ಕಲಬುರಗಿ(ಸೆ.16): ಬಿಸಿಲುನಾಡು ಕಲಬುರಗಿ ಜಿಲ್ಲೆಯಾದ್ಯಂತ ಮಳೆಯ ಆರ್ಭಟ ಜೋರಾಗಿದೆ. ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ. ಸೇತುವೆಗಳು ಮುಳುಗಡೆಯಾಗಿದ್ದು, ರಸ್ತೆ ಸಂಪರ್ಕ ಕಡಿತಗೊಂಡಿದೆ. ಬೀದರ್ ನಲ್ಲೂ ಭಾರೀ ಮಳೆಯಾಗಿದ್ದು ನಾಲ್ಕು ಸಾವಿರ ಜನ ಸಂಪರ್ಕ ಕಳೆದುಕೊಂಡಿದ್ದಾರೆ.
ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಕಲಬುರಗಿ, ಬೀದರ್ ಜಿಲ್ಲೆಗಳು ತತ್ತರಿಸಿಹೋಗಿವೆ. ಕಲಬುರಗಿ ಜಿಲ್ಲೆಯಾದ್ಯಂತ ಕಳೆದ ಎರಡು ದಿನಗಳಿಂದ ಮಳೆಯ ಆರ್ಭಟ ಜೋರಾಗಿದೆ. ಹಲವು ಸೇತುವೆಗಳು ಮುಳುಗಡೆಯಾಗಿ ಸಂಪರ್ಕ ಕಡಿತಗೊಂಡಿದೆ. ಸೇಡಂ ತಾಲೂಕಿನ ಮಳಖೇಡ್ ಸೇತುವೆ ಜಲಾವೃತವಾಗಿದೆ. ಕಾಗಿಣಾ ನದಿಗೆ ಅಡ್ಡಲಾಗಿ ಕಟ್ಚಿರುವ ಸೇತುವೆ ಮೇಲೆ ನೀರು ಹರಿಯುತ್ತಿರುವುದರಿಂದ ಸೇಡಂ ಕಲಬುರಗಿ ರಸ್ತೆ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದೆ.
ಚಿತ್ತಾಪುರ ತಾಲೂಕಿನ ದಂಡೋತಿ ರಸ್ತೆ ಕೂಡ ಮುಳುಗಡೆಯಾಗಿದ್ದು, ಸಂಪರ್ಕ ಕಡಿತಗೊಂಡಿದೆ. ಪರ್ಯಾಯ ಮಾರ್ಗವಾಗಿ ಸಂಚರಿಸುವಂತೆ ಪ್ರಯಾಣಿಕರಿಗೆ ಸಲಹೆ ನೀಡಲಾಗುತ್ತಿದೆ. ಇನ್ನು ಚಿಂಚೋಳಿ ತಾಲೂಕಿನ ತಾಜಲಾಪುರ ಸೇತುವೆ ಕೂಡಾ ಮಳೆನೀರಿನಿಂದ ಜಲಾವೃತವಾಗಿದೆ. ಮುಲ್ಲಾಮಾರಿ ನದಿಗೆ ಕಟ್ಟಲಾಗಿರುವ ಸೇತುವೆ ಜಲಾವೃತಗೊಂಡು ತಾಜಲಾಪುರ, ಚಿಮ್ಮನಚೋಡ್, ಸಲಗರ ಬಸಂಪೂರ, ಹಸರಗುಂಡಗಿ ಗ್ರಾಮಗಳ ರಸ್ತೆ ಸಂಚಾರ ಕಡಿತಗೊಂಡಿದೆ.
ಇತ್ತ ಬೀದರ್ ನ ಔರಾದ್ ತಾಲೂಕಿನ ನಿಡೋದಾ ಗ್ರಾಮ ಸಂಪೂರ್ಣ ಜಲಾವೃತವಾಗಿದೆ. ನಾಲ್ಕು ಸಾವಿರ ಜನ ಸಂಪರ್ಕ ಕಳೆದುಕೊಂಡಿದ್ದು, ವೈದ್ಯಕೀಯ ಸೇವೆಯಿಂದ ಪರದಾಡುತ್ತಿದ್ದಾರೆ. ಇನ್ನು ನಾಂದೇಡ ಬೆಂಗಳೂರು ರೈಲು ಸೇತುವೆ ಖಾನಾಪುರ ಗ್ರಾಮದ ಬಳಿ ಮುಳುಗಡೆಯಾಗಿದ್ದು ಸೇತುವೆ ದುರಸ್ಥಿಗಾಗಿ ರೈಲ್ವೆ ಸಿಬ್ಬಂದಿ ಸೇತುವೆ ಮೇಲೆ ಬಿದ್ದಿದ್ದ ಹೂಳು ತೆಗೆದು ಸಂಚಾರಕ್ಕೆ ಅನುವು ಮಾಡದ್ದಾರೆ.
ಒಟ್ಟಿನಲ್ಲಿ ಮುಂಗಾರು ಮಳೆ ಕೈ ಕೊಟ್ಟರು ಹಿಂಗಾರು ಮಳೆ ಕೈ ಹಿಡಿದಿದೆ. ಹಿಂಗಾರು ಬೆಳೆಯ ನಿರೀಕ್ಷೆಯಲ್ಲಿ ರೈತರಿದ್ದಾರೆ. ಮತ್ತೊಂದೆಡೆ ಭಾರಿ ಮಳೆಗೆ ಉಭಯ ನಗರಗಳು ತತ್ತರಿಸಿಹೋಗಿವೆ.
