Asianet Suvarna News Asianet Suvarna News

ಕೇಂದ್ರ ವಿರುದ್ಧ ಹೋರಾಡಲು ರಾಹುಲ್ ಮನಸ್ಸು, ಸೋನಿಯಾ ಅಡ್ಡಗಾಲು!

ಕೇಂದ್ರದ ವಿರುದ್ಧ ರಾಹುಲ್‌ ಅಸಹಕಾರ ಚಳವಳಿ?| ಇವಿಎಂ ತಿರುಚಿದ್ದರಿಂದಲೇ ಕಾಂಗ್ರೆಸ್‌ಗೆ ಸೋಲು ಎಂಬ ಪಕ್ಷದ ಡೇಟಾ ಅನಾಲಿಟಿಕ್ಸ್‌ ವಿಭಾಗದ ವರದಿ ಹಿನ್ನೆಲೆ| ಅಸೆಂಬ್ಲಿ ಚುನಾವಣೆಗಳಿಗೆ ಬಹಿಷ್ಕಾರ, ದೇಶವ್ಯಾಪಿ ಹೋರಾಟಕ್ಕೆ ಚಿಂತನೆ| ಇದಕ್ಕೆ ಸೋನಿಯಾ, ಹಿರಿಯ ಕಾಂಗ್ರೆಸ್ಸಿಗರ ವಿರೋಧ

Rahul Gandhi planning a nation wide stir over EVM hacking may boycott assembly poll
Author
Bangalore, First Published Jun 24, 2019, 7:35 AM IST

ನವದೆಹಲಿ[ಜೂ.24]: ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಹೀನಾಯವಾಗಿ ಸೋಲು ಅನುಭವಿಸಲು ವಿದ್ಯುನ್ಮಾನ ಮತಯಂತ್ರಗಳೇ ಕಾರಣ ಎಂಬ ಪಕ್ಷದ ಡೇಟಾ ಅನಾಲಿಟಿಕ್ಸ್‌ ವಿಭಾಗದ ಮುಖ್ಯಸ್ಥರ ಮಾತು ನಂಬಿ ಕೇಂದ್ರ ಸರ್ಕಾರದ ವಿರುದ್ಧ ದೇಶವ್ಯಾಪಿ ಅಸಹಕಾರ ಚಳವಳಿ ಆರಂಭಿಸಲು ಪಕ್ಷಾಧ್ಯಕ್ಷ ರಾಹುಲ್‌ ಗಾಂಧಿ ಯೋಜಿಸಿದ್ದರು.

ಬ್ಯಾಲಟ್‌ ಪೇಪರ್‌ ಮೂಲಕವೇ ಚುನಾವಣೆ ನಡೆಸಬೇಕು ಎಂದು ಆಗ್ರಹಿಸಿ, ಮುಂಬರುವ ಎಲ್ಲ ವಿಧಾನಸಭೆ ಚುನಾವಣೆಗಳನ್ನು ಬಹಿಷ್ಕರಿಸಲು ಕೂಡಾ ಉದ್ದೇಶಿಸಿದ್ದರು. ಆದರೆ ರಾಹುಲ್‌ರ ಈ ಪ್ರಯತ್ನದ ಬಗ್ಗೆ ಪಕ್ಷದ ಹಿರಿಯರಿಂದ ಅಭಿಪ್ರಾಯ ಸಂಗ್ರಹಿಸಿದ ಸೋನಿಯಾ ಗಾಂಧಿ, ಅಸಹಕಾರ ಚಳವಳಿಗೆ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ಆಂಗ್ಲ ವಾರಪತ್ರಿಕೆಯೊಂದು ವರದಿ ಮಾಡಿದೆ.

ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ 164ರಿಂದ 184 ಸ್ಥಾನಗಳನ್ನು ಗೆಲ್ಲಲಿದೆ ಎಂದು ಪಕ್ಷದ ಡೇಟಾ ಅನಾಲಿಟಿಕ್ಸ್‌ ವಿಭಾಗದ ಮುಖ್ಯಸ್ಥ ಪ್ರವೀಣ್‌ ಚಕ್ರವರ್ತಿ ಅವರು ವರದಿ ನೀಡಿದ್ದರು. ಫಲಿತಾಂಶ ಉಲ್ಟಾಆದ ಹಿನ್ನೆಲೆಯಲ್ಲಿ ರಾಹುಲ್‌ ಅವರು ವಿವರಣೆ ಕೇಳಿದ್ದರು. ಕಳೆದೊಂದು ವರ್ಷದಿಂದ ಖರೀದಿಸಲಾಗಿರುವ ಇವಿಎಂಗಳನ್ನು ತಿರುಚಲಾಗಿರುವುದರಿಂದ ಫಲಿತಾಂಶ ಈ ರೀತಿ ಬಂದಿದೆ ಎಂದು ಚಕ್ರವರ್ತಿ ಹೇಳಿದ್ದರು. ಈ ಹಿನ್ನೆಲೆಯಲ್ಲಿ ರಾಹುಲ್‌ ಅವರು ಸರ್ಕಾರದ ವಿರುದ್ಧ ಅಸಹಕಾರ ಚಳವಳಿಗೆ ಮುಂದಾಗಿದ್ದರು ಎಂದು ಪ್ರತಿ ಭಾನುವಾರ ಪ್ರಕಟವಾಗುವ ‘ಸಂಡೇ ಗಾರ್ಡಿಯನ್‌’ ವರದಿ ಮಾಡಿದೆ.

ದೇಶಾದ್ಯಂತ ಅಸಹಕಾರ ಚಳವಳಿ ನಡೆಸಿ, ಸರ್ಕಾರದ ವಿರುದ್ಧ ಹೋರಾಟ ನಡೆಸುವುದು. ವಿಧಾನಸಭೆ ಚುನಾವಣೆಗಳನ್ನು ಬಹಿಷ್ಕರಿಸುವುದು, ಬ್ಯಾಲಟ್‌ ಪೇಪರ್‌ ಮೂಲಕ ಚುನಾವಣೆ ನಡೆಸುವ ಪದ್ಧತಿಯನ್ನು ಆಗ್ರಹಿಸುವುದು ರಾಹುಲ್‌ ಉದ್ದೇಶವಾಗಿತ್ತು. ಆದರೆ ರಾಹುಲ್‌ರ ಈ ಅಸಹಕಾರ ಚಳವಳಿಯ ಯಶಸ್ಸಿನ ಬಗ್ಗೆ ಸೋನಿಯಾಗೆ ಸಂದೇಹ ಮೂಡಿತು. ಹೀಗಾಗಿ ಅವರು ಪಕ್ಷದ ಹಿರಿಯ ನಾಯಕರನ್ನು ಸಂಪರ್ಕಿಸಿದರು. ಈ ವೇಳೆ ಬಹುತೇಕ ನಾಯಕರು ರಾಹುಲ್‌ ಯೋಜನೆಗೆ ವಿರೋಧ ಸೂಚಿಸಿದರು.

ಇಂತಹ ಹೋರಾಟದಿಂದ ಕಾಂಗ್ರೆಸ್ಸಿಗಿರುವ ವಿಶ್ವಾಸಾರ್ಹತೆ ಮತ್ತಷ್ಟುಹಾಳಾಗುತ್ತದೆ. ಛತ್ತೀಸ್‌ಗಢ, ರಾಜಸ್ಥಾನ ಹಾಗೂ ಮಧ್ಯಪ್ರದೇಶ ಚುನಾವಣೆಗಳಲ್ಲಿ ಕಾಂಗ್ರೆಸ್‌ ಸಾಧಿಸಿದ ಗೆಲುವಿನ ಬಗ್ಗೆಯೇ ಪ್ರಶ್ನೆಗಳು ಏಳುತ್ತವೆ. ಜತೆಗೆ ವಿಧಾನಸಭೆ ಚುನಾವಣೆ ಬಹಿಷ್ಕರಿಸಿದರೆ, ಪ್ರಾದೇಶಿಕ ಪಕ್ಷಗಳು ಕಾಂಗ್ರೆಸ್ಸಿನ ಸ್ಥಾನವನ್ನು ಆಕ್ರಮಿಸಿಕೊಳ್ಳುತ್ತವೆ ಎಂದು ಅಹ್ಮದ್‌ ಪಟೇಲ್‌, ಎ.ಕೆ.ಆ್ಯಂಟನಿ ಸೇರಿದಂತೆ ಹಲವು ನಾಯಕರು ಎಚ್ಚರಿಸಿದರು. ಹೀಗಾಗಿ ರಾಹುಲ್‌ ಪ್ರಸ್ತಾಪವನ್ನು ಸೋನಿಯಾ ವಿರೋಧಿಸಿದರು ಎಂದು ವರದಿ ಹೇಳಿದೆ.

ತಮ್ಮ ಈ ಚಳವಳಿಗೆ ಅಹ್ಮದ್‌ ಪಟೇಲ್‌ರಿಂದಲೇ ಅಡ್ಡಿ ಎದುರಾಗಿದ್ದಕ್ಕೆ ಆಕ್ರೋಶಗೊಂಡ ರಾಹುಲ್‌ ಗಾಂಧಿ, ಇತ್ತೀಚೆಗೆ ನಡೆದ ಪಕ್ಷದ ಹಲವು ಸಭೆಗಳಿಂದ ಅಹ್ಮದ್‌ ಪಟೇಲ್‌ರನ್ನು ದೂರವೇ ಇಟ್ಟರು. ಮತ್ತೊಂದೆಡೆ ಅಹ್ಮದ್‌ ಪಟೇಲ್‌ ಕೂಡಾ ರಾಹುಲ್‌ರ 49ನೇ ಜನ್ಮದಿನಕ್ಕೆ ಟ್ವೀಟರ್‌ನಲ್ಲಿ ಶುಭ ಕೋರುವುದರಿಂದ ದೂರವೇ ಉಳಿದುಕೊಂಡರು ಎಂದು ಪತ್ರಿಕೆ ವರದಿ ಮಾಡಿದೆ.

Follow Us:
Download App:
  • android
  • ios