ಪ್ರಧಾನಿ ಮೋದಿ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ| ಮೇಘಾಲಯದ ಕಲ್ಲಿದ್ದಲು ಗಣಿ ದುರಂತ ಪ್ರಸ್ತಾಪ| ಮುಂದುವರೆದ ಕಾರ್ಮಿಕರ ರಕ್ಷಣಾ ಕಾರ್ಯಾಚರಣೆ| ಪ್ರಧಾನಿ ಮೋದಿ ಫೋಟೋಗೆ ಪೋಸ್ ಕೊಡ್ತಾರೆ ಎಂದ ರಾಹುಲ್| ಟ್ವಿಟ್ಟರ್ ಮೂಲಕ ಪ್ರಧಾನಿ ಮೋದಿ ಕಾಲೆಳೆದ ರಾಹುಲ್ ಗಾಂಧಿ
ನವದೆಹಲಿ(ಡಿ.26):ಪಂಚ ರಾಜ್ಯ ವಿಧಾನಸಭೆ ಚುನಾವಣೆಗಳಲ್ಲಿ ಭರ್ಜರಿ ಜಯ ದೊರೆತ ಮೇಲೆ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತುಸು ಜೋರಾಗಿಯೇ ವಾಗ್ದಾಳಿ ನಡೆಸುತ್ತಿದ್ದಾರೆ.
ಮೇಘಾಲಯದಲ್ಲಿ ಅಕ್ರಮವಾಗಿ ನಡೆಸಲಾಗುತ್ತಿದ್ದ ಕಲ್ಲಿದ್ದಲು ಗಣಿಯಲ್ಲಿ ಸಿಲುಕಿರುವ ಕಾರ್ಮಿಕರ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದ್ದು, ರಾಹುಲ್ ಗಾಂಧಿ ಪ್ರಧಾನಿ ವಿರುದ್ಧ ಟ್ವಿಟರ್‌ನಲ್ಲಿ ಕಿಡಿ ಕಾರಿದ್ದಾರೆ.
‘ರಕ್ಷಣಾ ಕಾರ್ಯಾಚರಣೆಗೆ ಸಾಧನಗಳ ಕೊರತೆಯಾಗಿದ್ದು ಒಂದೆಡೆ ಗಣಿ ಕಾರ್ಮಿಕರು ಆಮ್ಲಜನಕವಿಲ್ಲದೇ ಪರದಾಡುತ್ತಿದ್ದರೆ, ಪ್ರಧಾನಿ ನರೇಂದ್ರ ಮೋದಿ ಫೋಟೊಗಳಿಗೆ ಪೋಸ್ ಕೊಡುತ್ತಿದ್ದಾರೆ..’ ಎಂದು ರಾಹುಲ್ ಟ್ವೀಟ್ಟರ್ ಮೂಲಕ ಹರಿಹಾಯ್ದಿದ್ದಾರೆ.
ಕೇಂದ್ರ ಸರ್ಕಾರ ಮೇಘಾಲಯದಲ್ಲಿ ನಡೆಯುತ್ತಿರುವ ರಕ್ಷಣಾ ಕಾರ್ಯಾಚರಣೆಗೆ ಅಗತ್ಯವಿರುವ ಸಾಧನಗಳನ್ನು ಒದಗಿಸುವುದರತ್ತ ಗಮನ ಹರಿಸುತ್ತಿಲ್ಲ ಎಂದೂ ರಾಹುಲ್ ಆರೋಪಿಸಿದ್ದಾರೆ.
ಪ್ರಧಾನಮಂತ್ರಿಗಳೇ ದಯವಿಟ್ಟು ಗಣಿ ನೌಕರರನ್ನು ರಕ್ಷಿಸಿ ಎಂದು ಟ್ವೀಟ್ ಮಾಡುವ ಮೂಲಕ ರಾಹುಲ್ ಗಾಂಧಿ ಸರ್ಕಾರದ ಗಮನ ಸೆಳೆಯಲು ಪ್ರಯತ್ನಿಸಿದ್ದಾರೆ.
