ಉದಯಪುರ್(ಡಿ.01): ಪ್ರಧಾನಿ ನರೇಂದ್ರ ಮೋದಿ 2016ರಲ್ಲಿ ನಡೆದ ಸರ್ಜಿಕಲ್ ಸ್ಟ್ರೈಕ್ ಅನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ಯುವಕರಿಗೆ ಉದ್ಯೋಗ ಸೃಷ್ಟಿಸುವಲ್ಲಿ ಸಂಪೂರ್ಣ ವಿಫಲವಾಗಿರುವ ಮೋದಿ, ಪ್ರತಿ ಚುನಾವಣೆಯಲ್ಲೂ ಸೇನೆಯ ಸರ್ಜಿಕಲ್ ಸ್ಟ್ರೈಕ್ ವಿಷಯವನ್ನೇ ಕೆದಕುತ್ತಾ ದೇಶಕ್ಕೆ ಮಂಕುಬೂದಿ ಎರಚುತ್ತಿದ್ದಾರೆ ಎಂದು ರಾಹುಲ್ ಹರಿಹಾಯ್ದಿದ್ದಾರೆ.

ರಾಜಸ್ಥಾನದ ಉದಯಪುರದಲ್ಲಿ ಚುನಾವಣಾ ಸಭೆ ಉದ್ದೇಶಿಸಿ ಮಾತನಾಡಿ ರಾಹುಲ್ ಗಾಂಧಿ, ಮನಮೋಹನ್‌ ಸಿಂಗ್‌ ಪ್ರಧಾನಿಯಾಗಿದ್ದ ಅವಧಿಯಲ್ಲಿ ಅವಧಿಯಲ್ಲಿ ಮೂರು ಸರ್ಜಿಕಲ್ ಸ್ಟ್ರೈಕ್ ಗಳು ನಡೆದಿದ್ದವು. ಆದರೆ ಯುಪಿಎ ಇದನ್ನು ತನ್ನ ಯಶಸ್ಸು ಎಂದು ಎಲ್ಲೂ ಪ್ರಚಾರ ಮಾಡಲಿಲ್ಲ, ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಸೇನೆ ಮತ್ತು ಸರ್ಕಾರದ ನಡುವಿನ ಸಂಬಂಧ ಮತ್ತು ವ್ಯತ್ಯಾಸ ಎರಡನ್ನೂ ಕಾಂಗ್ರೆಸ್ ಗೌರವಿಸುತ್ತದೆ ಎಂದು ರಾಹುಲ್ ಹೇಳಿದರು.

ಯುಪಿಎ ಸರ್ಕಾರದ ಅವಧಿಯಲ್ಲಿ 2 ಲಕ್ಷ ಕೋಟಿ ರೂ. ಇದ್ದ ಅನುತ್ಪಾದಕಿ ಆಸ್ತಿ (ಎನ್‌ಪಿಎ), ಬಿಜೆಪಿ ನೇತೃತ್ವದ ಎನ್ ಡಿಎ ಅವಧಿಯಲ್ಲಿ  12 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ ಎಂದು ರಾಹುಲ್ ಆರೋಪಿಸಿದರು.

ಬ್ಯಾಂಕಿಂಗ್ ವಲಯ ಕೇವಲ ಉದ್ಯಮಿಗಳಿಗೆ ಸೀಮಿತವಾಗಿದ್ದು, ಇವುಗಳ ಕುರಿತು ಮಾತನಾಡದೇ ಸೇನೆ ಮಾಡಿದ ಸರ್ಜಿಕಲ್ ಸ್ಟ್ರೈಕ್ ನ್ನಯು ತಮ್ಮದೆಂದು ಬಿಂಬಿಸಿಕೊಳ್ಳುವುದು ಆತ್ಮ ವಂಚನೆ ಎಂದು ರಾಹುಲ್ ಹರಿಹಾಯ್ದಿದ್ದಾರೆ.