ನವದೆಹಲಿ: ಕಾಂಗ್ರೆಸ್‌ ಅಧ್ಯಕ್ಷ ಹುದ್ದೆ ಕುರಿತ ಗೊಂದಲಗಳಿಗೆ ಪಕ್ಷ ಬುಧವಾರ ತೆರೆ ಎಳೆದಿದ್ದು, ಹಿಂದು, ಇಂದು, ಮುಂದೂ ರಾಹುಲ್‌ ಗಾಂಧಿ ಅವರೇ ಪಕ್ಷದ ನಾಯಕರಾಗಿರಲಿದ್ದಾರೆ ಎಂದು ಹೇಳಿದೆ. ಈ ಮೂಲಕ ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿಯಲು ರಾಹುಲ್‌ ಸಿದ್ಧರಿಲ್ಲ ಎಂಬ ವರದಿಗಳಿಗೆ ಕೊನೆ ಹಾಡುವ ಯತ್ನ ಮಾಡಿದೆ. ಆದರೆ ಕೆಲ ದಿನಗಳ ಪ್ರವಾಸಕ್ಕಾಗಿ ಮಂಗಳವಾರ ರಾತ್ರಿಯೇ ಲಂಡನ್‌ಗೆ ತೆರಳಿರುವ ರಾಹುಲ್‌ ಗಾಂಧಿ ಅವರಿಂದ ಈ ಕುರಿತು ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

ಕಾಂಗ್ರೆಸ್‌ನಲ್ಲಿ ಬಂಡಾಯದ ಬಿಸಿ

ಕಾಂಗ್ರೆಸ್‌ ಕಾರ್ಯಕಾರಿ ಸಮಿತಿಯ ಬಹುತೇಕ ಸದಸ್ಯರು ಬುಧವಾರ ರಾಹುಲ್‌ ಅನುಪಸ್ಥಿತಿಯಲ್ಲಿಯೇ ಇಲ್ಲಿ ಸಭೆ ನಡೆಸಿ, ಪಕ್ಷದ ಆಂತರಿಕ ಬೆಳವಣಿಗೆಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಚರ್ಚೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪಕ್ಷದ ಮುಕ್ತ ವಕ್ತಾರ ರಣದೀಪ್‌ ಸುರ್ಜೇವಾಲಾ, ಹಿಂದೆಯೂ ರಾಹುಲ್‌ ಪಕ್ಷದ ಅಧ್ಯಕ್ಷರಾಗಿದ್ದರೂ, ಈಗಲೂ ಅವರೇ ಆಗಿದ್ದಾರೆ, ಮುಂದೆಯೂ ಅವರೇ ಮುಂದುವರೆಯಲಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. ಆದರೆ ಈ ಸಭೆಯಲ್ಲಿ ಸ್ವತಃ ರಾಹುಲ್‌ ಗಾಂಧಿ ಅವರೇ ಉಪಸ್ಥಿರಲಿಲ್ಲ. ಹೀಗಿರುವಾಗ ತಮ್ಮ ಅನುಪಸ್ಥಿತಿಯಲ್ಲಿ ಪಕ್ಷದ ಕೈಗೊಂಡ ನಿರ್ಧಾರವನ್ನು ರಾಹುಲ್‌ ಒಪ್ಪುತ್ತಾರಾ ಎಂಬ ಅನುಮಾನವಿದೆ.