ಬೆಂಗಳೂರು[ಮೇ.25]: ಲೋಕಸಭಾ ಚುನಾವಣೆಯಲ್ಲಿ ತಂದೆ ಹಾಗೂ ಪುತ್ರನ ಪರಾಭವ ಹಾಗೂ ಕಾಂಗ್ರೆಸ್‌ ಪಕ್ಷದ ಹೀನಾಯ ಸೋಲಿಗೆ ಮೈತ್ರಿಯೇ ಕಾರಣ ಎಂಬ ಟೀಕೆಯಿಂದ ತೀವ್ರ ಬೇಸರದಿಂದ ತಮ್ಮ ಸ್ಥಾನಕ್ಕೆ ರಾಜೀನಾಮೆಗೆ ಮುಂದಾಗಿದ್ದ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ ರಾಹುಲ್‌ ಗಾಂಧಿ ಹಾಗೂ ರಾಜ್ಯ ನಾಯಕರು ಆತ್ಮಸ್ಥೈರ್ಯ ತುಂಬಿ ಸರ್ಕಾರ ಮುನ್ನಡೆಸುವಂತೆ ಸಲಹೆ ನೀಡಿದ್ದಾರೆ.

ಕೃಷಿ ಸಾಲ ಮನ್ನಾ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದರೂ ಮತದಾರರು ತಮ್ಮ ತಂದೆ ದೇವೇಗೌಡ ಹಾಗೂ ಪುತ್ರ ನಿಖಿಲ್‌ ಕುಮಾರಸ್ವಾಮಿ ಅವರನ್ನು ಸೋಲಿಸಿದ್ದಾರೆ. ಅಲ್ಲದೆ, ಮೈತ್ರಿಯಿಂದಲೇ ಕಾಂಗ್ರೆಸ್‌ ಅಭ್ಯರ್ಥಿಗಳು ಸೋಲು ಅನುಭವಿಸಿದರೆಂಬ ಟೀಕೆಯಿಂದ ತೀವ್ರವಾಗಿ ನೊಂದು ಮುಖ್ಯಮಂತ್ರಿ ಸ್ಥಾನವನ್ನು ಕಾಂಗ್ರೆಸ್‌ ಪಕ್ಷಕ್ಕೆ ಬಿಟ್ಟುಕೊಡಲು ಮುಂದಾಗಿದ್ದರು ಎಂದು ಹೇಳಲಾಗಿದೆ. ಈ ವಿಷಯ ತಿಳಿದ ರಾಹುಲ್‌ ಗಾಂಧಿ ನೇರವಾಗಿ ಎಚ್‌.ಡಿ. ಕುಮಾರಸ್ವಾಮಿ ಅವರ ಜೊತೆ ದೂರವಾಣಿಯಲ್ಲಿ ಮಾತನಾಡಿ ರಾಜೀನಾಮೆ ವಿಚಾರ ಮಾಡಬೇಡಿ. ಲೋಕಸಭೆಯಲ್ಲಿ ಜನಾದೇಶ ವಿರುದ್ಧವಾಗಿ ಬಂದರೂ ಯಾವುದೇ ಆತಂಕಪಡುವ ಅಗತ್ಯ ಇಲ್ಲ. ರಾಜ್ಯದಲ್ಲಿ ಸರ್ಕಾರವನ್ನು ಮುನ್ನಡೆಸಿ, ನಿಮ್ಮ ಬೆಂಬಲಕ್ಕೆ ನಾವಿದ್ದೇವೆ ಎಂದು ಸಮಾಧಾನ ಮಾಡಿದರು ಎನ್ನಲಾಗಿದೆ.

ಈ ವೇಳೆ ರಾಜ್ಯ ಕಾಂಗ್ರೆಸಿಗರ ನಡೆಯ ಬಗ್ಗೆ ಪ್ರಸ್ತಾಪಿಸಿ ಸಿಎಂ ಬೇಸರ ವ್ಯಕ್ತಪಡಿಸಿದ್ದಾರೆ. ತದನಂತರ ರಾಹುಲ್‌ ಗಾಂಧಿ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಮತ್ತು ರಾಜ್ಯ ಉಸ್ತುವಾರಿ ವೇಣುಗೋಪಾಲ್‌ ಅವರೊಂದಿಗೆ ಸಮಾಲೋಚನೆ ನಡೆಸಿ ಜೆಡಿಎಸ್‌ಗೆ ಬೆಂಬಲ ನೀಡುವಂತೆ ಸೂಚನೆ ನೀಡಿದ್ದಾರೆ. ಹೈಕಮಾಂಡ್‌ ನಿರ್ದೇಶನದ ಮೇರೆಗೆ ಕಾಂಗ್ರೆಸ್‌ ಮುಖಂಡರು ಸಭೆ ನಡೆಸಿ ಕುಮಾರಸ್ವಾಮಿ ಅವರಿಗೆ ಸಮಾಧಾನ ಮಾಡಿದ್ದಾರೆ. ಅನೌಪಚಾರಿಕ ಸಚಿವ ಸಂಪುಟ ಸಭೆಯಲ್ಲಿ ಸಂಪೂರ್ಣ ಬೆಂಬಲ ನೀಡುವ ಬಗ್ಗೆ ಆಶ್ವಾಸನೆ ನೀಡಿದ್ದಾರೆ ಎಂದು ಮೂಲಗಳು ಹೇಳಿವೆ.

ಯಾವುದೇ ಕಾರಣಕ್ಕೂ ರಾಜೀನಾಮೆ ನೀಡುವ ಅಗತ್ಯ ಇಲ್ಲ. ನಿಮ್ಮ ನಾಯಕತ್ವದಲ್ಲಿಯೇ ಮೈತ್ರಿ ಸರ್ಕಾರ ಮುಂದುವರಿಯಲಿ. ಶಾಸಕರನ್ನು ಹಿಡಿದಿಡುವ ಮತ್ತು ಮುಖ್ಯಮಂತ್ರಿ ಸ್ಥಾನದ ಬಗ್ಗೆ ಪ್ರಸ್ತಾಪಿಸದಂತೆ ಎಚ್ಚರವಹಿಸುವ ಜವಾಬ್ದಾರಿ ತಮ್ಮದು ಎಂದು ಕಾಂಗ್ರೆಸ್‌ ಸಚಿವರು ಆಶ್ವಾಸನೆ ನೀಡಿದ್ದಾರೆ. ಕಾಂಗ್ರೆಸಿಗರ ಈ ಆಶ್ವಾಸನೆ ಮೇರೆಗೆ ಮುಖ್ಯಮಂತ್ರಿಗಳು ತಮ್ಮ ಸ್ಥಾನದಲ್ಲಿ ಮುಂದುವರಿಯುವ ಬಗ್ಗೆ ಸ್ಪಷ್ಪನೆ ನೀಡಿದರು ಎನ್ನಲಾಗಿದೆ.

ಸರ್ಕಾರ ಕಾಪಾಡಿಕೊಳ್ಳಲು ಸೂತ್ರಗಳು

ಮೈತ್ರಿ ಸರ್ಕಾರವನ್ನು ಪತನಗೊಳಿಸುವ ಬಿಜೆಪಿ ಪ್ರಯತ್ನಕ್ಕೆ ತಿರುಗೇಟು ನೀಡಿ ಸುಗಮವಾಗಿ ಸರ್ಕಾರ ನಡೆಸಲು ಅನೌಪಚಾರಿಕ ಸಭೆಯಲ್ಲಿ ಸಚಿವರು ಕೆಲವು ಸೂತ್ರಗಳನ್ನು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮುಂದಿಟ್ಟು, ಅದಕ್ಕೆ ಸಿಎಂ ಸಮ್ಮತಿಯನ್ನು ಸಹ ನೀಡಿದ್ದಾರೆ ಎಂದು ಹೇಳಲಾಗಿದೆ.

ಮುಖ್ಯಮಂತ್ರಿಗಳು ಕಾಂಗ್ರೆಸ್‌ ಶಾಸಕಾಂಗ ಸಭೆಗೆ ಹಾಜರಾಗಿ ಶಾಸಕರ ಅಹವಾಲು ಕೇಳಿ ಬಗೆಹರಿಸಲು ಕ್ರಮ ಕೈಗೊಳ್ಳಬೇಕು. ಜಂಟಿ ಶಾಸಕಾಂಗ ಸಭೆ ಕರೆದು ಎರಡೂ ಪಕ್ಷಗಳ ಶಾಸಕರಲ್ಲಿನ ಭಿನ್ನಾಭಿಪ್ರಾಯ, ಕ್ಷೇತ್ರಗಳ ಸಮಸ್ಯೆ, ಅನುದಾನ ಹಂಚಿಕೆ ತಾರತಮ್ಯ ಸೇರಿದಂತೆ ಇತರೆ ಸಮಸ್ಯೆಗಳನ್ನು ಬಗೆಹರಿಸಿ ವಿಶ್ವಾಸ ಮೂಡಿಸಬೇಕು. ಜಿಲ್ಲಾವಾರು ಸಚಿವರು, ಶಾಸಕರು, ಅಧಿಕಾರಿಗಳ ಸಭೆ ನಡೆಸಿ ಸ್ಥಳೀಯ ಸಮಸ್ಯೆಗೆ ಆದ್ಯತೆ ನೀಡಿ ಬಗೆಹರಿಸಬೇಕು. ಪ್ರಾದೇಶಿಕವಾರು, ಜಿಲ್ಲಾವಾರು ಸಭೆಗಳಲ್ಲಿ ಕಾಮಗಾರಿಗಳ ಮತ್ತು ಅನುದಾನಕ್ಕೆ ಅನುಮೋದನೆ ನೀಡಬೇಕು. ಜೆಡಿಎಸ್‌-ಕಾಂಗ್ರೆಸ್‌ ಸಚಿವರು ಎರಡು ಪಕ್ಷಗಳ ಶಾಸಕರೊಂದಿಗೆ ಉತ್ತಮ ಬಾಂಧವ್ಯ ಹೊಂದುವ ಜೊತೆಗೆ ಪಕ್ಷದ ಕಾರ್ಯಕರ್ತರಿಗೆ ಸಹಕಾರ ನೀಡಬೇಕು ಎಂಬ ಸಲಹೆಗಳನ್ನು ನೀಡಲಾಗಿದೆ.

ಕಾಂಗ್ರೆಸ್‌ ಶಾಸಕರಿಗೆ ಮುಖ್ಯಮಂತ್ರಿ, ಸಚಿವರ ಭೇಟಿಗೆ ಸಮಸ್ಯೆಯಾಗಬಾರದು. ಜೆಡಿಎಸ್‌ ಶಾಸಕರಿಗೆ ಇರುವ ಸ್ವಾತಂತ್ರ್ಯ ಕಾಂಗ್ರೆಸ್‌ ಶಾಸಕರಿಗೂ ನೀಡಬೇಕು. ಬಾಕಿ ಇರುವ ನಿಗಮ-ಮಂಡಳಿಗಳ ನೇಮಕಾತಿಯನ್ನು ಎರಡೂ ಪಕ್ಷಗಳ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಭರ್ತಿ ಮಾಡಬೇಕು. ಅಧಿಕಾರಿಗಳ ವರ್ಗಾವಣೆ, ಆಯಕಟ್ಟಿನ ಪ್ರದೇಶಗಳಿಗೆ ನಿಯೋಜನೆ ಮಾಡುವ ಮುನ್ನ ಸಚಿವರು, ಶಾಸಕರೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳಬೇಕು ಎಂಬುದು ಸೇರಿದಂತೆ ಹಲವು ವಿಷಯಗಳು ಸಭೆಯಲ್ಲಿ ಪ್ರಸ್ತಾಪವಾಗಿವೆ ಎಂದು ಮೂಲಗಳು ತಿಳಿಸಿವೆ.