ಅಹಮದಾಬಾದ್[ಮಾ.13]: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮಂಗಳವಾರ ಪ್ರಧಾನಿ ನರೇಂದ್ರ ಮೋದಿಯವರ ತವರು ರಾಜ್ಯದಲ್ಲಿ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಮತ್ತೊಮ್ಮೆ ಮಸೂದ್ ಅಜರ್‌ನನ್ನು ಪ್ರಸಾ ್ತಪಿಸಿದ್ದಾರೆ. ಅದ್‌ಲಜ್‌ನಲ್ಲಿ ಚುನಾವಣಾ ರ‌್ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ಪುಲ್ವಾಮಾ ದಾಳಿಯ ಮಾಸ್ಟರ್‌ಮೈಂಡ್ ಮಸೂದ್ ಅಜರ್‌ನನ್ನು ಈ ಹಿಂದೆ ಭಾರತದ ವಶದಿಂದ ಪಾಕಿಸ್ತಾನಕ್ಕೆ ವಿಶೇಷ ವಿಮಾನದಲ್ಲಿ ಕರೆದುಕೊಂಡು ಹೋಗಿ ಬಿಟ್ಟು ಬಂದವರು ಯಾರು? ಎಂದು ಪ್ರಶ್ನಿಸಿದರು.

ಮುಂದಿನ ತಿಂಗಳ ಲೋಕಸಭೆ ಚುನಾವಣೆಯಲ್ಲಿ ದ್ವೇಷದ ವಿರುದ್ಧ ಸತ್ಯ ಜಯ ಗಳಿಸಲಿದೆ.ಮೋದಿ ೨೦೧೪ರಲ್ಲಿ ಭರವಸೆ ನೀಡಿದ್ದಂತೆ ಭಾರತೀಯರ ಖಾತೆಗೆ ೧೫ ಲಕ್ಷ ರು. ಬಂದಿದೆಯೇ? ಗಬ್ಬರ್ ಸಿಂಗ್ ಟ್ಯಾಕ್ಸ್ (ಜಿಎಸ್‌ಟಿ) ನಿಮಗೆ ಈಗಲಾದರೂ ಅರ್ಥವಾಗಿದೆಯೇ ಎಂದು ಪ್ರಶ್ನಿಸಿದರು.

ಚೌಕೀದಾರ್ ಚೋರ್ ಹೈ: ರಾಹುಲ್ ವಿರುದ್ಧ ದೂರು

ಮುಂಬೈ: ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದ ಪ್ರಕರಣ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸುವ ವೇಳೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಪದೇ ಪದೇ ಬಳಸುವ ಚೌಕಿದಾರ್ ಚೋರ್ ಹೈ (ಕಾವಲುಗಾರ ಕಳ್ಳ) ಎಂಬ ಟೀಕೆ ಇದೀಗ ಅವರಿಗೇ ಸಂಕಷ್ಟ ತಂದಿಟ್ಟಿದೆ. ರಾಹುಲ್‌ರ ಈ ಹೇಳಿಕೆ ಸೆಕ್ಯುರಿಟಿ ಗಾರ್ಡ್‌ಗಳಿಗೆ ಮಾಡಿದ ಅವಮಾನ. ಹೀಗಾಗಿ ಕಾಂಗ್ರೆಸ್ ಅಧ್ಯಕ್ಷರ ವಿರುದ್ಧ ಕೇಸು ದಾಖಲಿಸುವಂತೆ ಮಹಾರಾಷ್ಟ್ರ ರಾಜ್ಯ ಸುರಕ್ಷಣಾ ರಕ್ಷಕ್ ಸಂಘಟನೆಯ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ಪೊಲೀಸರಿಗೆ ಮನವಿ ಮಾಡಿದೆ.