ಜೈಪುರ(ಡಿ.04): ಬಹುಶಃ ಆಧುನಿಕ ಭಾರತದ ಪ್ರಜಾಪ್ರಭುತ್ವ ರಾಜಕೀಯ ನಾಯಕರ ಅಪ್ರಬುದ್ಧ ಹೇಳಿಕೆಗಳಿಂದ ತನ್ನ ಘನತೆಯನ್ನು ಕಳೆದುಕೊಳ್ಳುತ್ತಿದೆ.

ಚುನಾವಣೆಗಳಲ್ಲಿ ಚರ್ಚೆಯಾಗಬೇಕಿದ್ದ ಜನರ ನೈಜ ಸಮಸ್ಯೆಗಳ ಕುರಿತು ಮಾತನಾಡುವ ಒಬ್ಬ ರಾಜಕಾರಣಿಯೂ ಕಾಣಸಿಗುವುದು ಇಂದಿನ ದಿನಮಾನಗಳಲ್ಲಿ ಕಷ್ಟವಾಗುತ್ತಿದೆ.

ಜನರ ನೈಜ ಸಮಸ್ಯೆಗಳು, ಅವರ ಆಕಾಂಕ್ಷೆಗಳನ್ನು ಮರೆಮಾಚಿ ಪರಸ್ಪರರ ವಿರುದ್ಧ ಕೀಳು  ಪದಗಳನ್ನು ಬಳಸುತ್ತಲೇ ಚುನಾವಣೆ ಗೆಲ್ಲುವ ಹುನ್ನಾರ ರಾಜಕೀಯ ಪಕ್ಷಗಳಲ್ಲಿ ಎದ್ದು ಕಾಣುತ್ತಿದೆ.

ಇದೇ ಕಾರಣಕ್ಕೆ ಒಬ್ಬರು ಚೌಕಿದಾರ್ ಚೋರ್ ಹೈ ಅಂತಾರೆ, ಮತ್ತೊಬ್ಬರು ಪ್ರಧಾನಿ ವಿರುದ್ಧ ಬೇಡದ  ಖಾಸಗಿ ವಿಚರಗಳನ್ನು ಕೆದಕುತ್ತಾರೆ. ಮತ್ತೊಬ್ಬರು ನಾಮದಾರ್, ಕಾಮದಾರ್, ಖಬರಸ್ತಾನ್, ಜನುಧಾರಿ, ಪಪ್ಪು ಮುಂತಾದ ಶಬ್ದಗಳ ಮೂಲಕ ಜನರನ್ನು ರಂಜಿಸುತ್ತಾರೆಯೇ ಹೊರತು ಅವರ ಸಮಸ್ಯೆಗಳತ್ತ ಗಮನಹರಿಸುವುದಿಲ್ಲ.

ಇದಕ್ಕೆ ಪುಷ್ಠಿ ಎಂಬಂತೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಹೊಸ ಹೇಳಿಕೆ ಮತ್ತೊಮ್ಮೆ ವಿವಾದ ಸೃಷ್ಟಿಸಿದೆ. ಪ್ರಧಾನಿ ಮೋದಿ ಭಾರತ್ ಮಾತಾ ಕೀ ಜೈ ಎನ್ನಬಾರದು, ಅಂಬಾನಿ ಕೀ ಜೈ ಎನ್ನಬೇಕು ಎಂಬ ರಾಹುಲ್ ಹೇಳಿಕೆ ಇದೀಗ ಬಿಜೆಪಿ ನಾಯಕರನ್ನು ಕೆರಳಿಸಿದೆ.
 

ಉದ್ಯೋಗಾವಕಾಶ, ರೈತರ ಸಾಲ ಮನ್ನಾ, ರಾಫೆಲ್ ಒಪ್ಪಂದ, ನೋಟು ನಿಷೆಧದ ವಿಷಯಗಳಲ್ಲಿ ಮೋದಿ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದು,  ಮೋದಿ ಭಾರತ್ ಮಾತಾ ಕೀ ಜೈ ಅನ್ನೋ ಬದಲು ಅಂಬಾನಿ ಕೀ ಜೈ ಎನ್ನಬೇಕು ಎಂದು ಕೆಣಕಿದ್ದಾರೆ.

2014 ರ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೀಡಿದ್ದ ಭರವಸೆಗಳು ಈಡೇರಿಲ್ಲ. ಪ್ರಧಾನಿ ಮೋದಿ ಭರವಸೆಯಂತೆ ಉದ್ಯೋಗ ಸೃಷ್ಟಿಯಾಗಿದ್ದರೆ ಆಲ್ವಾರ್ ನಲ್ಲಿ ಯುವಕರೇಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರು? ಎಂದು ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ. 

ಭಾರತ್ ಮಾತೆ ರೈತರ, ದೇಶದ ಯುವಜನತೆಯ, ಮಹಿಳೆಯರ ಕಾರ್ಮಿಕರ ಭಾವನೆಗೆ ಸಂಬಂಧಿಸಿದ್ದಾಗಿದೆ, ಭಾರತ ಮಾತೆ ಬಗ್ಗೆ ಮಾತಾಡುತ್ತೀರಿ ಎಂದಾದರೆ ನೀವು ರೈತರನ್ನು ಹೇಗೆ ನಿರ್ಲಕ್ಷಿಸಲು ಸಾಧ್ಯ ಎಂದು ರಾಹುಲ್ ಈ ವೇಳೆ ಪ್ರಶ್ನಿಸಿದ್ದಾರೆ.

ಇದಕ್ಕೆ ಸೂಕ್ತ ಪ್ರತಿಕ್ರಿಯೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ, ‘ನಾನು ಭಾರತ್ ಮಾತಾ ಕೀ ಜೈ’ ಎನ್ನಬಾರದು ಎಂದು ರಾಹುಲ್ ಗಾಂಧಿ ಫತ್ವಾ ಹೊರಡಿಸಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.