ವಿವಿಧ ಪದಾರ್ಥಗಳ ಬೆಲೆ ಏರಿಳಿತದಿಂದ ಕಂಗೆಟ್ಟಿದ್ದ ಜನತೆಗೆ ಈಗ ತರಕಾರಿ ಬೆಲೆ ಕೊಂಚ ಇಳಿಕೆಯಾಗುತ್ತಿರುವುದು ಸಮಾಧಾನ ತಂದಿದೆ. ಕೆಲ ದಿನಗಳ ಹಿಂದೆ ಕೆ.ಜಿ.ಗೆ 80 ರಿಂದ 120ರವರೆಗೂ ಬೆಲೆ ಕುದುರಿಸಿಕೊಂಡಿದ್ದ ಬೀನ್ಸ್ ಕೆ.ಜಿ.ಗೆ 30ರಿಂದ 50ರವರೆಗೆ ದೊರೆಯುತ್ತಿದೆ.
ಬೆಂಗಳೂರು(ನ.27): ಕೆಲ ದಿನಗಳಿಂದ ಜನಸಾಮಾನ್ಯರನ್ನು ಕಂಗೆಡಿಸಿದ್ದ ಕೆಲ ತರಕಾರಿಗಳ ದರದಲ್ಲಿ ಇಳಿಕೆಯಾಗಿದೆ. ಆದರೆ, ಮಳೆಯ ಅಭಾವ, ಬೆಳೆ ನಷ್ಟದಿಂದ ಈರುಳ್ಳಿ, ಕ್ಯಾರೇಟ್ ದರ ಏರುಗತಿಯಲ್ಲಿ ಸಾಗಿದೆ. ಈ ಹಿಂದೆ ಸತತವಾಗಿ ಸುರಿದ ಭರ್ಜರಿ ಮಳೆಗೆ ತರಕಾರಿ ಬೆಳೆಗಳು ನೆಲಕಚ್ಚಿದ್ದವು. ಅಲ್ಲದೆ ಮಳೆ ಯಿಂದ ಹುಳು ಭಾದೆ, ವಿವಿಧ ರೋಗಗಳಿಗೂ ತುತ್ತಾಗಿದ್ದವು. ಇದರಿಂದ ಇಳುವರಿ ಕುಂಠಿತಗೊಂಡಿದ್ದ ಪರಿಣಾಮ ಹಲವು ಬಗೆಯ ತರಕಾರಿಗಳ ಬೆಲೆ 50ರಿಂದ 60 ರೂ. ಗಡಿ ದಾಟಿದ್ದವು. ಇನ್ನೊಂದೆಡೆ ಮೊಟ್ಟೆ ಉದ್ಯಮದಲ್ಲಿ ಶೇ.10ರಷ್ಟು ಉತ್ಪಾದನೆ ಕಡಿಮೆಯಾದ್ದರಿಂದ ಮೊಟ್ಟೆ ಬೆಲೆಯಲ್ಲೂ ವ್ಯತ್ಯಾಸವುಂಟಾಗಿತ್ತು. ಹೀಗೆ ವಿವಿಧ ಪದಾರ್ಥಗಳ ಬೆಲೆ ಏರಿಳಿತದಿಂದ ಕಂಗೆಟ್ಟಿದ್ದ ಜನತೆಗೆ ಈಗ ತರಕಾರಿ ಬೆಲೆ ಕೊಂಚ ಇಳಿಕೆಯಾಗುತ್ತಿರುವುದು ಸಮಾಧಾನ ತಂದಿದೆ. ಕೆಲ ದಿನಗಳ ಹಿಂದೆ ಕೆ.ಜಿ.ಗೆ 80 ರಿಂದ 120ರವರೆಗೂ ಬೆಲೆ ಕುದುರಿಸಿಕೊಂಡಿದ್ದ ಬೀನ್ಸ್ ಕೆ.ಜಿ.ಗೆ 30ರಿಂದ 50ರವರೆಗೆ ದೊರೆಯುತ್ತಿದೆ.
ಬೆಂಗಳೂರಿನ ಸುತ್ತಮುತ್ತಲ ಪ್ರದೇಶಗಳಲ್ಲಿ ಅವರೇಕಾಯಿಯನ್ನು 500ರಿಂದ 600 ಎಕರೆಗಳಲ್ಲಿ ಬೆಳೆಯಲಾಗುತ್ತದೆ. ಕಳೆದ ವರ್ಷಕ್ಕೆ ಹೋಲಿಸಿದ್ದಲ್ಲಿ ಈ ಬಾರಿ ಶೇ.10ರಿಂದ 15ಕ್ಕಿಂತ ಹೆಚ್ಚು ಇಳುವರಿ ಬಂದಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಅವರೇ ಕಾಯಿ 30 - 50 ರವರೆಗೂ ಬೆಲೆ ಕುದುರಿಸಿಕೊಂಡಿದೆ. ಮುಂಬರುವ ದಿನಗಳಲ್ಲಿ ಬೆಲೆ ಕಡಿಮೆಯಾಗಲಿದೆ. ಬಟಾಣಿ ಬೆಳೆಯಲು ರೈತರು ಹೆಚ್ಚು ಆಸಕ್ತಿ ವಹಿಸುವುದಿಲ್ಲ. ಹಾಗಾಗಿ ಹುಬ್ಬಳ್ಳಿ, ಧಾರವಾಡ, ಬೆಳಗಾವಿಯಿಂದ ತರಿಸಲಾಗುತ್ತಿದೆ. ಅಲ್ಲಿಯೂ ಹೇಳಿಕೊಳ್ಳುವಷ್ಟು ಫಸಲು ಬಂದಿಲ್ಲದ್ದರಿಂದ ಬೆಲೆ ಅಧಿಕವಾಗಿದೆ ಎಂದು ಹಾಪ್'ಕಾಮ್ಸ್'ನ ವ್ಯವಸ್ಥಾಪಕ ನಿರ್ದೇಶಕರಾದ ಡಾ.ವಿಶ್ವನಾಥ್ ತಿಳಿಸಿದರು.
ನಾಸಿಕ್‌ನಿಂದ ಈರುಳ್ಳಿ: ಕರ್ನಾಟಕದಲ್ಲಿ ಮಳೆಯಿಂದ ಈರುಳ್ಳಿ ಬೆಳೆಗೆ ಹಾನಿಯಾಗಿದೆ. ಮಹಾರಾಷ್ಟ್ರದ ನಾಸಿಕ್‌ನಿಂದ ಈರುಳ್ಳಿ ತರಿಸಿಕೊಳ್ಳಲಾಗುತ್ತಿದೆ. ಮಹಾರಾಷ್ಟ್ರದಲ್ಲಿ ಈರುಳ್ಳಿ ಕೆ.ಜಿ.ಗೆ 50ರಿಂದ 55 ರೂ.ಗೆ ಖರೀದಿಯಾಗುತ್ತಿದ್ದು, ರಾಜ್ಯದಲ್ಲೂ ಬೆಲೆ ಹೆಚ್ಚಿದೆ. ಇನ್ನೂ ಬೀಟ್‌ರೂಟ್, ಕ್ಯಾರೆಟ್ ಅನ್ನು ಊಟಿಯಿಂದ ಸರಬರಾಜು ಮಾಡಿಕೊಳ್ಳಲಾಗುತ್ತಿದೆ. ಈ ವರ್ಷ ಟೊಮೆಟೋ ಬೆಳೆ ಉತ್ತಮವಾಗಿದ್ದು, ಮಾರುಕಟ್ಟೆಯಲ್ಲಿ ಬೆಲೆ ಇಳಿಕೆಯಾಗುತ್ತಿದೆ ಎಂದು ಅವರು ಹೇಳಿದರು.
ಕೆ.ಆರ್.ಮಾರುಕಟ್ಟೆಯಲ್ಲಿ ಸೌತೇಕಾಯಿ ಬೆಲೆ ಯಲ್ಲೂ ಭಾರೀ ವ್ಯತ್ಯಾಸವಾಗಿದೆ. ಹದಿನೈದು ದಿನಗಳ ಹಿಂದೆ ಸೌತೇಕಾಯಿ ಒಂದು ಮೂಟೆಗೆ 1300 ಬೆಲೆ ಇತ್ತು. ಈಗ 150 ರಿಂದ 200ಕ್ಕೆ ಇಳಿಕೆ ಕಂಡಿದೆ. ಫಾರಂ ಸೌತೇಕಾಯಿ ಮೂಟೆಯೊಂದಕ್ಕೆ 400 ಖರೀದಿಯಾಗುತ್ತಿದೆ. ಬೀದಿ ಬದಿ ವ್ಯಾಪಾರಿಗಳು ಸೌತೇಕಾಯಿಯನ್ನು ಕೆ.ಜಿ.ಗೆ 20ಕ್ಕೆ ಮಾರಾಟ ಮಾಡುತ್ತಿದ್ದಾರೆ. ನೂರರ ಗಡಿದಾಟಿದ್ದ ಬಗೆ ಬಗೆಯ ಸೊಪ್ಪುಗಳ ಬೆಲೆ ಕಡಿಮೆಯಾಗಿದೆ. ಕೆ.ಆರ್.ಮಾರುಕಟ್ಟೆಯಲ್ಲಿ ಮೆಂತ್ಯೆ ನೂರು ಕಟ್ಟಿಗೆ 400- 500 (ದಪ್ಪ ಕಟ್ಟು 5-4 ರು), ಪಾಲಕ್ ಸೊಪ್ಪು 13 ಜೋಡಿಗೆ 50, ಸಬ್ಬಸಿಗೆ ಒಂದು ಕಟ್ಟಿಗೆ 2-2.5 ಇದ್ದರೆ ಹೊರಗೆ 5 ರು. ಮಾರಾಟಗೊಳ್ಳುತ್ತಿದೆ. ನಾಟಿ ಕೊತ್ತಂಬರಿ 6ರಿಂದ 8, ಫಾರಂ 5, ದಂಟಿನ ಸೊಪ್ಪು 24 ಕಟ್ಟುಗಳಿಗೆ 40-50, ಗೋರಿಕಾಯಿ ಕೆ.ಜಿ.ಗೆ 12 ಮಾರಾಟವಾಗುತ್ತಿದೆ.
ವಿವಿಧ ಪ್ರದೇಶಗಳಲ್ಲಿ ಖರ್ಚು-ವೆಚ್ಚ ನೋಡಿಕೊಂಡು ಬೆಲೆ ನಿಗದಿ ಮಾಡಲಾಗುತ್ತದೆ ಎನ್ನುತ್ತಾರೆ ವ್ಯಾಪಾರಿಗಳು. ಡಿಸೆಂಬರ್ ಮಾಸ ಬರುತ್ತಿದ್ದು, ಇನ್ನೂ ಅವರೇ ಕಾಯಿ ಬೆಳೆ ಮಾರುಕಟ್ಟೆಗೆ ಆಗಮಿಸುತ್ತಿದೆ. ಇದರಿಂದ ಸೊಗಡು ಅವರೆಕಾಯಿಗೆ ಬೇಡಿಕೆ ಕುದುರಲಿದೆ. ಮುಂಬರುವ ದಿನಗಳಲ್ಲಿ ತರಕಾರಿಗಳ ಬೆಲೆ ಇನ್ನಷ್ಟು ಕಡಿಮೆಯಾಬಹುದು. ಅವರೆಕಾಯಿ ಕೆ.ಜಿ. 60 ರು, ಬಟಾಟಿ ಕೆ.ಜಿ.ಗೆ 50-60 ರು. ಬೆಲೆ ಇದೆ ಎನ್ನುತ್ತಾರೆ ಮೈಸೂರು ಬ್ಯಾಂಕ್ ಬಳಿಯ ತರಕಾರಿ ವ್ಯಾಪಾರಿ ದೇವಿ.
