Asianet Suvarna News Asianet Suvarna News

ಡಾ.ರಾಜ್ ಯಾಕೆ ರಾಜಕೀಯಕ್ಕೆ ಬರಲಿಲ್ಲ..? ಇಲ್ಲಿದೆ ಸೀಕ್ರೇಟ್

ಮೇರು ನಟ ಡಾ. ರಾಜ್ ಕುಮಾರ್ ಅವರು ರಾಜಕೀಯಕ್ಕೆ ಯಾಕೆ ಪ್ರವೇಶ ಮಾಡಿಲ್ಲ ಎನ್ನುವ ಬಗ್ಗೆ ಅವರ ಪುತ್ರ ರಾಘವೇಂದ್ರ ರಾಜ್ ಕುಮಾರ್  ರಿವೀಲ್ ಮಾಡಿದ್ದಾರೆ. 

Raghavendra Rajkumar Reveal Interesting Facts About Dr Rajkumar
Author
Bengaluru, First Published Dec 31, 2018, 8:08 AM IST
  • Facebook
  • Twitter
  • Whatsapp

ಬೆಂಗಳೂರು : ಒಬ್ಬ ವ್ಯಕ್ತಿಯನ್ನು ಮಣಿಸಲು ನನ್ನನ್ನು ಬಾಣವನ್ನಾಗಿ ಬಳಸಿಕೊಳ್ಳಲು ಬಯಸಿದ್ದಾರೆ. ನನ್ನಿಂದ ಇತರರಿಗೆ ಒಳಿತಾಗಬೇಕೇ ಹೊರತು, ಕೆಡುಕಾಗಬಾರದು. ಗಾಂಧಿಯಿಂದ ಈ ದೇಶ ಸರಿಪಡಿಸಲು ಆಗಲಿಲ್ಲ. ಇನ್ನು ಈ ರಾಜ್ ಕುಮಾರ್‌ನಿಂದ ಸರಿಯಾಗಲು ಸಾಧ್ಯವೇ? ಹೀಗಂತ ಕನ್ನಡದ ಮೇರು ನಟ ಡಾ. ರಾಜಕುಮಾರ್ ತಮ್ಮ ಪುತ್ರ ರಾಘವೇಂದ್ರ ರಾಜ್‌ಕುಮಾರ್‌ಗೆ ಹೇಳಿದ್ದರಂತೆ.

ಅದು ರಾಜಕುಮಾರ್ ಅವರನ್ನು ರಾಜಕೀಯಕ್ಕೆ ತರಲು ವಿವಿಧ ರಾಜಕೀಯ ಪಕ್ಷಗಳು ಒತ್ತಡ ಹಾಕುತ್ತಿದ್ದ ಕಾಲ. ಆದರೆ, ಅದಕ್ಕೆ ರಾಜಕುಮಾರ್ ಹಿಂಜರಿದಿದ್ದರಂತೆ. ಆಗ ರಾಘವೇಂದ್ರ ರಾಜಕುಮಾರ್ ಅವರು, ಅಪ್ಪಾಜೀ ನೀವೇಕೆ ರಾಜಕೀಯಕ್ಕೆ ಹೋಗುತ್ತಿಲ್ಲ ಎಂದು ಪ್ರಶ್ನಿಸಿದ್ದಕ್ಕೆ ರಾಜಕುಮಾರ್ ಹೇಳಿದ್ದು- ‘ಕಂದಾ ಬಬ್ರುವಾಹನ ಚಿತ್ರ ನೋಡಿದ್ದೀಯಾ? ಅದರಲ್ಲಿ ಅರ್ಜುನನ ವಧೆಗೆ ಒಂದು ಬಾಣ ಮೀಸಲಿಟ್ಟಿರುತ್ತಾರೆ. ಅದರಲ್ಲಿ ಆತನ ಪ್ರಾಣಾಯುಷ್ಯ ಬರೆದಿರುತ್ತದೆ. ಒಬ್ಬ ವ್ಯಕ್ತಿಯನ್ನು ಮಣಿಸಲು ನನ್ನನ್ನು ಬಾಣದ ರೀತಿ ಬಳಸಿಕೊಳ್ಳಲು ಬಯಸಿ 
ದ್ದಾರೆ. 

ನನ್ನಿಂದ ಒಳ್ಳೆಯ ಕೆಲಸ ಮಾಡಿಸಿಕೊಳ್ಳುವ ಇಚ್ಛೆ ಇಲ್ಲ. ಒಮ್ಮೆ ಪ್ರಯೋಗಿಸಿದ ಬಾಣದಂತೆ ನನ್ನನ್ನು ಬಳಸಿ ಬಿಟ್ಟು ಬಿಡಲಿದ್ದಾರೆ. ನನಗೆ ಬಾಣವಾಗಿ ಬಳಕೆಯಾಗಲು ಇಷ್ಟವಿಲ್ಲ.’ ಹೀಗೆ ರಾಜ್‌ಕುಮಾರ್ ಹೇಳಿದ್ದನ್ನು, ಜನ ಪ್ರಕಾಶನ ಹೊರತಂದಿರುವ ನಾಡೋಜ ಪ್ರೊ. ಬರಗೂರು ರಾಮಚಂದ್ರಪ್ಪ ಅವರು ಬರೆದಿರುವ ‘ಜನಪದ ನಾಯಕ ಡಾ.ರಾಜಕುಮಾರ್’  ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ‘ಡಾ.ರಾಜ್ ರಾಜಕೀಯ ಪ್ರವೇಶ ಯಾಕೆ ಮಾಡಲಿಲ್ಲ’ ಎಂಬ ಸತ್ಯಾಂಶವನ್ನು ರಾಘವೇಂದ್ರ ರಾಜ್ ಕುಮಾರ್ ಅವರು ಬಿಚ್ಚಿಟ್ಟರು. 

‘ನನ್ನನ್ನು ರಾಜಕೀಯ ಪ್ರವೇಶಕ್ಕೆ ಕರೆತರುವ ಉದ್ದೇಶ ಸರಿಯಿಲ್ಲ. ನನ್ನ ಸೇವೆ ಅಗತ್ಯವಿದ್ದರೆ ಗೋಕಾಕ್ ಚಳವಳಿಯಂತೆ ಕರ್ನಾಟಕದ ಜನತೆ ಕರೆಸಿಕೊಳ್ಳುತ್ತಾರೆ. ನನ್ನಿಂದ ಇತರರಿಗೆ ಉಪಯೋಗಬೇಕು. ನಿನ್ನ ಅಪ್ಪಾಜಿ ಉತ್ತಮ ಕಾರ್ಯಗಳನ್ನು ಮಾಡಬೇಕು. ಇತರರಿಗೆ ಕೇಡು ಬಯಸಲು ಬಳಕೆಯಾಗಬಾರದು ಎಂದು ಕಿವಿಮಾತು ಹೇಳಿದ್ದರು’ ಎಂದರು.

ನಟಿ ತಾರಾ ಅನುರಾಧ ಮಾತನಾಡಿ, ‘ನನ್ನ ಮದುವೆ ಹೊಸತರಲ್ಲಿ ಅಣ್ಣಾವ್ರ ಮನೆಗೆ ಊಟಕ್ಕೆ ಕರೆದಿದ್ದರು. ಊಟವೆಲ್ಲ ಆದ ನಂತರ ಅವರು ವಸಂತ ಕಾಲ ಬಂದಾಗ ಹಾಡು ಹಾಡಲು ಪ್ರಾರಂಭಿಸಿದರು. ನಿನ್ನ ಮದುವೆ ಯಲ್ಲಿ ಈ ಹಾಡು ಹಾಡುವುದಾಗಿ ನಾನು ಹೇಳಿದ್ದೆ. ಆದರೆ, ನೀನು ಮದುವೆಗೆ ಕರೆಯಲಿಲ್ಲ. ಅದಕ್ಕೆ ಹಾಡುತ್ತಿದ್ದೇನೆ ಎಂದಾಗ ನನಗೆ ಆಶ್ಚರ್ಯವಾಗಿತ್ತು. 1987 ರ ಸಿನಿಮಾ ಹಾಡಿನ ಚಿತ್ರೀಕರಣದ ಸಂದರ್ಭ ಹೇಳಿದ ಮಾತನ್ನು ನೆನಪಿಸಿಕೊಂಡು ಹಾಡಿದ್ದರು’ ಎಂದರು.

‘ನಮ್ಮತ್ತೆಗೆ ಡಾ.ರಾಜ್ ತುಂಬಾ ಇಷ್ಟ. ಅವರ ಮನೆಗೆ ಹೋಗಿದ್ದಾಗ ಅಣ್ಣಾ ನಿಮ್ಮೊಂದಿಗೆ ನಮ್ಮತ್ತೆ ಮಾತನಾಡಬೇಕಂತೆ ಅಂದೆ. ಅದಕ್ಕೇನಂತೆ ಮಾತಾಡಿ ಅಂದರು. ತಕ್ಷಣ ನಮ್ಮತ್ತೆ, ‘ಏನಿಲ್ಲಪ್ಪ ನಿನ್ನ ಹಲ್ಲು ಕಟ್ಟಿಸಿಕೊಂಡದ್ದಾ ಅಥವಾ ನಿಜವಾದದ್ದೋ’ ಎಂದಾಗ ನನಗೆ ನಡುಕ ಶುರುವಾಗಿತ್ತು. ಆದರೆ, ಅಣ್ಣಾ ನಗುತ್ತಾ, ‘ಇಲ್ಲಮ್ಮ ಕಟ್ಟಿಸಿಕೊಂಡದ್ದು’ ಎಂದು ಉತ್ತರಿಸಿದ್ದರು. ನಾನು ಹಿಂತಿರುಗಿ ಬರುವಾಗ, ‘ಅಲ್ಲ ಅತ್ತೆ ಹಾಗೆ ಕೇಳ್ತಾರ’ ಅಂದ್ರೆ, ಇಲ್ಲಮ್ಮ ನನಗೆ ತುಂಬಾ ದಿನದಿಂದ ಅನುಮಾನವಿತ್ತು. ಬೇಡರ ಕಣ್ಣಪ್ಪ ಚಿತ್ರದಲ್ಲಿ ಬೇರೆ ಹಲ್ಲಿತ್ತು. ಹಾಗಾಗಿ ಕೇಳಿದೆ’ ಎಂದು ಹಳೆಯ ಪ್ರಸಂಗವನ್ನು ತೆರೆದಿಟ್ಟಾಗ ಸಭೆಯಲ್ಲಿ ನಗೆ ಹೊಮ್ಮಿತು.

ಕೃತಿ ಲೋಕಾರ್ಪಣೆ ಮಾಡಿ ಮಾತನಾಡಿದ ವಿಮರ್ಶಕ ಡಾ.ಎಚ್.ಎಸ್.ರಾಘವೇಂದ್ರ ರಾವ್, ‘ನಡೆದಂತೆ ನುಡಿದವರು ರಾಜ್. ಹಣ, ಜಾತಿ ಆಳ್ವಿಕೆಯ ಕ್ಷೇತ್ರದಲ್ಲಿ ಎದುರಾದ ಸಂಕಷ್ಟಗಳನ್ನು ಸಮಾಧಾನಚಿತ್ತದಿಂದ ಸ್ವೀಕರಿಸಿ ನಗುನಗುತ್ತ ಎತ್ತರಕ್ಕೆ ಬೆಳೆದವರು. ಜನತೆಯ ವಿಶ್ವವಿದ್ಯಾಲಯ ರಾಜ್‌ರವರಿಗೆ ವಿನಯ ಹಾಗೂ ವಿವೇಕ ಕಲಿಸಿತು’ ಎಂದರು.

Follow Us:
Download App:
  • android
  • ios