ನವದೆಹಲಿ[ಮಾ.12]: ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಅಟಲ್‌ ಬಿಹಾರಿ ವಾಜಪೇಯಿ ಸರ್ಕಾರ ಹಾಗೂ ಇಂದಿನ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌ ಅವರನ್ನು ಟೀಕಿಸುವ ಭರದಲ್ಲಿ ಜೈಷ್‌ ಎ ಮೊಹಮ್ಮದ್‌ ಉಗ್ರ ಮೌಲಾನಾ ಮಸೂದ್‌ ಅಜರ್‌ಗೆ ‘ಮಸೂದ್‌ ಅಜರ್‌ ಜೀ’ (ಮಸೂದ್‌ ಅಜರ್‌ ಅವರು) ಎಂದು ‘ಗೌರವಯುತ’ವಾಗಿ ಸಂಬೋಧಿಸಿದ್ದು, ತೀವ್ರ ಟೀಕೆಗೆ ಗುರಿಯಾಗಿದೆ.

ದಿಲ್ಲಿಯಲ್ಲಿ ಸೋಮವಾರ ನಡೆದ ಕಾಂಗ್ರೆಸ್‌ ಸಮಾವೇಶದಲ್ಲಿ ಮಾತನಾಡಿದ ರಾಹುಲ್‌, ‘ಪುಲ್ವಾಮಾದಲ್ಲಿ ನಮ್ಮ ಯೋಧರ ಬಸ್ಸಿಗೆ ಬಾಂಬ್‌ ಹಾಕಿದ್ದು ಜೈಷ್‌ ಎ ಮೊಹಮ್ಮದ್‌ ಸಂಘಟನೆಯ ಉಗ್ರ. ಆದರೆ ಈ ಸಂಘಟನೆಯ ಸ್ಥಾಪಕ ಯಾರು? ಮೌಲಾನಾ ಮಸೂದ್‌ ಅಜರ್‌. ಈ ಹಿಂದೆ ಭಾರತದ ಜೈಲಲ್ಲಿ ಬಂಧಿಯಾಗಿದ್ದ ಇದೇ ‘ಮೌಲಾನಾ ಮಸೂದ್‌ ಅಜರ್‌ಜೀ’ಯನ್ನು ಕಂದಹಾರ್‌ ವಿಮಾನ ಅಪಹರಣದ ಸಂದರ್ಭದಲ್ಲಿ ಬಿಟ್ಟು ಬಂದಿದ್ದು, ಈಗ ಭದ್ರತಾ ಸಲಹೆಗಾರರಾಗಿರುವ ಅಂದಿನ ಭಾರತ ಸರ್ಕಾರದ ಅಧಿಕಾರಿ ಅಜಿತ್‌ ದೋವಲ್‌’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಟೀಕೆಯ ಭರದಲ್ಲಿ ಅಜರ್‌ಗೆ ‘ಅಜರ್‌ ಜೀ’ ಎಂದು ರಾಹುಲ್‌ ಸಂಬೋಧಿಸಿದ್ದಕ್ಕೆ ವ್ಯಂಗ್ಯವಾಡಿರುವ ಬಿಜೆಪಿ, ‘ನಮ್ಮ 40 ಯೋಧರನ್ನು ಬಲಿಪಡೆದ ಭಯೋತ್ಪಾದಕನ ಬಗ್ಗೆ ರಾಹುಲ್‌ ಗಾಂಧಿಗೆ ಇಷ್ಟೊಂದು ಗೌರವವೇ?’ ಎಂದು ಟ್ವೀಟರ್‌ನಲ್ಲಿ ಕುಟುಕಿದೆ.

ಈ ಹಿಂದೆ ಕಾಂಗ್ರೆಸ್ಸಿಗ ದಿಗ್ವಿಜಯ ಸಿಂಗ್‌ ಅವರು ಒಸಾಮಾ ಬಿನ್‌ ಲಾಡೆನ್‌ನನ್ನು ‘ಒಸಾಮಾ ಜೀ’ ಎಂದು ಸಂಬೋಧಿಸಿದ್ದರೆ, ಕೇಂದ್ರ ಗೃಹ ಸಚಿವರಾಗಿದ್ದ ಸುಶೀಲ್‌ ಕುಮಾರ್‌ ಶಿಂಧೆ ಅವರು ಉಗ್ರ ಹಫೀಜ್‌ ಸಯೀದ್‌ಗೆ ‘ಹಫೀಜ್‌ ಸಯೀದ್‌ ಸಾಹಬ್‌’ ಎಂದು ಕರೆದು ಎಡವಟ್ಟು ಮಾಡಿಕೊಂಡಿದ್ದರು.