ಪ್ರತ್ಯೇಕ ಖಲಿಸ್ತಾನ ಹೋರಾಟದ ತೀವ್ರವಾದಿಗಳು, ಉಗ್ರವಾದ ಕೈಬಿಡಲು ಕೇಂದ್ರ ಸರ್ಕಾರದೊಂದಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗೌಪ್ಯ ಮಾತುಕಡೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

ನವದೆಹಲಿ: ಪ್ರತ್ಯೇಕ ಖಲಿಸ್ತಾನ ಹೋರಾಟದ ತೀವ್ರವಾದಿಗಳು, ಉಗ್ರವಾದ ಕೈಬಿಡಲು ಕೇಂದ್ರ ಸರ್ಕಾರದೊಂದಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗೌಪ್ಯ ಮಾತುಕಡೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಇದಕ್ಕಾಗಿ ಎರಡು ಹಂತಗಳ, ಮೂರು ಷರತ್ತುಗಳನ್ನು ಉಗ್ರರು ಮಂಡಿಸಿದ್ದು, 2015ರಿಂದ ಮಾತುಕತೆ ಪ್ರಕ್ರಿಯೆ ಚಾಲ್ತಿಯಲ್ಲಿದೆ.

ಸಿಖ್ಖರ ಪವಿತ್ರ ಕೇಂದ್ರ ಅಮೃತಸರದ ಸ್ವರ್ಣ ಮಂದಿರದ ಅಕಲ್‌ ತಕ್‌ತ ಮತ್ತು ಹರ್ಮಾಂದರ್‌ ಸಾಹಿಬ್‌ಗೆ ವ್ಯಾಟಿಕನ್‌ ಮಾದರಿಯ ವಿಶೇಷ ಸ್ಥಾನಮಾನ ನೀಡುವುದು, ಸ್ವರ್ಣ ಮಂದಿರದಲ್ಲಿ 1984ರಲ್ಲಿ ನಡೆದ ಸೇನಾ ಕಾರ್ಯಾಚರಣೆಗೆ ಜಾಗತಿಕ ವೇದಿಕೆಯಲ್ಲಿ ಕ್ಷಮೆ ಕೋರುವುದು, ಭಾರತ ಪ್ರವೇಶಕ್ಕೆ ನಿಷೇಧವಿರುವ ‘ಕಪ್ಪುಪಟ್ಟಿ’ಯಲ್ಲಿರುವ ಸಮುದಾಯದ ನಾಯಕರನ್ನು ಪಟ್ಟಿಯಿಂದ ಕೈಬಿಡುವುದು ಮತ್ತು ರಾಜಕೀಯ ಕೈದಿಗಳನ್ನು ಬಿಡುಗಡೆಗೊಳಿಸುವುದು ಮುಂತಾದ ಷರತ್ತುಗಳನ್ನು ಮುಂದಿಡಲಾಗಿದೆ.

2011ರಲ್ಲಿ ಆಗಿನ ಪ್ರಧಾನಿ ಮನಮೋಹನ್‌ ಸಿಂಗ್‌ ಸಂಸತ್ತಿನಲ್ಲಿ 1984ರ ಸಿಖ್‌ ಗಲಭೆಗೆ ಬಗ್ಗೆ ಕ್ಷಮೆ ಯಾಚಿಸಿದ್ದರು. ಆದರೆ, ಅದು ಭಾರತೀಯ ಸಿಖ್ಖರನ್ನುದ್ದೇಶಿಸಿ ಮಾತ್ರ ಆಗಿದೆ. ಹೀಗಾಗಿ, ಜಾಗತಿಕ ಸಿಖ್ಖರಿಗಾಗಿ ಮತ್ತೊಮ್ಮೆ ಜಾಗತಿಕ ವೇದಿಕೆಯೊಂದರಲ್ಲಿ ಕ್ಷಮೆ ಯಾಚಿಸುವಂತೆ ಕೋರಲಾಗಿದೆ.

2015, ನವೆಂಬರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಲಂಡನ್‌ ಭೇಟಿಯ ನಂತರ, ಸಿಖ್‌ ಮಾನವ ಹಕ್ಕುಗಳ ವೇದಿಕೆಯ ನಿರ್ದೇಶಕ ಜಸ್‌ದೇವ್‌ ಸಿಂಗ್‌ ರಾಯ್‌ ಮುಖಾಂತರ ಮಾತುಕತೆ ಆರಂಭವಾಗಿದೆ. 2016ರಲ್ಲಿ ಬಿಜೆಪಿ ನಾಯಕ ರಾಮ್‌ ಮಾಧವ್‌ ಮತ್ತು ಸಿಖ್‌ ನಾಯಕರು ನಡುವೆ ಟೊರೊಂಟೊದಲ್ಲಿ ಮಾತುಕತೆ ನಡೆದಿತ್ತು. ಕಳೆದ ಜನವರಿಯಲ್ಲಿ ರಾಯ್‌ ದೆಹಲಿಗೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದಾರೆ.

ನಿಷೇಧಿತ ಸಿಖ್ಖರನ್ನು ಕಪ್ಪುಪಟ್ಟಿಯಿಂದ ಕೈಬಿಡುವ ಪ್ರಕ್ರಿಯೆ ಈಗಾಗಲೇ ಪ್ರಗತಿಯಲ್ಲಿದೆ ಎನ್ನಲಾಗಿದೆ. ಇತ್ತೀಚೆಗೆ ಕೆನಡಾ ಪ್ರಧಾನಿ ಜಸ್ಟಿನ್‌ ಟ್ರುಡೇವ್‌ ಬಂದಿದ್ದಾಗ ಔತಣಕೂಟಕ್ಕೆ ಆಹ್ವಾನಿಸಲ್ಪಟ್ಟು ವಿವಾದಕ್ಕೆ ಗುರಿಯಾಗಿದ್ದ, ಖಲಿಸ್ತಾನಿ ಮಾಜಿ ಉಗ್ರ ಜಸ್ಪಾಲ್‌ ಅತ್ವಾಲ್‌ ಭಾರತಕ್ಕೆ ಆಗಮಿಸಿದ್ದ ಸುದ್ದಿ ಸರ್ಕಾರಕ್ಕೆ ಮುಜುಗರವನ್ನುಂಟು ಮಾಡಿತ್ತು.