ನವದೆಹಲಿ: ಫ್ರಾನ್ಸ್‌ನ ಡಸಾಲ್ಟ್‌ ಏವಿಯೇಷನ್‌ ಕಂಪನಿಯು ಭಾರತಕ್ಕೆ ರಫೇಲ್‌ ಯುದ್ಧ ವಿಮಾನ ಪೂರೈಕೆ ವೇಳೆ ಅನಿಲ್‌ ಅಂಬಾನಿ ಒಡೆತನದ ಕಂಪನಿ ಆಯ್ಕೆ ಮಾಡಿಕೊಂಡಿದ್ದರ ಹಿಂದೆ 30000 ಕೋಟಿ ರು. ಹಗರಣ ನಡೆದಿದೆ ಎಂದು ಆರೋಪಿಸುತ್ತಿರುವ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ, ತಮ್ಮ ಆಪ್ತನೊಬ್ಬನಿಗೆ ಇದೇ ರೀತಿಯ ಆಫ್‌ಸೆಟ್‌ ಒಪ್ಪಂದ ದೊರಕಿಸಿಕೊಟ್ಟವಿಷಯ ಬೆಳಕಿಗೆ ಬಂದಿದೆ. ಈ ಬಗ್ಗೆ ತಮಗೆ ದಾಖಲೆಗಳು ಸಿಕ್ಕಿವೆ ಎಂದು ರಾಷ್ಟ್ರಮಟ್ಟದ ಇಂಗ್ಲಿಷ್‌ ಸುದ್ದಿವಾಹಿನಿ ರಿಪಬ್ಲಿಕ್‌ ಟೀವಿ ವರದಿ ಮಾಡಿವೆ.

ಅಲ್ಲದೆ, ರಾಹುಲ್‌ ಗಾಂಧಿ ಅವರ ಉದ್ಯಮ ಪಾಲುದಾರರಿಗೆ ಸ್ಕಾರ್ಪೀನ್‌ ದರ್ಜೆಯ ಸಬ್‌ಮರೀನ್‌ ಖರೀದಿಯಲ್ಲಿ ಉಪಗುತ್ತಿಗೆ ದೊರಕಿದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರೂ ಗಂಭೀರ ಆರೋಪ ಮಾಡಿದ್ದಾರೆ.

ಇದು ರಫೇಲ್‌ ಖರೀದಿ ವಿಷಯದಲ್ಲಿ ನರೇಂದ್ರ ಮೋದಿ ಮತ್ತು ಅನಿಲ್‌ ಅಂಬಾನಿ ವಿರುದ್ಧ ಗಂಭೀರ ಹಗರಣದ ಆರೋಪ ಮಾಡುತ್ತಿದ್ದ ರಾಹುಲ್‌ ಮತ್ತು ಯುಪಿಎ ನಾಯಕರ ಬಣ್ಣ ಬಯಲು ಮಾಡಿದೆ. ಜೊತೆಗೆ ಲೋಕಸಭಾ ಚುನಾವಣೆ ನಡೆಯುತ್ತಿರುವ ಹೊತ್ತಿಗೆ ಬೆಳಕಿಗೆ ಬಂದ ಈ ಹಗರಣ, ಎನ್‌ಡಿಎ ನಾಯಕರಿಗೆ ಹೊಸ ಅಸ್ತ್ರ ದೊರಕಿಸಿಕೊಟ್ಟಿದರೆ, ಕಾಂಗ್ರೆಸ್ಸಿಗರಿಗೆ ಭಾರೀ ಮುಜುಗರ ತಂದೊಡ್ಡಿದೆ.

ಏನೀ ಪ್ರಕರಣ?: 2001ರಲ್ಲಿ ರಾಹುಲ್‌ ಗಾಂಧಿ ಬ್ರಿಟನ್‌ನಲ್ಲಿ ಬ್ಯಾಕ್‌ಆಫ್ಸ್‌ ಎಂಬ ಕಂಪನಿ ಹೊಂದಿದ್ದರು. ಇದರಲ್ಲಿ ಅಮೆರಿಕ ಮೂಲದ, ರಾಹುಲ್‌ ಆಪ್ತ ಉಲ್ರಿಕ್‌ ಮೆಕ್‌ನೈಟ್‌ ಕೂಡಾ ಶೇ.35ರಷ್ಟುಪಾಲು ಹೊಂದಿದ್ದರು.

ಇದೇ ಸಮಯದಲ್ಲಿ ಅಂದಿನ ಯುಪಿಎ ಸರ್ಕಾರ ಫ್ರಾನ್ಸ್‌ನ ಡಿಸಿಎನ್‌ಎಸ್‌ ಕಂಪನಿಯಿಂದ 6 ಸ್ಕಾರ್ಪಿಯನ್‌ ಕ್ಲಾಸ್‌ ಸಬ್‌ಮರೀನ್‌ ಖರೀದಿಗೆ ಒಪ್ಪಂದ ಮಾಡಿಕೊಂಡಿತ್ತು. ಅದೇ ವರ್ಷ ಡಿಸಿಎನ್‌ಎಸ್‌ ಕಂಪನಿಯು, ಫ್ಲಾಶ್‌ ಪೋಜ್‌ರ್‍ ಇಂಡಿಯಾ ಪ್ರೈ.ಲಿ ಜೊತೆ ಆಫ್‌ಸೆಟ್‌ ಒಪ್ಪಂದ ಮಾಡಿಕೊಂಡಿತ್ತು. ಈ ಒಪ್ಪಂದ ಆದ ಕೆಲ ಸಮಯದಲ್ಲಿ ಫ್ಲಾಶ್‌ ಫೋಜ್‌ರ್‍ ಕಂಪನಿಯು ಆಪ್ಟಿಕಲ್‌ ಆರ್ಮರ್‌ ಲಿ. ಎಂಬ ಕಂಪನಿಯಲ್ಲಿ ವಿಲೀನಗೊಳ್ಳುತ್ತದೆ. ಮುಂದೆ ಒಂದೇ ವರ್ಷದಲ್ಲಿ ರಾಹುಲ್‌ ಆಪ್ತ ಮೆಕ್‌ನೈಟ್‌ ಆಪ್ಟಿಕಲ್‌ ಆರ್ಮರ್‌ ನಿರ್ದೇಶಕರಾಗಿ ನೇಮಕಗೊಳ್ಳುತ್ತಾರೆ. 2013ರಲ್ಲಿ ಮೆಕ್‌ನೈಟ್‌, ಕಾಂಪೋಸಿಟ್‌ ರೆಸಿನ್‌ ಡೆವಲಪ್‌ಮೆಂಟ್ಸ್‌ ಲಿ. ಎಂಬ ಕಂಪನಿ ಸೇರುತ್ತಾರೆ. ಇದಾದ ಕೆಲವೇ ಸಮಯದಲ್ಲಿ ಈ ಕಂಪನಿಯನ್ನು ಫ್ಲಾಶ್‌ ಪೋಜ್‌ರ್‍ ಕಂಪನಿ ಖರೀದಿ ಮಾಡುತ್ತದೆ. 2014ರಲ್ಲಿ ಆಪ್ಟಿಕಲ್‌ ಆರ್ಮರ್‌ ಕಂಪನಿಯು, ರಾಹುಲ್‌ ಆಪ್ತಗೆ ಕಂಪನಿಯಲ್ಲಿನ ಶೇ.4.9ರಷ್ಟುಷೇರುಗಳನ್ನು ನೀಡುತ್ತದೆ. ಈ ಮೂಲಕ ಪರೋಕ್ಷ ರೀತಿಯಲ್ಲಿ ತಮ್ಮ ಆಪ್ತನ ಕಂಪನಿಗೆ ರಾಹುಲ್‌, ಆಫ್‌ಸೆಟ್‌ ಡೀಲ್‌ ಗಿಟ್ಟಿಸಿಕೊಟ್ಟಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಜೇಟ್ಲಿ ಹೇಳಿದ್ದೇನು?: ರಾಹುಲ್‌ ಮತ್ತು ಪ್ರಿಯಾಂಕಾ ಗಾಂಧಿ ನಿರ್ದೇಶಕರಾಗಿದ್ದ ಬ್ಯಾಕ್‌ಆಫ್ಸ್‌ ಎಂಬ ಕಂಪನಿ ಭಾರತದಲ್ಲಿ ನೊಂದಾಯಿತವಾಗಿತ್ತು. ಹೆಚ್ಚು ಕಡಿಮೆ ಇದೇ ಅವಧಿಯಲ್ಲಿ ಬ್ರಿಟನ್‌ನಲ್ಲೂ ಇದೇ ಹೆಸರಿನ ಕಂಪನಿ ನೊಂದಾಯಿತವಾಗಿತ್ತು. ಬ್ರಿಟನ್‌ ಕಂಪನಿಯಲ್ಲಿ ರಾಹುಲ್‌, ಅವರ ಆಪ್ತ ಮೆಕ್‌ನೈಟ್‌ ಮತ್ತು ಖ್ಯಾತ ನಟ ಅಮಿತಾಭ್‌ ಬಚ್ಚನ್‌ ಅವರ ಸೋದರ ಅಜಿತಾಬ್‌ ಬಚ್ಚನ್‌ ಪಾಲುದಾರರಾಗಿದ್ದರು.

2009ರಲ್ಲಿ ರಾಹುಲ್‌ ಬ್ರಿಟನ್‌ ಕಂಪನಿಯಿಂದ ಹೊರಬಂದಿದ್ದರೆ, ಭಾರತದಲ್ಲಿದ್ದ ಬ್ಯಾಕ್‌ಆಫ್ಸ್‌ ಕಂಪನಿ 2010ರಲ್ಲಿ ಬಾಗಿಲು ಮುಚ್ಚಿತ್ತು. ಆದರೆ ಕಂಪನಿಯ ಉಳಿದ ಪಾಲುದಾರರ ಹಾಗೆಯೇ ಮುಂದುವರೆದಿದ್ದರು. ಮೆಕ್‌ನೈಟ್‌ ವಿವಾಹವಾಗಿದ್ದು, ಕಾಂಗ್ರೆಸ್‌ ನಾಯಕರೊಬ್ಬರ ಪುತ್ರಿಯನ್ನು. ಈಗಲೂ ಮೆಕ್‌ನೈಟ್‌ ರಾಹುಲ್‌ ಆಪ್ತ ಬಳಗದಲ್ಲಿಯೇ ಇದ್ದಾರೆ.

ಹಾಗಿದ್ದರೆ ಡೀಲ್‌ನಲ್ಲಿ ರಾಹುಲ್‌ ಪಾತ್ರ ಏನು? ಅವರು ರಕ್ಷಣಾ ಡೀಲರ್‌ ಆಗಿ ಉದ್ಯಮ ಸ್ಥಾಪಿಸಲು ಬಯಸಿದ್ದರೇ? ಇದು ಗಂಭೀರ ವಿಷಯ. ಈ ವಿಷಯದ ಬಗ್ಗೆ ಕಾಂಗ್ರೆಸ್‌ ನಾಯಕರು ಆದಷ್ಟುಬೇಗ ಸ್ಪಷ್ಟಪಡಿಸಬೇಕು ಎಂದು ಆಗ್ರಹ ಮಾಡಿದ್ದಾರೆ.