ಮೊದಲ ಬಾರಿ ಎರಡಂಕಿಗೆ ಇಳಿದ ರೈಲ್ವೆ ಅಪಘಾತ

First Published 2, Apr 2018, 7:58 AM IST
Railway accidents reduced to two digits
Highlights

- 2017​-18ನೇ ಹಣಕಾಸು ವರ್ಷದಲ್ಲಿ ಕೇವಲ 73 ಅಪಘಾತ

- ಸುರಕ್ಷತೆಗೆ ಹೆಚ್ಚಿನ ಮಹತ್ವ ಕೊಟ್ಟಪರಿಣಾಮ

ನವದೆಹಲಿ: ಪದೇ ಪದೇ ಹಳಿ ತಪ್ಪುವಿಕೆ, ಅಪಘಾತ, ಭಾರೀ ಪ್ರಮಾಣದ ಸಾವು-ನೋವಿಗಾಗಿ ಸದಾ ಟೀಕೆಗೆ ಗುರಿಯಾಗುವ ಭಾರತೀಯ ರೈಲ್ವೆ ಸುರಕ್ಷತೆಯಲ್ಲಿ ಹೊಸ ದಾಖಲೆ ನಿರ್ಮಿಸಿದೆ. ಕಳೆದ 35 ವರ್ಷಗಳಲ್ಲೇ ಮೊದಲ ಬಾರಿಗೆ ರೈಲ್ವೆ ಅಪಘಾತಗಳ ಪ್ರಮಾಣ ಎರಡಂಕಿಗೆ ಇಳಿದಿದೆ. 2017​-18ನೇ ಹಣಕಾಸು ವರ್ಷದಲ್ಲಿ ಮಾ.31ರವರೆಗೆ ಕೇವಲ 73 ಅಪಘಾತಗಳು ಸಂಭವಿಸಿವೆ.

2016​-2017ನೇ ಸಾಲಿನಲ್ಲಿ ದೇಶಾದ್ಯಂತ ಒಟ್ಟಾರೆ 104 ಅಪಘಾತಗಳು ಸಂಭವಿಸಿದ್ದವು. ಇದಕ್ಕೆ ಹೋಲಿಸಿದರೆ 2017-18ರಲ್ಲಿ ಅಪಘಾತಗಳ ಪ್ರಮಾಣ ಶೇ.29ರಷ್ಟುಇಳಿಕೆಯಾಗಿದೆ. ಅದೇ ರೀತಿ ರೈಲ್ವೆ ಹಳಿ ತಪ್ಪುವಿಕೆ ಪ್ರಮಾಣ ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ವರ್ಷ 39ಕ್ಕೆ ಇಳಿಕೆಯಾಗಿದೆ.

1968​-1969ರಲ್ಲಿ ಮೊದಲ ಬಾರಿಗೆ ರೈಲ್ವೆ ಅಪಘಾತಗಳ ಸಂಖ್ಯೆ 1000ಕ್ಕಿಂತ ಕೆಳಗೆ ಇಳಿದಿತ್ತು. ಆ ವರ್ಷ ಅಪಘಾತದ ಪ್ರಮಾಣ 908ಕ್ಕೆ ಇಳಿಕೆಯಾಗಿತ್ತು. ಅದಕ್ಕೂ ಮುನ್ನ ಪ್ರತಿ ವರ್ಷ 1000ಕ್ಕೂ ಹೆಚ್ಚು ಅಪಘಾತಗಳು ನಡೆಯುವುದು ಸರ್ವೇ ಸಾಮಾನ್ಯ ಎನಿಸಿತ್ತು.

ಕಳೆದ ಕೆಲ ವರ್ಷಗಳಿಂದ ರೈಲ್ವೆಯ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಿರುವುದು ಅಪಘಾತ ಪ್ರಮಾಣ ಇಳಿಕೆಗೆ ಪ್ರಮುಖ ಕಾರಣ. ಈ ಬಾರಿಯ ಬಜೆಟ್‌ನಲ್ಲಿ 7,267 ಕೋಟಿ ರು.ಗಳನ್ನು ರೈಲ್ವೆಯ ಸುರಕ್ಷತೆಗೆಂದೇ ತೆಗೆದಿರಿಸಲಾಗಿತ್ತು.

loader