ರಾಜ್ಯಾದ್ಯಂತ ಐದು ಹಂತದ ಅಬ್ಬರದ ಪ್ರಚಾರ ಯಾತ್ರೆಗಳ ಮೂಲಕ ರಾಜ್ಯ ಕಾಂಗ್ರೆಸ್ಸಿನಲ್ಲಿ ಉತ್ಸಾಹ ತುಂಬಿರುವ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರ ಜನಾಶೀರ್ವಾದ ಯಾತ್ರೆಯ ಅಂತಿಮ ಚರಣ ಶನಿವಾರದಿಂದ ಎರಡು ದಿನಗಳ ಕಾಲ ನಡೆಯಲಿದೆ.

ಬೆಂಗಳೂರು : ರಾಜ್ಯಾದ್ಯಂತ ಐದು ಹಂತದ ಅಬ್ಬರದ ಪ್ರಚಾರ ಯಾತ್ರೆಗಳ ಮೂಲಕ ರಾಜ್ಯ ಕಾಂಗ್ರೆಸ್ಸಿನಲ್ಲಿ ಉತ್ಸಾಹ ತುಂಬಿರುವ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರ ಜನಾಶೀರ್ವಾದ ಯಾತ್ರೆಯ ಅಂತಿಮ ಚರಣ ಶನಿವಾರದಿಂದ ಎರಡು ದಿನಗಳ ಕಾಲ ನಡೆಯಲಿದೆ.

ಏ.7ರಂದು ಕೋಲಾರ, ಚಿಕ್ಕಬಳ್ಳಾಪುರದಲ್ಲಿ ರೋಡ್‌ ಶೋ ನಡೆಸಲಿರುವ ರಾಹುಲ್‌ ಗಾಂಧಿ ಏ.8ರಂದು ಉದ್ಯಾನನಗರಿಯಲ್ಲಿ ಸಫಾಯಿ ಕರ್ಮಚಾರಿ, ಉದ್ಯಮಿಗಳು ಹಾಗೂ ಮಹಿಳಾ ಸಾಧಕಿಯರೊಂದಿಗೆ ಸಂವಾದ ನಡೆಸಲಿದ್ದಾರೆ. ಬಳಿಕ ಅರಮನೆ ಮೈದಾನದಲ್ಲಿ ನಡೆಯಲಿರುವ ಜನಾಶೀರ್ವಾದ ಯಾತ್ರೆಯ ಬೃಹತ್‌ ಸಮಾರೋಪ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಕಾಂಗ್ರೆಸ್‌ ಪ್ರಕಾರ 4ರಿಂದ 5 ಲಕ್ಷ ಮಂದಿ ನೆರೆಯಲಿರುವ ಬೃಹತ್‌ ಸಮಾವೇಶದ ಮೂಲಕ ವಿಧಾನಸಭೆ ಚುನಾವಣೆಗೆ ಅಧಿಕೃತವಾಗಿ ರಣಕಹಳೆ ಮೊಳಗಿಸಲಿದ್ದಾರೆ.

ಶುಕ್ರವಾರ ಸಂಜೆ ಕಾರ್ಯಕ್ರಮದ ಸಿದ್ಧತೆ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್‌ ನೇತೃತ್ವದಲ್ಲಿ ಗೃಹ ಸಚಿವ ರಾಮಲಿಂಗಾರೆಡ್ಡಿ, ಸಾರಿಗೆ ಸಚಿವ ಎಚ್‌.ಎಂ. ರೇವಣ್ಣ ಅವರ ತಂಡ ಪರಿಶೀಲನೆ ನಡೆಸಿತು.ಈ ವೇಳೆ ಮಾತನಾಡಿದ ಜಿ.ಪರಮೇಶ್ವರ್‌, ಈ ಬಾರಿಯ ಜನಾಶೀರ್ವಾದ ಯಾತ್ರೆಯ ವೇಳೆ ಸಫಾಯಿ ಕರ್ಮಚಾರಿಗಳ ಜತೆ ಸಂವಾದ, ಕೈಗಾರಿಕೋದ್ಯಮಿಗಳ ಸಂವಾದ ನಡೆಸಲಿರುವ ರಾಹುಲ್‌ ಗಾಂಧಿ ಕುಡುಮಲೈ ಗಣೇಶ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ.

ಏ.7ರಂದು ಕೋಲಾರ, ಚಿಕ್ಕಬಳ್ಳಾಪುರ ಪ್ರವಾಸ ಮಾಡಲಿರುವ ಅವರು, ಏ.8ರಂದು ಬೆಂಗಳೂರಿನ ಶೇಷಾದ್ರಿಪುರದ ಜಕ್ಕರಾಯನಕೆರೆ ಬಳಿ ಸಫಾಯಿ ಕರ್ಮಚಾರಿಗಳ ಜತೆ ಸಂವಾದ ನಡೆಸಲಿದ್ದಾರೆ. ಬಳಿಕ ಬೆಳಗ್ಗೆ 11 ಗಂಟೆಗೆ ಅರಮನೆ ರಸ್ತೆಯ ಜ್ಞಾನಜ್ಯೋತಿ ಸಭಾಂಗಣದಲ್ಲಿ ಕೈಗಾರಿಕೋದ್ಯಮಿಗಳ ಜತೆ ಸಂವಾದ ನಡೆಸಲಿದ್ದಾರೆ. ನಂತರ ಮಧ್ಯಾಹ್ನ 3 ಗಂಟೆಗೆ ಅರಮನೆ ಮೈದಾನದಲ್ಲಿ ನಡೆಯಲಿರುವ ಜನಾಶೀರ್ವಾದ ಯಾತ್ರೆಯ ಬೃಹತ್‌ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದು ಕಾಂಗ್ರೆಸ್‌ ಎಂದು ಮಾಹಿತಿ ನೀಡಿದರು.

ಕೋಲಾರ-ಚಿಕ್ಕಬಳ್ಳಾಪುರ: ಏ.7ರಂದು ಬೆಳಗ್ಗೆ 10.45ಕ್ಕೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ನಗರಕ್ಕೆ ಆಗಮಿಸಲಿರುವ ಅವರು ಬೆಳಗ್ಗೆ 11ಕ್ಕೆ ಹೆಲಿಕಾಪ್ಟರ್‌ ಮೂಲಕ ಮುಳಬಾಗಿಲು ತಲುಪಲಿದ್ದಾರೆ. ಬೆಳಗ್ಗೆ 11.30ಕ್ಕೆ ಮುಳಬಾಗಿಲಿನ ಕುಡುಮಲೈ ಗಣೇಶ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆಯಲಿದ್ದಾರೆ. ಬಳಿಕ ಕುಡುಮಲೈನಿಂದ ಮುಳಬಾಗಿಲು ವರೆಗೆ 10 ಕಿ.ಮೀ. ಬಸ್‌ ಯಾತ್ರೆ ನಡೆಸಿ, ಮುಳಬಾಗಿಲಿನಲ್ಲಿ 2 ಕಿ.ಮೀ. ರೋಡ್‌ ಶೋ ನಡೆಸಲಿದ್ದಾರೆ ಎಂದು ಕಾಂಗ್ರೆಸ್‌ ಪ್ರಕಟಣೆಯಲ್ಲಿ ತಿಳಿಸಿದೆ.

ಬಳಿಕ ಮುಳಬಾಗಿಲಿನಿಂದ ಕೆಜಿಎಫ್‌ವರೆಗೆ 34 ಕಿ.ಮೀ. ಬಸ್‌ ರಾರ‍ಯಲಿ ನಡೆಸಲಿದ್ದಾರೆ. ಕೆಜಿಎಫ್‌ನಿಂದ ಬಂಗಾರಪೇಟೆವರೆಗೆ 14 ಕಿ.ಮೀ. ಬಸ್‌ ಯಾತ್ರೆ ನಡೆಸಿ ಬಳಿಕ ಬಂಗಾರಪೇಟೆಯಲ್ಲಿ ರೋಡ್‌ ಶೋ ಮಾಡಲಿದ್ದಾರೆ. ಬಂಗಾರಪೇಟೆಯಿಂದ 20 ಕಿ.ಮೀ. ಬಸ್‌ ಪ್ರಯಾಣದ ಮೂಲಕ ಕೋಲಾರ ತಲುಪಲಿರುವ ಅವರು, ಕೋಲಾರದಲ್ಲಿ ಕಾರ್ಯಕರ್ತರ ಸಮಾವೇಶ ಉದ್ದೇಶಿಸಿ ಮಾತನಾಡಲಿದ್ದಾರೆ.

ಸಂಜೆ 5.30ಕ್ಕೆ ಕೋಲಾರದಿಂದ ಚಿಕ್ಕಬಳ್ಳಾಪುರಕ್ಕೆ ಹೆಲಿಕಾಪ್ಟರ್‌ ಮೂಲಕ ತೆರಳಲಿದ್ದು, ಸಂಜೆ 6.30ಕ್ಕೆ ಚಿಕ್ಕಬಳ್ಳಾಪುರದಲ್ಲಿ ಬೃಹತ್‌ ಸಾರ್ವಜನಿಕ ಸಮಾವೇಶ ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ತಿಳಿದುಬಂದಿದೆ. ಸಮಾವೇಶಕ್ಕೆ ಆಗಮಿಸುವ ಸಾರ್ವಜನಿಕರಿಗೆ ತುಮಕೂರು, ದೊಡ್ಡಬಳ್ಳಾಪುರ, ಮೈಸೂರು ರಸ್ತೆಯಿಂದ ಆಗಮಿಸಲು ಮಾರ್ಗಸೂಚಿ ಸಿದ್ಧಪಡಿಸಲಾಗಿದೆ.