ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟ ಜಾನಪದ ನೃತ್ಯ ಕಲಾವಿದ| ರಾಜಸ್ಥಾನದ ನೃತ್ಯ ಕಲಾವಿದ ಕ್ವೀನ್ ಹರೀಶ್ ಸೇರಿ ನಾಲ್ವರ ದುರ್ಮರಣ| ಜೋಧಪುರ್ ರಾಷ್ಟ್ರೀಯ ಹೆದ್ದಾರಿ ಬಳಿ ಟ್ರಕ್ ಗೆ ಗುದ್ದಿದ ಎಸ್ ಯುವಿ ಕಾರು| ಕ್ವೀನ್ ಹರೀಶ್ ಎಂದೇ ಪ್ರಸಿದ್ಧರಾಗಿದ್ದ ಹರೀಶ್ ಕುಮಾರ್| ಕ್ವೀನ್ ಹರೀಶ್ ಸಾವಿಗೆ ಸಿಎಂ ಅಶೋಕ್ ಗೆಹ್ಲೋಟ್ ಕಂಬನಿ|
ಜೋಧಪುರ್(ಜೂ.02): ಭೀಕರ ರಸ್ತೆ ಅಪಘಾತದಲ್ಲಿ ರಾಜಸ್ಥಾನದ ಪ್ರಸಿದ್ಧ ಜಾನಪದ ನೃತ್ಯ ಕಲಾವಿದ ಕ್ವೀನ್ ಹರೀಶ್ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ.
ಇಲ್ಲಿನ ಜೋಧಪುರ್ ರಾಷ್ಟ್ರೀಯ ಹೆದ್ದಾರಿ ಬಳಿಯ ಕಪರ್ದಾ ಗ್ರಾಮದ ಸಮೀಪ ಕ್ವೀನ್ ಹರೀಶ್ ಇದ್ದ ಎಸ್‌ಯುವಿ ಕಾರು ಟ್ರಕ್‌ವೊಂದಕ್ಕೆ ಗುದ್ದಿದ ಪರಿಣಾಮ ಕ್ವೀನ್ ಹರೀಶ್ ಸೇರಿದಂತೆ ಇತರ ಮೂವರು ಕಲಾವಿದರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಜೈಸಲ್ಮೇರ್ ನಿಂದ ಅಜ್ಮೇರ್‌ಗೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಈ ಕಲಾವಿದರು ತೆರಳುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಟ್ರಕ್‌ಗೆ ರಭಸದಿಂದ ಗುದ್ದಿದ ಪರಿಣಾಮ, ಕ್ವೀನ್ ಹರೀಶ್, ರವೀಂದ್ರ, ಬಿಖೇ ಖಾನ್ ಮತ್ತು ಲತೀಫ್ ಖಾನ್ ಸ್ಥಳದಲ್ಲೇ ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಇನ್ನು ಕ್ವೀನ್ ಹರೀಶ್ ಸಾವಿಗೆ ದು:ಖ ವ್ಯಕ್ತಪಡಿಸಿರುವ ಸಿಎಂ ಅಶೋಕ್ ಗೆಹ್ಲೋಟ್, ತಮ್ಮ ಜಾನಪದ ನೃತ್ಯದ ಮೂಲಕ ವಿಶ್ವದ ಮುಂದೆ ರಾಜಸ್ಥಾನದ ಘನತೆಯನ್ನು ಎತ್ತಿ ಹಿಡಿದಿದ್ದ ಕಲಾವಿದನ ಸಾವಿನಿಂದ ರಾಜ್ಯಕ್ಕೆ ಭಾರೀ ನಷ್ಟವಾಗಿದೆ ಎಂದು ಕಂಬನಿ ಮಿಡಿದಿದ್ದಾರೆ.
ಕ್ವೀನ್ ಹರೀಶ್ ಎಂದೇ ಪ್ರಸಿದ್ಧರಾದ ಹರೀಶ್ ಕುಮಾರ್, ರಾಜಸ್ಥಾನದ ಜಾನಪದ ನೃತ್ಯಗಳಾದ ಘೂಮರ್, ಕಲಬೇಲಿಯಾ, ಚಾಂಗ್, ಭವಾಯಿ ನೃತ್ಯಗಳನ್ನು ವಿಶ್ವಕ್ಕೆ ಪರಿಚಯಿಸಿದ ಕೀರ್ತಿಗೆ ಭಾಜನರಾಗಿದ್ದರು.
