ಧರ್ಮಪುರ್‌[ಫೆ.15]: ಮಹಿಳೆಯೊಬ್ಬರು, ವ್ಯಾಲಂಟೈನ್ಸ್‌ ದಿನವೇ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಕೆನ್ನೆಗೆ ಮುತ್ತಿಕ್ಕಿದ ಅಚ್ಚರಿಯ ಘಟನೆ ಗುರುವಾರ ಇಲ್ಲಿ ನಡೆದಿದೆ. ವಲ್ಸದ್‌ನಲ್ಲಿ ಆಯೋಜನೆಗೊಂಡಿದ್ದ ಸಮಾವೇಶದಲ್ಲಿ ಭಾಗಿಯಾಗಲು ಆಗಮಿಸಿದ್ದ ರಾಹುಲ್‌ ವೇದಿಕೆ ಏರಿದ್ದರು.

ರಾಹುಲ್‌ ಭಾಷಣಕ್ಕೂ ಮುನ್ನ ಅವರಿಗೆ ಹಾರ ಹಾಕಲು ವೇದಿಕೆ ಏರಿದ ಮಹಿಳೆಯೊಬ್ಬರ ಗುಂಪಿನಲ್ಲಿದ್ದ ಕ್ಷಮೀರಾಬೆನ್‌ (60) ಏಕಾಏಕಿ ರಾಹುಲ್‌ ಕೆನ್ನೆಗೆ ಮುತ್ತಿಕ್ಕಿದ್ದರು. ಘಟನೆಯಿಂದ ಕ್ಷಣಕಾಲ ರಾಹುಲ್‌ ತಬ್ಬಿಬ್ಬಾದರು.

ಬಳಿಕ ತಮ್ಮ ಮುತ್ತಿನ ಬಗ್ಗೆ ಸುದ್ದಿಗಾರರ ಜೊತೆ ಮಾತನಾಡಿದ ಬೆನ್‌, ಇದೇನು ಪೂರ್ವಯೋಜಿತವಲ್ಲ. ಆ ತಕ್ಷಣಕ್ಕೆ ಮನಸ್ಸಿನಲ್ಲಿ ಹೊಳೆದಂತೆ ನಡೆದುಕೊಂಡಿದ್ದೇನೆ. ನಾನು 48 ವರ್ಷಗಳಿಂದ ಕಾಂಗ್ರೆಸ್‌ ಕಾರ್ಯಕರ್ತೆ. ರಾಹುಲ್‌ ಅವರ ಏಳಿಗೆಯನ್ನು ಬಯಸುವವರಲ್ಲಿ ನಾನೂ ಕೂಡಾ ಒಬ್ಬಳು. ರಾಹುಲ್‌ ನನ್ನ ಸೋದರನಿದ್ದಂತೆ ಎಂದು ಸ್ಪಷ್ಟನೆ ನೀಡಿದ್ದಾರೆ.