ನವದೆಹಲಿ(ಮಾ.28): ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಪತ್ರಕರ್ತನೋರ್ವನನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಉಪಚರಿಸಿದ್ದಾರೆ. ಇಲ್ಲಿನ ಹುಮಾಯೂನ್ ರಸ್ತೆಯಲ್ಲಿ ಬಿದ್ದಿದ್ದ ಪತ್ರಕರ್ತನನ್ನು ತಮ್ಮ ಕಾರಿನಲ್ಲೇ ಕೂರಿಸಿಕೊಂಡು ರಾಹುಲ್ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ.

ರಾಜಸ್ಥಾನ ಮೂಲದ ದಿನಪತ್ರಿಕೆಯ ಸಂಪಾದಕ ರಾಜೇಂದ್ರ ವ್ಯಾಸ್ ಎಂಬ ಪತ್ರಕರ್ತ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದರು. ಈ ವೇಳೆ ಅದೇ ಮಾರ್ಗವಾಗಿ ಹೊರಟಿದ್ದ ರಾಹುಲ್ ತಮ್ಮ ಕಾರನ್ನು ನಿಲ್ಲಿಸಿ ಪತ್ರಕರ್ತರನ್ನು ಉಪಚರಿಸಿದ್ದಾರೆ.

 

ಈ ವೇಳೆ ಪತ್ರಕರ್ತನ ಹಣೆಗೆ ಪೆಟ್ಟಾಗಿದ್ದು, ರಾಹುಲ್ ತಮ್ಮ ಕರವಸ್ತ್ರದಿಂದ ಅವರ ಹಣೆ ಒರೆಸಿದ್ದಾರೆ. ಆಗ ಪತ್ರಕರ್ತ 'ಸರ್ ಇನ್ನೊಮ್ಮೆ ಕರವಸ್ತ್ರದಿಂದ ಹಣೆ ಒರೆಸಿ, ನಾನು ಇದನ್ನು ನನ್ನ ಕೆಲಸಕ್ಕೆ ಬಳಸಿಕೊಳ್ಳುತ್ತೇನೆ' ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ.

ಬಳಿಕ ಪತ್ರಕರ್ತನನ್ನು AIIMS ಗೆ ಆಸ್ಪತ್ರೆಗೆ ಕರೆತಂದು ಪ್ರಾಥಮಿಕ ಚಿಕಿತ್ಸೆ ಕೊಡಿಸಿ ರಾಹುಲ್ ಪ್ರಯಾಣ ಬೆಳೆಸಿದ್ದಾರೆ. ಈ ಹಿಂದೆ ಭುವನೇಶ್ವರ್ ವಿಮಾನ ನಿಲ್ದಾಣದಲ್ಲಿ ಆಯತಪ್ಪಿ ಬಿದ್ದಿದ್ದ ಪತ್ರಕರ್ತನಿಗೂ ರಾಹುಲ್ ಸಹಾಯ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.