ಜೈಪುರ(ಸೆ.19]: ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ರೈತರ ಪೂರ್ಣ ಸಾಲ ಮನ್ನಾ ಮಾಡುವುದಾಗಿ ಹೇಳಿದ್ದ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಭರವಸೆಗೆ ಟಾಂಗ್‌ ನೀಡಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ, ರಾಹುಲ್‌ ಗಾಂಧಿ ಅವರಿಗೆ ಮುಂಗಾರು ಮತ್ತು ಹಿಂಗಾರು ಬೆಳೆಗಳ ಬಗ್ಗೆ ಗೊತ್ತಿರುವುದೇ ಅನುಮಾನ ಎಂದು ವ್ಯಂಗ್ಯವಾಡಿದ್ದಾರೆ.

ಶೀಘ್ರದಲ್ಲೇ ಚುನಾವಣೆ ಎದುರಾಗಲಿರುವ ರಾಜಸ್ಥಾನದ ನಾಗೌರ್‌ ಜಿಲ್ಲೆಯಲ್ಲಿ ರೈತರ ಸಮಾವೇಶವೊಂದನ್ನು ಉದ್ದೇಶಿಸಿ ಮಾತನಾಡಿದ ಅಮಿತ್‌ ಶಾ, ಕಾಂಗ್ರೆಸ್‌ ರೈತರ ಹಿತಾಸಕ್ತಿಯನ್ನು ಕಾಪಾಡುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದರು. ಪ್ರಧಾನಿ ಮೋದಿ ಅವರು ಕೇವಲ ಚುನಾವಣೆಯ ದೃಷ್ಟಿಯಿಂದ ಘೋಷಣೆಗಳನ್ನು ನೀಡುವುದಿಲ್ಲ. ಆದರೆ, ಅದನ್ನು ಹೇಗೆ ಅನುಷ್ಠಾನಗೊಳಿಸಬೇಕು ಎಂಬುದು ಗೊತ್ತಿದೆ. ಕಾಂಗ್ರೆಸ್‌ ಜೈ ಜವಾನ್‌, ಜೈ ಕಿಸಾನ್‌ ಘೋಷಣೆಯನ್ನು ಅನುಷ್ಠಾನಗೊಳಿಸಲು ವಿಫಲವಾಗಿದೆ ಎಂದು ಹೇಳಿದರು.

ಸೋಮವಾರ ಮಧ್ಯಪ್ರದೇಶದಲ್ಲಿ ರೋಡ್‌ ಶೋ, ರಾರ‍ಯಲಿ ನಡೆಸಿದ್ದ ರಾಹುಲ್‌ ಗಾಂಧಿ, ರೈತರ ಪರವಾದ ಹಲವು ವಿಷಯ ಪ್ರಸ್ತಾಪಿಸಿದ್ದರು.