ತಿರುಪತಿ[ಫೆ.23]: ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಶುಕ್ರವಾರ ತಿರುಮಲ- ತಿರುಪತಿ ಬೆಟ್ಟಹತ್ತಿ ವಿಶ್ವವಿಖ್ಯಾತ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದರು. ತಿರುಪತಿಯ ಅಲಿಪಿರಿಯಿಂದ ಮಧ್ಯಾಹ್ನ ಬೆಟ್ಟಹತ್ತಲು ಆರಂಭಿಸಿದ ಅವರು, 10 ಕಿ.ಮೀ. ದೂರವನ್ನು ಎರಡು ತಾಸಿನಲ್ಲಿ ಕ್ರಮಿಸಿದರು.

ದೇಗುಲದ ಬಾಗಿಲಿಗೆ ಆಗಮಿಸಿದ ಅವರಿಗೆ ಆಡಳಿತ ಮಂಡಳಿಯಿಂದ ಅದ್ಧೂರಿ ಸ್ವಾಗತ ನೀಡಲಾಯಿತು. ರಾಹುಲ್‌ಗೆ ಸೋದರಿ ಪ್ರಿಯಾಂಕಾ ಪುತ್ರ ರೈಹಾನ್‌, ಕೇರಳ ಮಾಜಿ ಸಿಎಂ ಊಮ್ಮನ್‌ ಚಾಂಡಿ ಸೇರಿದಂತೆ ಹಲವರು ಸಾಥ್‌ ನೀಡಿದರು. ದೇವಸ್ಥಾನದಲ್ಲಿ ದರ್ಶನ ಪಡೆಯುವ ಮುನ್ನ ಅತಿಥಿಗೃಹಕ್ಕೆ ತೆರಳಿ ರಾಹುಲ್‌ ವಿಶ್ರಾಂತಿ ಪಡೆದರು. ಬಳಿಕ ದೇವಸ್ಥಾನದಲ್ಲಿ 20 ನಿಮಿಷಗಳನ್ನು ಕಳೆದರು. ದೇಗುಲದ ಅಧಿಕಾರಿಗಳು ರೇಷ್ಮೆ ವಸ್ತ್ರ, ಪ್ರಸಾದ ಹಾಗೂ ಸ್ಮರಣಿಕೆಯೊಂದನ್ನು ನೀಡಿದರು.

ರಾಹುಲ್‌ ಭೇಟಿ ಹಿನ್ನೆಲೆಯಲ್ಲಿ ತಿರುಮಲ ಹಾಗೂ ಅದಕ್ಕೆ ಸಾಗುವ ದಾರಿಯುದ್ದಕ್ಕೂ ಬಿಗಿಭದ್ರತೆ ಮಾಡಲಾಗಿತ್ತು. ತಿಮ್ಮಪ್ಪನ ದರ್ಶನ ಬಳಿಕ ರಾಹುಲ್‌ ಅವರು ಕಾಂಗ್ರೆಸ್ಸಿನ ರಾರ‍ಯಲಿಯಲ್ಲಿ ಪಾಲ್ಗೊಂಡರು.