ನಾಮಪತ್ರ ಸಲ್ಲಿಕೆಗೆ ಸೋಮವಾರ (ಡಿ.4) ಕಡೆಯ ದಿನವಾಗಿದೆ. ಇದುವರೆಗೆ ಯಾವುದೇ ಅಭ್ಯರ್ಥಿ ನಾಮಪತ್ರ ಸಲ್ಲಿಸಿಲ್ಲ. ಇಂದು ಕೂಡಾ ರಾಹುಲ್ ಹೊರತು ಪಡಿಸಿ ಇನ್ಯಾವುದೇ ಸ್ಪರ್ಧಾಳುಗಳು ಕಣಕ್ಕೆ ಇಳಿಯದೇ ಹೋದಲ್ಲಿ, ಪಕ್ಷದ ನೂತನ ಅಧ್ಯಕ್ಷರಾಗಿ ರಾಹುಲ್ ಇಂದೇ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.

ನವದೆಹಲಿ(ಡಿ.04): ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಹುದ್ದೆಯ ಚುನಾವಣೆಗೆ ಅಭ್ಯರ್ಥಿಯಾಗಿ, ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ಇಂದು ನಾಮಪತ್ರ ಸಲ್ಲಿಸಲಿದ್ದಾರೆ.

ನಾಮಪತ್ರ ಸಲ್ಲಿಕೆಗೆ ಸೋಮವಾರ (ಡಿ.4) ಕಡೆಯ ದಿನವಾಗಿದೆ. ಇದುವರೆಗೆ ಯಾವುದೇ ಅಭ್ಯರ್ಥಿ ನಾಮಪತ್ರ ಸಲ್ಲಿಸಿಲ್ಲ. ಇಂದು ಕೂಡಾ ರಾಹುಲ್ ಹೊರತು ಪಡಿಸಿ ಇನ್ಯಾವುದೇ ಸ್ಪರ್ಧಾಳುಗಳು ಕಣಕ್ಕೆ ಇಳಿಯದೇ ಹೋದಲ್ಲಿ, ಪಕ್ಷದ ನೂತನ ಅಧ್ಯಕ್ಷರಾಗಿ ರಾಹುಲ್ ಇಂದೇ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ. ಆದರೆ ಈ ಕುರಿತ ಅಧಿಕೃತ ಘೋಷಣೆ ಡಿ.19ರಂದಷ್ಟೇ ಹೊರಬೀಳಲಿದೆ.

ಇದರೊಂದಿಗೆ ಸೋನಿಯಾ ಗಾಂಧಿ ಉತ್ತರಾಧಿಕಾರಿಯಾಗಿ ರಾಹುಲ್ ಪಟ್ಟಕ್ಕೇರುವುದಕ್ಕೆ ವೇದಿಕೆ ಸಿದ್ಧಗೊಂಡಿದೆ. ರಾಹುಲ್ ಗಾಂಧಿ ಅವರು 70 ಮಂದಿ ಸೂಚಕರ ಬೆಂಬಲದೊಂದಿಗೆ ಇಂದು ಉಮೇದುವಾರಿಕೆ ಸಲ್ಲಿಸಲಿದ್ದಾರೆ. ಈ ವೇಳೆ ಹಾಲಿ ಅಧ್ಯಕ್ಷೆ ಸೋನಿಯಾ ಗಾಂಧಿ, ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿ ಕಾಂಗ್ರೆಸ್ ಸಿಎಂಗಳು, ವಿವಿಧ ರಾಜ್ಯಗಳ ಕಾಂಗ್ರೆಸ್ ಮುಖ್ಯಸ್ಥರು ಮತ್ತು ಪಕ್ಷದ ಹಿರಿಯ ನಾಯಕರು ಉಪಸ್ಥಿತರಿರಲಿದ್ದಾರೆ.

ಡಿ.5ರಂದು ಮಂಗಳವಾರ ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಕ್ರಮಬದ್ಧವಾಗಿರುವ ನಾಮಪತ್ರಗಳ ಕುರಿತು ಅಂದೇ ಮಧ್ಯಾಹ್ನ 3.30ಕ್ಕೆ ಪ್ರಕಟಣೆ ಹೊರಡಿಸಲಾಗುತ್ತದೆ. ಒಂದು ವೇಳೆ ರಾಹುಲ್ ಹೊರತಾಗಿ ಇನ್ಯಾವುದೇ ಅಭ್ಯರ್ಥಿ ಕಣಕ್ಕಿಳಿದಲ್ಲಿ ಡಿ.16ರಂದು ಚುನಾವಣೆ ನಡೆಯಲಿದ್ದು, ಡಿ.19ರಂದು ಮತ ಎಣಿಕೆ ನಡೆಸಿ, ಅಂದೇ ಫಲಿತಾಂಶ ಪ್ರಕಟಿಸಲಾಗುವುದು. 2013ರ ಜ.19ರಂದು ರಾಹುಲ್ ಉಪಾಧ್ಯಕ್ಷರಾಗಿದ್ದರು.