ಮನೆಯವರೆದುರೇ ಅಪ್ರಾಪ್ತ ಬಾಲಕಿಯನ್ನು ಥಳಿಸಿ ಕಿಡ್ನಾಪ್?

news | Tuesday, January 23rd, 2018
Suvarna Web Desk
Highlights

ಅಪರಿಚಿತ ಯುವಕರು ಅಪ್ರಾಪ್ತ ವಯಸ್ಕಳೋರ್ವಳನ್ನು ಒತ್ತಾಯಪೂರ್ವಕವಾಗಿ ಎಳೆದೊಯ್ಯುತ್ತಿರುವ ಮತ್ತು ಬಾಲಕಿಯ ತಾಯಿಯನ್ನು ಥಳಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ರಾಜಸ್ಥಾನ (ಜ.23): ಅಪರಿಚಿತ ಯುವಕರು ಅಪ್ರಾಪ್ತ ವಯಸ್ಕಳೋರ್ವಳನ್ನು ಒತ್ತಾಯಪೂರ್ವಕವಾಗಿ ಎಳೆದೊಯ್ಯುತ್ತಿರುವ ಮತ್ತು ಬಾಲಕಿಯ ತಾಯಿಯನ್ನು ಥಳಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಈ ವಿಡಿಯೋದ ಕೆಳಗೆ ‘ಈ ವಿಡಿಯೋ ರಾಜಸ್ಥಾನದ್ದಾಗಿದ್ದು, ಅಪ್ರಾಪ್ತೆಯ ಮೇಲೆ ದೌರ್ಜನ್ಯವೆಸಗಿ, ಬಾಲಕಿಯ ತಾಯಿಯನ್ನು ಥಳಿಸಿ ಅಪಹರಣ ಮಾಡಿ ಟ್ರ್ಯಾಕ್ಟರ್‌ನಲ್ಲಿ ಹೊತ್ತೊಯ್ದಿದ್ದಾರೆ. ಇಷ್ಟೆಲ್ಲಾ ನಡೆದಿದ್ದರೂ ಅಲ್ಲಿನ ಸ್ಥಳೀಯ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ಈ ಸಂದೇಶವನ್ನು ಶೇರ್ ಮಾಡಿ ಬಡ ನಿರ್ಗತಿಕ ಕುಟುಂಬಕ್ಕೆ ಸಹಾಯ ಮಾಡಿ’ ಎಂದು ಬರೆಯಲಾಗಿದೆ. ಆದರೆ ನಿಜಕ್ಕೂ ರಾಜಸ್ಥಾನದಲ್ಲಿ ಈ ರೀತಿ ನಡೆದಿತ್ತೇ, ನಿಜಕ್ಕೂ ಹುಡುಗಿಯೊಬ್ಬಳನ್ನು ಅಪಹರಣ ಮಾಡಲಾಗಿತ್ತೇ ಎಂದು ಹುಡುಕ ಹೊರಟಾಗ ಬಯಲಾದ ಸತ್ಯವೇ ಬೇರೆ.

ಈ ವಿಡಿಯೋ  ಈಗಿನದ್ದಲ್ಲ. ನವೆಂಬರ್ 2017 ರ ವಿಡಿಯೋ ಇದು. ಈ ಘಟನೆ ನಡೆದಿದ್ದು ರಾಜಸ್ಥಾನದ ಜೋದ್‌'ಪುರದಲ್ಲಿ. ವಾಸ್ತವವಾಗಿ ವಿಡಿಯೋದಲ್ಲಿರುವ ಅಪ್ರಾಪ್ತಗೆ ಆಕೆಯ ತಾಯಿಯೇ ಮದುವೆ ಮಾಡಿಸಿದ್ದು, ಮಗಳಿಗೆ 18 ವರ್ಷ ತುಂಬುವವರೆಗೂ ಪತಿಯೊಂದಿಗೆ ಕಳಿಸುವುದಿಲ್ಲ ಎಂದಾಗ ಬಾಲಕಿಯ ಪತಿ ಆಕೆಯ ತಾಯಿಗೆ ಥಳಿಸಲು ಮುಂದಾಗಿರುವ ವಿಡಿಯೋ ಇದು. ಅತನ ಇಬ್ಬರು ಸ್ನೇಹಿತರು ಅವನೊಂದಿಗೆ ಬಂದಿರುತ್ತಾರೆ. ಪ್ರಕರಣ ಈಗಾಗಲೇ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು,  ಆರೋಪಿಗಳನ್ನು ಬಂಧಿಸಲಾಗಿದೆ. ಹಾಗಾಗಿ ರಾಜಸ್ಥಾನದಲ್ಲಿ ಬಾಲಕಿಯ ತಾಯಿಯನ್ನು ತಳಿಸಿ, ಅಪ್ರಾಪ್ತ ಬಾಲಕಿಯನ್ನು ಅಪಹರಣ ಮಾಡಿದ್ದರೂ ಅಲ್ಲಿನ ಸ್ಥಳೀಯ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುದ್ದಿ ಸುಳ್ಳು.

 

Comments 0
Add Comment

    ರಿಸ್ಕ್ ಡಿಕೆಶಿಗೆ ಖಡಕ್ ವಾರ್ನಿಂಗ್ : ಶ್ಲಾಘನೆ ನಂತರ ಎಚ್ಚರಿಕೆ

    karnataka-assembly-election-2018 | Thursday, May 24th, 2018