ರಾಜೀವ್ ಹಂತಕರನ್ನು ಕ್ಷಮಿಸಿದ ರಾಹುಲ್ಕಾಲಾ ನಿರ್ದೇಶಕ ಪಿ. ರಂಜಿತ್ ಜೊತೆ ಚರ್ಚೆನಮ್ಮ ಕುಟುಂಬ ರಾಜೀವ್ ಹಂತಕರನ್ನು ಕ್ಷಮಿಸಿದೆನ್ಯಾಯಾಲಯ ಕ್ಷಮಾದಾನ ನೀಡಿದರೆ ಅಭ್ಯಂತರವಿಲ್ಲ
ನವದೆಹಲಿ(ಜು.11): ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಂತಕರನ್ನು ತಮ್ಮ ಕುಟುಂಬ ಕ್ಷಮಿಸಿದ್ದು, ಒಂದು ವೇಳೆ ನ್ಯಾಯಾಲಯ ಅವರಿಗೆ ಕ್ಷಮಾದಾನ ನೀಡಿದರೆ ತಮ್ಮದೇನೂ ಅಭ್ಯಂತರವಿಲ್ಲ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
ರಾಜೀವ್ ಹಂತಕರನ್ನು ತಾವು ಮತ್ತು ತಮ್ಮ ಕುಟುಂಬ ಈಗಾಗಲೇ ಕ್ಷಮಿಸಿದೆ. ನ್ಯಾಯಾಲಯ ಅವರಿಗೆ ಶಿಕ್ಷೆ ನೀಡುತ್ತದೆಯೋ ಅತವಾ ಬಿಡುಗಡೆ ಮಾಡುತ್ತದೆಯೋ ಎಂಬುದರ ಕುರಿತು ನಾವ್ಯಾರೂ ತಲೆ ಕೆಡಿಸಿಕೊಂಡಿಲ್ಲ ಎಂದು ರಾಹುಲ್ ಸ್ಪಷ್ಟಪಡಿಸಿದ್ದಾರೆ.
ಕಾಲಾ ಚಿತ್ರದ ನಿರ್ದೇಶಕ ಪಿ. ರಂಜಿತ್ ಮತ್ತು ನಟ ಕಾಲೈಸರನ್ ಇಂದು ನವದೆಹಲಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಮಾತುಕತೆ ಸಂದರ್ಭದಲ್ಲಿ ರಾಜೀವ್ ಗಾಂಧಿ ಹಂತಕರ ಕುರಿತು ಚರ್ಚೆ ಮಾಡಿದ್ದು, ರಾಜೀವ್ ಹಂತಕರನ್ನು ತಾವು ಈಗಾಗಲೇ ಕ್ಷಮಿಸಿದ್ದಾಗಿ ರಾಹುಲ್ ಹೇಳಿದ್ದಾರೆ.
ಮಾಜಿ ಪ್ರಧಾನಿ ರಾಜೀವ್ ಗಾಂದಿ ಅವರ ಹತ್ಯೆ ಆರೋಪ ಹೊತ್ತಿರುವ ಪೆರಾರಿವಾಲನ್ ಮತ್ತವನ ಸಂಗಡಿಗರು ಕಳೆದ 27 ವರ್ಷಗಳಿಂದ ಜೈಲಿನಲ್ಲಿದ್ದು, ಅವರ ಬಿಡುಗಡೆಗಾಗಿ ಆಗ್ರಹಿಸಿ ತಮಿಳುನಾಡು ಸರ್ಕಾರ ರಾಷ್ಟ್ರಪತಿ ಅವರಿಗೆ ಮನವಿ ಸಲ್ಲಿಸಿತ್ತು. ಆದರೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಈ ಮನವಿಯನ್ನು ತಿರಸ್ಕರಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
