ಓಖಿ ಚಂಡಮಾರುತದಲ್ಲಿ ಸಂತ್ರಸ್ತರಾದ ಕೇರಳ, ತಮಿಳುನಾಡು ಹಾಗೂ ಲಕ್ಷದ್ವೀಪದ ಜನರಿಗೆ ಸಮಗ್ರ ಪರಿಹಾರ ಪ್ಯಾಕೇಜ್ ಘೋಷಿಸಬೇಕು ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.​

ನವದೆಹಲಿ (ಡಿ.18): ಓಖಿ ಚಂಡಮಾರುತದಲ್ಲಿ ಸಂತ್ರಸ್ತರಾದ ಕೇರಳ, ತಮಿಳುನಾಡು ಹಾಗೂ ಲಕ್ಷದ್ವೀಪದ ಜನರಿಗೆ ಸಮಗ್ರ ಪರಿಹಾರ ಪ್ಯಾಕೇಜ್ ಘೋಷಿಸಬೇಕು ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭಾನುವಾರ ಪತ್ರ ಬರೆದಿದ್ದಾರೆ.

ಅಧ್ಯಕ್ಷ ಹುದ್ದೆ ವಹಿಸಿಕೊಂಡ ನಂತರ ಮೊದಲ ಬಾರಿಗೆ ಪ್ರಧಾನಿಗೆ ಪತ್ರ ಬರೆದಿರುವ ರಾಹುಲ್, `ಇಂತಹ ಪ್ರಕೃತಿ ವಿಕೋಪಗಳು ಸಂಭವಿಸುವುದರ ಬಗ್ಗೆ ಮುನ್ಸೂಚನೆ ನೀಡುವ `ಮುನ್ನೆಚ್ಚರಿಕಾ ವ್ಯವಸ್ಥೆ'ಯನ್ನು ಬಲಗೊಳಿಸಬೇಕು.

ಸುಧಾರಿತ ಚಂಡಮಾರುತ ಮುನ್ಸೂಚನಾ ವ್ಯವಸ್ಥೆಯನ್ನು ದೇಶದ ಕರಾವಳಿ ಭಾಗದಲ್ಲಿ ಸ್ಥಾಪಿಸಬೇಕು' ಎಂದು ಆಗ್ರಹಿಸಿದ್ದಾರೆ. ಕರಾವಳಿಯಲ್ಲಿ ಕಡಲ್ಕೊರೆತ ತಡೆಯಲು ರಕ್ಷಣಾ ಗೋಡೆ ನಿರ್ಮಿಸಬೇಕು ಎಂದೂ ರಾಹುಲ್ ಆಗ್ರಹಿಸಿದ್ದಾರೆ. ಕೇರಳ, ತಮಿಳುನಾಡು ಮೀನುಗಾರರು ಓಖಿ ಚಂಡಮಾರುತದಿಂದ ಸಾಕಷ್ಟು ನಲುಗಿದ್ದಾರೆ ಎಂದು ಡಿ.14ರಂದು ಸಂತ್ರಸ್ತರನ್ನು ಭೇಟಿ ಮಾಡಿದ್ದ ರಾಹುಲ್ ಅವರು ಪತ್ರದಲ್ಲಿ ವಿವರಿಸಿದ್ದಾರೆ.