ರಾಜ್ಯದಲ್ಲಿ ಮುಂದಿನ ಎರಡು ಮೂರು ದಿನಗಳ ಕಾಲ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. 

ಬೆಂಗಳೂರು : ರಾಜ್ಯದ ದಕ್ಷಿಣ ಒಳನಾಡು ಮತ್ತು ಮಲೆನಾಡು ಭಾಗದಲ್ಲಿ ಮುಂದಿನ ಎರಡು-ಮೂರು ದಿನ ಗುಡುಗು, ಮಿಂಚು ಸಹಿತ ಸಾಧಾರಣ ಮಳೆ ಆಗಲಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (ಕೆಎಸ್‌ಎನ್‌ಡಿಎಂಸಿ) ಮಾಹಿತಿ ನೀಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕಳೆದ ನಾಲ್ಕೈದು ದಿನಗಳಿಂದ ದಕ್ಷಿಣ ಒಳನಾಡು ಸೇರಿದಂತೆ ವಿವಿಧ ಭಾಗದಲ್ಲಿ ಗುಡುಗು, ಮಿಂಚು ಸಹಿತ ಮಳೆಯಾಗುತ್ತಿದ್ದು, ಇನ್ನು ಎರಡ್ಮೂರು ದಿನಗಳ ಕಾಲ ಮಳೆ ಮುಂದುವರೆಯಲಿದೆ. ಶನಿವಾರ ಮೈಸೂರು, ಮಂಡ್ಯ, ಚಾಮರಾಜನಗರ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಬೆಂಗಳೂರು ನಗರ ಮತ್ತು ಗ್ರಾಮಾಂತರ ಸೇರಿದಂತೆ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಮಳೆಯಾಗಿದೆ. ಮಲೆನಾಡು ಜಿಲ್ಲೆಗಳಾದ ಕೊಡಗು, ಹಾಸನ ಸೇರಿದಂತೆ ವಿವಿಧ ಭಾಗದಲ್ಲಿ ಸಾಧಾರಣ ಮಳೆಯಾದ ವರದಿಯಾಗಿದೆ. ಇನ್ನು ಉತ್ತರ ಒಳನಾಡು ಮತ್ತು ಕರಾವಳಿ ಭಾಗದಲ್ಲಿ ಒಣಹವೆ ಮುಂದುವರೆದಿದ್ದು, ಸದ್ಯಕ್ಕೆ ಆ ಭಾಗದಲ್ಲಿ ಮಳೆಯ ಮುನ್ಸೂಚನೆಗಳಿಲ್ಲ ಎಂದು ಕೆಎಸ್‌ಎನ್‌ಡಿಎಂಸಿ ವಿಜ್ಞಾನಿ ಪ್ರಭು ತಿಳಿಸಿದರು.

ಉಷ್ಣಾಂಶ ಇಳಿಕೆ ಆಗಬಾರದು: ಕಳೆದ ಒಂದು ವಾರದಿಂದ ರಾಜ್ಯದಲ್ಲಿ ಮಳೆಯಾಗುತ್ತಿದ್ದರೂ ಉಷ್ಣಾಂಶದ ಪ್ರಮಾಣದಲ್ಲಿ ಮಾತ್ರ ಇಳಿಕೆ ಆಗಿಲ್ಲ. ದಕ್ಷಿಣ ಒಳನಾಡು ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಸರಾಸರಿ 32ರಿಂದ 36 ಡಿಗ್ರಿ ಸೆಲ್ಸಿಯಸ್‌ ಗರಿಷ್ಠ ಉಷ್ಣಾಂಶ ದಾಖಲಾಗಿದೆ. ಇನ್ನು ಉತ್ತರ ಒಳನಾಡಿನಲ್ಲಿ ಸರಾಸರಿ 40ರಿಂದ 44 ಡಿಗ್ರಿ ಸೆಲ್ಸಿಯಸ್‌ ಗರಿಷ್ಠ ಉಷ್ಣಾಂಶ ದಾಖಲಾಗಿದೆ. ಪೂರ್ವ ಮುಂಗಾರಿನ ಈ ಅವಧಿಯಲ್ಲಿ ಉಷ್ಣಾಂಶದಲ್ಲಿ ಇಳಿಕೆ ಆಗಬಾರದು. ಒಂದು ವೇಳೆ ಉಷ್ಣಾಂಶದ ಇಳಿಕೆಯಾದರೆ ಮುಂಗಾರು ಮಳೆ ಮೇಲೆ ಪ್ರಭಾವ ಬೀರಲಿದೆ ಎಂದು ತಿಳಿಸಿದರು.

ಭಾರತೀಯ ಹವಾಮಾನ ಇಲಾಖೆ ಮಾಹಿತಿ ಪ್ರಕಾರ ಈ ಬಾರಿ ಉತ್ತಮ ಮುಂಗಾರು ಆಗಲಿದೆ. ಪ್ರಸ್ತುತ ಹವಾಮಾನದ ಲಕ್ಷಣಗಳು ಉತ್ತಮ ಮುಂಗಾರು ನಿರೀಕ್ಷೆಗೆ ಪೂರಕವಾಗಿವೆ ಎಂದು ಮಾಹಿತಿ ನೀಡಿದರು.