ಬೇಸಿಗೆಯ ಬೇಗೆಯಿಂದ ತತ್ತರಿಸಿದ್ದ ರಾಜ್ಯದ ಕೆಲವು ಪ್ರದೆಶಗಳಲ್ಲಿ ಮಳೆ ಸುರಿದು ತಂಪೆರೆದಿದೆ. ಕೆಲ ಪ್ರದೇಶಗಳಲ್ಲಿ ಆಲಿಕಲ್ಲು ಸಹಿತ ಮಳೆಯಾಗಿದೆ. 

ಬೆಂಗಳೂರು : ರಾಜ್ಯದ ವಿವಿಧೆಡೆ ಭಾನುವಾರವೂ ಮಳೆಯಾಗಿದ್ದು, ವಿಜಯಪುರ, ಬೀದರ್ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ಗುಡುಗು-ಮಿಂಚು, ಆಲಿಕಲ್ಲು ಸಹಿತ ಮಳೆಯಾಗಿದೆ. 

ವಿಜಯಪುರ ನಗರ ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಲ್ಲಿ ಭಾನುವಾರ ಸಂಜೆ 6.30ರ ವೇಳೆಗೆ ಆರಂಭವಾದ ಮಳೆ ಅರ್ಧ ಗಂಟೆಗೂ ಅಧಿಕ ಕಾಲ ಸುರಿದಿದೆ. ವಿಜಯಪುರ ನಗರದ ಕೆಲವೆಡೆ ಭಾರೀ ಗಾತ್ರ ಆಲಿಕಲ್ಲುಗಳು ಬಿದ್ದಿದ್ದು, ಜನ ಅಚ್ಚರಿ ವ್ಯಕ್ತಪಡಿಸಿದರೆ, ಮಕ್ಕಳು ಆಲಿಕಲ್ಲುಗಳನ್ನು ಸಂಗ್ರಹಿಸಿ ಸಂತಸ ಪಟ್ಟರು.

ವಿಜಯಪುರ ತಾಲೂಕಿನ ಶಿವಣಗಿ, ಹೊನ್ನುಟಗಿ, ಜುಮನಾಳ, ಇಟ್ಟಂಗಿಹಾಳ, ಅರಕೇರಿ, ಲೋಗಾಂವಿ ಸೇರಿದಂತೆ ಸುತ್ತಮುತ್ತ ಮಳೆಯ ಜೊತೆ ಭಾರೀ ಪ್ರಮಾಣದಲ್ಲಿ ಗಾಳಿಯೂ ಬೀಸಿದ ಪರಿಣಾಮ ಹಲವು ಮನೆಗಳ ಛಾವಣಿಯ ಶೀಟ್‌ಗಳು ಹಾರಿಹೋಗಿವೆ. ಅನೇಕ ಕಡೆ ಗುಡಿಸಲುಗಳಿಗೆ ಹಾನಿಯಾಗಿವೆ.

ಬಬಲೇಶ್ವರ ಹಾಗೂ ತಿಕೋಟಾ ತಾಲೂಕಿನ ಗ್ರಾಮಗಳಲ್ಲಿ ಬಿರುಗಾಳಿ ಸಮೇತ ಮಳೆ ಸುರಿದಿದೆ. ಬೀದರ್ ಜಿಲ್ಲೆಯ ಬಸವ ಕಲ್ಯಾಣ ತಾಲೂಕಿನ ಸಸ್ತಾಪೂರ ಬಂಗ್ಲಾ ಬಳಿಯ ಆಟೋನಗರ ದಲ್ಲಿ ಆಲಿಕಲ್ಲು ಸಮೇತ ಮಳೆಯಾಗಿದ್ದರೆ, ಕಲಬುರಗಿ ಜಿಲ್ಲೆಯ ಸೇಡಂ ಹಾಗೂ ಯಾದಗಿರಿ ಜಿಲ್ಲೆಯ ಗುರುಮಠಕಲ್, ಕೆಂಭಾವಿ ಸೇರಿದಂತೆ ವಿವಿಧೆಡೆ ಸಾಧಾರಣ ಮಳೆಯಾಗಿದೆ.