ್ಟಾಲಿನ್‌'ಗೆ ಮುಕ್ತ ಅಧಿಕಾರ ಚಲಾಯಿಸುವ ಹಕ್ಕು ನೀಡಿದರೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಾರೆ ಎನ್ನುತ್ತಿದ್ದರು' ಎಂದರು.

ಪಿಎಂಕೆ ಮುಖಂಡ ಅನ್ಬುಮಣಿ ರಾಮದಾಸ್‌ ಅವರನ್ನೂ ರಜನಿ ಹೊಗಳಿದರು. ‘ರಾಮದಾಸ್‌ ಓರ್ವ ಅತ್ಯಂತ ಸುಶಿಕ್ಷಿತ ವ್ಯಕ್ತಿ, ಅವರು ಆಧುನಿಕ ಯೋಚನೆಯುಳ್ಳ ಬುದ್ಧಿವಂತ. ಅವರ ಬಳಿ ಒಳ್ಳೆಯ ಯೋಜನೆಗಳಿವೆ. ರಾಷ್ಟ್ರೀಯ ಪಕ್ಷಗಳೂ ಉತ್ತಮ ಚಿಂತನೆ ಹೊಂದಿವೆ' ಎಂದೂ ರಜನಿ ಅವರು ಬಿಜೆಪಿ ಸೇರುವ ಊಹಾಪೋಹದ ನಡುವೆಯೇ ಹೇಳಿದರು. ಬೀಜಗಳನ್ನು ಸರಿಯಾಗಿ ಬಿತ್ತಿ ನೀರು ಹಾಕಿದರೆ ಮಾತ್ರ ಸಸ್ಯ ಬೆಳೆಯುತ್ತದೆ ಎಂದು ಹೇಳುವ ಮೂಲಕ ಇನ್ನಷ್ಟು ಕುತೂಹಲ ಮೂಡಿಸಿದರು.

epaper.kannadaprabha.in