ನವದೆಹಲಿ: ಲೋಕಸಭೆ ಚುನಾವಣೆಯ ಹೀನಾಯ ಸೋಲಿನ ಹಿನ್ನೆಲೆಯಲ್ಲಿ ತೀವ್ರವಾಗಿ ಮನನೊಂದಿರುವ ರಾಹುಲ್‌ ಗಾಂಧಿ ಅವರು ಕಾಂಗ್ರೆಸ್‌ ಅಧ್ಯಕ್ಷ ಸ್ಥಾನ ತ್ಯಜಿಸಲು ಹಟ ಹಿಡಿದು ಕುಳಿತಿದ್ದಾರೆ. ರಾಜೀನಾಮೆ ನೀಡುವ ತಮ್ಮ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇಲ್ಲ. ಅಧ್ಯಕ್ಷ ಸ್ಥಾನಕ್ಕೆ ಪಕ್ಷ ಹೊಸ ನಾಯಕನನ್ನು ಹುಡುಕಿಕೊಳ್ಳಲಿ ಎಂದು ಕಾಂಗ್ರೆಸ್ಸಿನ ಹಿರಿಯ ನಾಯಕರಾಗಿರುವ ಅಹಮದ್‌ ಪಟೇಲ್‌ ಹಾಗೂ ಕೆ.ಸಿ. ವೇಣುಗೋಪಾಲ್‌ ಅವರಿಗೆ ಸೋಮವಾರ ಅತ್ಯಂತ ಸ್ಪಷ್ಟವಾಗಿ ಹೇಳಿದ್ದಾರೆ ಎಂದು ವರದಿಗಳು ತಿಳಿಸಿವೆ.

ಶನಿವಾರ ನಡೆದ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ಸಭೆಯಲ್ಲೂ ರಾಹುಲ್‌ ರಾಜೀನಾಮೆಗೆ ಮುಂದಾಗಿದ್ದರು. ಆದರೆ ಪಕ್ಷದ ನಾಯಕರು ರಾಹುಲ್‌ ರಾಜೀನಾಮೆ ತಿರಸ್ಕರಿಸಿ, ಅವರಿಗೆ ಪಕ್ಷ ಮರುಸಂಘಟಿಸಲು ಹೆಚ್ಚಿನ ಹೊಣೆಗಾರಿಕೆ ನೀಡಿದ್ದರು. ಆದರೂ ರಾಹುಲ್‌ ಮನಸ್ಸು ಬದಲಿಸಿಲ್ಲ. ತೀವ್ರವಾಗಿ ನೊಂದಿರುವ ಅವರು ನೂತನವಾಗಿ ಆಯ್ಕೆಯಾಗಿರುವ ಕಾಂಗ್ರೆಸ್ಸಿನ ಸಂಸದರನ್ನು ಭೇಟಿಯಾಗಲು ಸೋಮವಾರ ನಿರಾಕರಿಸಿದ್ದಾರೆ. ಅಹಮದ್‌ ಪಟೇಲ್‌ ಹಾಗೂ ವೇಣು ಅವರೊಂದಿಗೆ ಮಾತ್ರವೇ ಸಮಾಲೋಚನೆ ನಡೆಸಿದ್ದಾರೆ ಎಂದು ವರದಿಗಳು ಹೇಳಿವೆ.

ಕಾಂಗ್ರೆಸ್‌ ಅಧ್ಯಕ್ಷ ಸ್ಥಾನ ತ್ಯಜಿಸುವ ನಿಶ್ಚಯ ಹೊಂದಿದ್ದೇನೆ. ಹಾಗಂತ ಆ ಹುದ್ದೆಯನ್ನು ಅರ್ಧದಲ್ಲೇ ಬಿಟ್ಟು ಹೋಗುವುದಿಲ್ಲ. ಹೊಸ ವ್ಯಕ್ತಿಯನ್ನು ಹುಡುಕಿಕೊಳ್ಳಲು ಪಕ್ಷಕ್ಕೆ ಸಮಯಾವಕಾಶ ನೀಡುತ್ತೇನೆ ಎಂದು ರಾಹುಲ್‌ ಸ್ಪಷ್ಟಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ರಾಹುಲ್‌ ರಾಜೀನಾಮೆಗೆ ಮುಂದಾದಾಗ ಅವರನ್ನು ಸಮಾಧಾನಪಡಿಸಲು ಯತ್ನಿಸಿದ್ದ ಅವರ ತಾಯಿ ಸೋನಿಯಾ ಗಾಂಧಿ ಹಾಗೂ ಸೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಕೂಡ ಈಗ ಕಾಂಗ್ರೆಸ್‌ ಅಧ್ಯಕ್ಷರ ನಿರ್ಧಾರಕ್ಕೆ ಸಮ್ಮತಿ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಕಾಂಗ್ರೆಸ್ಸಿನ ನಾಯಕತ್ವ ಬದಲಾಗಬೇಕು, ಪಕ್ಷ ಸಂಪೂರ್ಣ ಬದಲಾಗಬೇಕು ಎಂದು ವಾದಿಸುತ್ತಿದ್ದಾರೆ ಎಂದು ಮೂಲಗಳು ವಿವರಿಸಿವೆ.

ಸಿಡಬ್ಲ್ಯುಸಿ ಸಭೆಯಲ್ಲೂ ರಾಹುಲ್‌ ರಾಜೀನಾಮೆ ಇಂಗಿತ ವ್ಯಕ್ತಪಡಿಸಿದ್ದರು. ಅಧ್ಯಕ್ಷ ಸ್ಥಾನಕ್ಕೆ ಪ್ರಿಯಾಂಕಾ ಹೆಸರನ್ನು ಕೆಲವರು ಪ್ರಸ್ತಾಪಿಸಿದಾಗ, ಸೋದರಿಯ ಹೆಸರನ್ನು ಈ ವಿಚಾರದಲ್ಲಿ ಎಳೆದು ತರಬೇಡಿ ಎಂದು ತಾಕೀತು ಮಾಡಿದ್ದರು ಎನ್ನಲಾಗಿದೆ.

ಚುನಾವಣೆ ಫಲಿತಾಂಶ ಹೊರಬಿದ್ದ ಬಳಿಕ ಇದೇ ಮೊದಲ ಬಾರಿಗೆ ರಾಹುಲ್‌ ಟ್ವೀಟ್‌ ಮಾಡಿದ್ದಾರೆ. ತಮ್ಮ ತಾತ, ಮಾಜಿ ಪ್ರಧಾನಿ ಜವಾಹರ ಲಾಲ್‌ ನೆಹರು ಅವರ ಪುಣ್ಯತಿಥಿಯ ಅಂಗವಾಗಿ ಅವರನ್ನು ಸೋಮವಾರ ಸ್ಮರಿಸಿಕೊಂಡಿದ್ದಾರೆ. ಈ ನಡುವೆ, ಸಿಡಬ್ಲ್ಯುಸಿ ಸಭೆಯ ಕುರಿತು ಊಹಾಪೋಹದ ವರದಿಗಳನ್ನು ಮಾಡಬೇಡಿ ಎಂದು ಮಾಧ್ಯಮಗಳಿಗೆ ಕಾಂಗ್ರೆಸ್‌ ಸೋಮವಾರ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದೆ.

ಆ್ಯಂಟನಿ, ಚವಾಣ್‌  ಅಥವಾ ಪೈಲಟ್‌ಗೆ ಕೈ ಅಧ್ಯಕ್ಷ ಹುದ್ದೆ?

ನವದೆಹಲಿ: ಕಾಂಗ್ರೆಸ್‌ ಅಧ್ಯಕ್ಷರಾಗಿ ಮುಂದುವರಿಯುವುದಿಲ್ಲ ಎಂದು ರಾಹುಲ್‌ ಗಾಂಧಿ ಪಟ್ಟು ಹಿಡಿದಿರುವ ಹಿನ್ನೆಲೆಯಲ್ಲಿ ಹಿರಿಯ ನಾಯಕರಾದ ಎ.ಕೆ.ಆ್ಯಂಟನಿ, ಪೃಥ್ವಿರಾಜ್‌ ಚೌಹಾಣ್‌ ಅಥವಾ ರಾಜಸ್ಥಾನ ಡಿಸಿಎಂ ಸಚಿನ್‌ ಪೈಲಟ್‌ ಅವರಿಗೆ ಪಕ್ಷದ ಚುಕ್ಕಾಣಿ ನೀಡುವ ಬಗ್ಗೆ ಚಿಂತನೆ ನಡೆದಿದೆ ಎನ್ನಲಾಗಿದೆ.

ಲೋಕಸಭೆ ಚುನಾವಣೆ ಸೋಲಿನ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಲು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ನಿರ್ಧರಿಸಿರುವ ಹಿನ್ನೆಲೆಯಲ್ಲಿ ಅವರ ಸ್ಥಾನಕ್ಕೆ ಪಕ್ಷ ಮೂವರು ಹೆಸರನ್ನು ಪರಿಶೀಲಿಸುತ್ತಿದೆ ಎಂದು ಟೀವಿ ವಾಹಿನಿಯೊಂದು ವರದಿ ಮಾಡಿದೆ.

ಕೇಂದ್ರದ ಮಾಜಿ ಸಚಿವ, ಕೇರಳದ ಮಾಜಿ ಮುಖ್ಯಮಂತ್ರಿ ‘ಮಿಸ್ಟರ್‌ ಕ್ಲೀನ್‌’ ಖ್ಯಾತಿಯ ಎ.ಕೆ. ಆ್ಯಂಟನಿ, ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ, ಕರ್ನಾಟಕದ ಮಾಜಿ ಉಸ್ತುವಾರಿಯಾಗಿರುವ ಪೃಥ್ವಿರಾಜ್‌ ಚವಾಣ್‌ ಹಾಗೂ ರಾಜಸ್ಥಾನದ ಹಾಲಿ ಉಪಮುಖ್ಯಮಂತ್ರಿ ಸಚಿನ್‌ ಪೈಲಟ್‌ ಅವರ ಹೆಸರು ಮುಂಚೂಣಿಯಲ್ಲಿವೆ ಎಂದು ಹೇಳಲಾಗುತ್ತಿದೆ. ಈ ಮೂವರೂ ನೆಹರು- ಗಾಂಧಿ ಕುಟುಂಬದಿಂದ ಹೊರತಾದವರು.