Published : Dec 25 2016, 04:19 PM IST| Updated : Apr 11 2018, 01:11 PM IST
Share this Article
FB
TW
Linkdin
Whatsapp
Ashwin
ಬೌಲಿಂಗ್‌ನಲ್ಲಿ ವಿಶ್ವ ಸಾಮ್ರಾಟನಾಗಬೇಕು ಎಂದು ಅಪ್ಪನ ಆಸೆಯಾದರೆ, ಬ್ಯಾಟಿಂಗ್‌ನಲ್ಲೂ ಮಗ ಉತ್ತಮ ಪ್ರದರ್ಶನ ತೋರಬೇಕು ಎನ್ನುವುದು ಅಮ್ಮನ ಆಸೆ. ಹೀಗೆ ಹೆತ್ತವರಿಬ್ಬರ ಪ್ರೋತ್ಸಾಹದಿಂದ ವಿಶ್ವಮಾನ್ಯ ಕ್ರಿಕೆಟಿಗರಾಗಿ ಬೆಳೆದಿದ್ದಾರೆ ಭಾರತ ಕ್ರಿಕೆಟ್‌ ತಂಡದ ಸ್ಪಿನ್‌ ಮಾಂತ್ರಿಕ ರವಿಚಂದ್ರನ್‌ ಅಶ್ವಿನ್‌. ಎಲ್ಲವೂ ತಾನು ಅಂದುಕೊಂಡಂತೆ ಆಗಿದ್ದರೆ ಈ ಹೊತ್ತಿಗೆ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿನ ಹುಳು ಆಗಿರುತ್ತಿದ್ದನಾತ. ಆದರೆ ಪೋಷಕರ ಮಾತಿಗೆ ಬೆಲೆ ಕೊಟ್ಟಮಗ ಇದೀಗ ವಿಶ್ವ ಕ್ರಿಕೆಟ್‌ ಜಗತ್ತಿನ ಸ್ಪಿನ್‌ ವಿಭಾಗದಲ್ಲಿ ಅನಭಿಷಿಕ್ತ ದೊರೆ. ವರ್ಷದ ಕ್ರಿಕೆಟಿಗನೆಂದು ಆಯ್ಕೆಯಾಗಿರುವ ಅಶ್ವಿನ್‌ ಜೀವನ ಪಯಣದತ್ತ ಒಂದು ಇಣುಕು ನೋಟ
- ಧನಂಜಯ ಎಸ್ ಹಕಾರಿ ಆತನಿಗೆ ಕ್ರಿಕೆಟ್ ಆಟ ಎನ್ನುವುದು ಆಸಕ್ತಿಯಷ್ಟೇ ಆಗಿತ್ತು. ಏಕೆಂದರೆ ಅಪ್ಪ ಕೂಡ ಕ್ರಿಕೆಟ್ ಆಡುತ್ತಿದ್ದರು. ಕ್ಲಬ್ ಕ್ರಿಕೆಟಿಗೇ ಸೀಮಿತವಾಗಿದ್ದ ತನ್ನ ಬದುಕಿನಂತೆ ಮಗನೂ ಕ್ಲಬ್ನಲ್ಲಿಯೇ ಆಡುವುದನ್ನು ಅಪ್ಪ ಇಷ್ಟಪಟ್ಟಿರಲಿಲ್ಲ. ಮಗನನ್ನು ರಾಷ್ಟ್ರೀಯ ತಂಡದಲ್ಲಿ ಆಡಿಸಬೇಕು ಎನ್ನುವ ಗುರಿ ಇರಿಸಿಕೊಂಡಿದ್ದರು. ಅದರಂತೆ ಮಗನಿಗೆ ಪ್ರತಿದಿನ ಕ್ರಿಕೆಟ್ ಆಟದ ಮೇಲೆ ಹೆಚ್ಚಿನ ಆಸಕ್ತಿ ಬರುವಂತೆ ಆಟದ ವಿವಿಧ ಮಜಲುಗಳ ಬಗ್ಗೆ ಅರಿವು ಮೂಡಿಸುತ್ತಿದ್ದರು. ಶಾಲೆಯಿಂದ ಬಂದ ಮಗನನ್ನು ಅಪ್ಪ ಮೈದಾನಕ್ಕೆ ಕರೆದುಕೊಂಡು ಹೋಗಿ ಕ್ರಿಕೆಟ್ ಆಟವನ್ನೇ ಆಡಲು ಸಲಹೆ ನೀಡುತ್ತಿದ್ದರು. ಅಪ್ಪ ಸ್ಥಳೀಯ ಕ್ಲಬ್ ಕ್ರಿಕೆಟ್ ತಂಡ ಒಂದರಲ್ಲಿ ವೇಗದ ಬೌಲರ್. ತಮ್ಮಂತೆ ಮಗನೂ ವೇಗಿ ಆಗಬೇಕು ಎನ್ನುವುದು ಅಪ್ಪನ ಆಶಯವಾಗಿತ್ತು. ಆದರೆ ಅಮ್ಮನಿಗೆ ಸ್ಪಿನ್ನರ್ ಎಂದರೆ ಅಚ್ಚುಮೆಚ್ಚು, ಮೊದಲಿನಿಂದಲೂ ಅಮ್ಮನ ಮುದ್ದು ಮಗನಾಗಿದ್ದ ಆತನೀಗ ವಿಶ್ವ ಕ್ರಿಕೆಟ್ನಲ್ಲಿ ಸ್ಪಿನ್ ದೊರೆಯಾಗಿ ಮಿಂಚುತ್ತಿದ್ದಾನೆ. ಹೌದು ಆತ ಬೇರಾರಯರೂ ಅಲ್ಲ, ಭಾರತ ಕ್ರಿಕೆಟ್ ತಂಡದ ಸ್ಪಿನ್ ಮಾಂತ್ರಿಕ ರವಿಚಂದ್ರನ್ ಅಶ್ವಿನ್. ಎಲ್ಲವೂ ತಾನು ಅಂದುಕೊಂಡಂತೆ ಆಗಿದ್ದರೆ ಈ ಹೊತ್ತಿಗೆ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿನ ಹುಳು ಆಗಿರುತ್ತಿದ್ದನಾತ. ಆದರೆ ಪೋಷಕರ ಮಾತಿಗೆ ಬೆಲೆ ಕೊಟ್ಟಮಗ ಇದೀಗ ವಿಶ್ವ ಕ್ರಿಕೆಟ್ ಜಗತ್ತಿನ ಸ್ಪಿನ್ ವಿಭಾಗದಲ್ಲಿ ಅನಭಿಷಿಕ್ತ ದೊರೆ ಎನಿಸಿದ್ದಾರೆ. ಅಮ್ಮನ ಇಷ್ಟದಂತೆಯೇ ಕ್ರಿಕೆಟಿನಲ್ಲಿ ಬೆಳೆದ ಅಶ್ವಿನ್ ಸ್ಪಿನ್ ಜಗತ್ತನ್ನು ತನ್ನ ಬೆರಳುಗಳಿಂದಲೇ ಆಡಿಸುತ್ತಾ ಎದುರಾಳಿ ತಂಡದ ಬ್ಯಾಟ್ಸ್ಮನ್ಗಳನ್ನು ಗಿರಕಿ ಹೊಡೆಸುತ್ತಿದ್ದಾರೆ. ವೇಗದ ಬೌಲರ್ಗಳು ಕ್ರಿಕೆಟ್ನಲ್ಲಿ ದೀರ್ಘಕಾಲ ಉಳಿಯುವುದಿಲ್ಲ. ಏಕೆಂದರೆ ಗಾಯದ ಸಮಸ್ಯೆ ಹೆಚ್ಚಾಗಿರುತ್ತೆ. ಹಾಗೆಂದು ಸ್ಪಿನ್ನರ್ಗಳು ಗಾಯದ ಸಮಸ್ಯೆಯಿಂದ ಹೊರತಾಗಿ ಇಲ್ಲ. ಆದರೆ ಈ ಪ್ರಮಾಣ ಸ್ವಲ್ಪ ಕಡಿಮೆ ಎನ್ನುವುದು ಇದರ ಅರ್ಥ. ಹೀಗಾಗಿ ಸ್ಪಿನ್ ಕಡೆ ಒಲವು ತೋರು ಮಗನೆ ಎನ್ನುವುದು ಅಮ್ಮನ ಪಾಠವಾಗಿತ್ತು. ಕ್ರೀಡೆ ಅಂದರೇನೆ ಹಾಗೆ. ಅದರಲ್ಲೂ ಕ್ರಿಕೆಟ್ ಎಂಬ ಮಾಯಾವಿ ಆಟದಲ್ಲಿ ಮಕ್ಕಳು ಅಪ್ಪನ ಹಾದಿ ತುಳಿಯುವುದು ಹೊಸದೇನಲ್ಲ. ಅಪ್ಪನಂತೆ ಕ್ರಿಕೆಟ್ ಆಟಗಾರರಾಗಿರುವವರು ಈಗಲೂ ರಾಷ್ಟ್ರೀಯ ತಂಡದಲ್ಲಿ ಸಾಕಷ್ಟುಮಂದಿ ಇದ್ದಾರೆ. ಭಾರತ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿಗೆ ಅವರ ಅಪ್ಪ ದಿವಂಗತ ಪ್ರೇಮ್ ಕೊಹ್ಲಿ ಅವರೇ ಮಾರ್ಗದರ್ಶಕರು. ಕೊಹ್ಲಿ ಬಾಲ್ಯದಲ್ಲಿ ಅಪ್ಪನ ಸಲಹೆಯಂತೆ ಬ್ಯಾಟಿಂಗ್ ಮತ್ತು ಬೌಲಿಂಗ್ನಲ್ಲಿ ಪರಿಪಕ್ವತೆ ಬೆಳೆಸಿಕೊಂಡಿದ್ದರು. ಅದರಂತೆ ಟೆಸ್ಟ್ ಆಟಗಾರ ಚೇತೇಶ್ವರ ಪೂಜಾರ ಅವರಿಗೆ ಅವರ ತಂದೆ ಅರವಿಂದ್ ಪೂಜಾರ ಪ್ರಮುಖ ಪಂದ್ಯಗಳಲ್ಲಿ ಯಾವ ರೀತಿಯಾಗಿ ಇನಿಂಗ್ಸ್ ಆರಂಭಿಸಬೇಕು ಎನ್ನುವುದನ್ನು ಈಗಲೂ ಸಲಹೆ ನೀಡುತ್ತಾರೆ. ಆದರೆ ಅಶ್ವಿನ್ ವೃತ್ತಿ ಜೀವನದಲ್ಲಿ ತಂದೆಗಿಂತ ಹೆಚ್ಚಾಗಿ ತಾಯಿ ಚಿತ್ರಾ ಪ್ರಮುಖ ಪಾತ್ರವಹಿಸುತ್ತಾರೆ. ತಂದೆ ರವಿಚಂದ್ರನ್, ಚಿಕ್ಕ ವಯಸ್ಸಿನಲ್ಲಿದ್ದಾಗ ಅಶ್ವಿನ್ ಅವರನ್ನು ವಿವಿಧ ಪಿಚ್ಗಳಿಗೆ ಕರೆದುಕೊಂಡು ಹೋಗಿ ಬೌಲಿಂಗ್ ಅಭ್ಯಾಸ ಮಾಡಿಸಿದ್ದಾರೆ. ವೇಗದ ಬೌಲಿಂಗ್ನಲ್ಲಿ ಓಡಿ ಬರುವುದರಿಂದ ಸಾಮರ್ಥ್ಯ ವ್ಯಯವಾಗಲಿದೆ. ಇದಕ್ಕಾಗಿ ಸ್ಪಿನ್ ಬೌಲಿಂಗ್ ಸೂಕ್ತವಾದುದು ಎಂದು ಚಿತ್ರಾ ಹೇಳಿದ್ದರಂತೆ. ಅಶ್ವಿನ್ ರಾಜ್ಯ ಮಟ್ಟದ ಕ್ಲಬ್ ಒಂದರಲ್ಲಿ ಆಡುವ ವೇಳೆಯೂ ಚಿತ್ರಾ ಮಗನ ಸಾಧನೆಯನ್ನು ಬರೆದಿಡಲು ಪುಸ್ತಕವೊಂದನ್ನು ಬಳಸುತ್ತಿದ್ದರಂತೆ. ಪ್ರತಿ ಪಂದ್ಯದಲ್ಲಿ ಅಶ್ವಿನ್ ಎಷ್ಟುವಿಕೆಟ್ ಪಡೆದ, ಬ್ಯಾಟಿಂಗ್ನಲ್ಲಿ ಎಷ್ಟುರನ್ಗಳಿಸಿದ ಎನ್ನುವುದನ್ನು ಆ ಪುಸ್ತಕದಲ್ಲಿ ನಮೂದಿಸುತ್ತಿದ್ದರಂತೆ ಚಿತ್ರಾ. ಹೀಗೆ ಅಶ್ವಿನ್ಗೆ ಸ್ಪಿನ್ ಬೌಲಿಂಗ್ನ ವಿವಿಧ ಮಗ್ಗಲುಗಳ ಜತೆ ಬ್ಯಾಟಿಂಗ್ನಲ್ಲಿಯೂ ಪರಿಣತಿ ಹೊಂದುವಂತೆ ಮಾಡಿದ್ದು ಮಾತ್ರ ಅಮ್ಮನೇ. ಯಶಸ್ವೀ ಪುರುಷನ ಹಿಂದೆ ಮಹಿಳೆ ಇರುತ್ತಾಳೆ ಎನ್ನುವುದು ಇಲ್ಲಿ ಮತ್ತೊಮ್ಮೆ ಸಾಬೀತಾಗಿದೆ. ಅಶ್ವಿನ್ಗೆ ಆ ಅದೃಷ್ಟತಾಯಿ ರೂಪದಲ್ಲಿ ಸಿಕ್ಕಿರುವುದು ನಿಜಕ್ಕೂ ಹೆಮ್ಮೆಪಡುವ ವಿಷಯ. ಬಾಲ್ಯದಲ್ಲಿಯೇ ಸ್ಪಿನ್ ಬೌಲಿಂಗ್ ಕಡೆ ವಾಲಿದ ಅಶ್ವಿನ್ ಮುಟ್ಟಿದ್ದೆಲ್ಲವನ್ನೂ ಚಿನ್ನವಾಗಿಸಿಕೊಳ್ಳುತ್ತಾ ಸಾಗಿದರು. ಅಲ್ಲದೇ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.
ಏಕದಿನ ಕ್ರಿಕೆಟ್ನಲ್ಲಿ 6 ವರ್ಷ, ಟೆಸ್ಟ್ನಲ್ಲಿ 5 ವರ್ಷ ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿರುವ ಅಶ್ವಿನ್, ಸಾಕಷ್ಟುದಾಖಲೆಗಳನ್ನು ಪುಡಿಗಟ್ಟಿದ್ದಾರೆ. ಟೆಸ್ಟ್ ಕ್ರಿಕೆಟ್ನಲ್ಲಿ ಅದೆಷ್ಟೋ ಬಾರಿ 5 ವಿಕೆಟ್ಗಳ ಗೊಂಚಲು ಮುಡಿಗೇರಿಸಿಕೊಂಡಿದ್ದಾರೆ. ಅಲ್ಲದೇ ಟೆಸ್ಟ್ ಕ್ರಿಕೆಟ್ನಲ್ಲಿ 50, 100, 150 ಮತ್ತು 200 ವಿಕೆಟ್ಗಳನ್ನು ವೇಗವಾಗಿ ಪಡೆದ ಭಾರತದ ಮೊದಲ ಸ್ಪಿನ್ನರ್ ಎನ್ನುವ ಖ್ಯಾತಿ ಅಶ್ವಿನ್ ಅವರದ್ದಾಗಿದೆ. ಅದರಂತೆ ಬ್ಯಾಟಿಂಗ್ನಲ್ಲಿಯೂ ಮಿಂಚಿರುವ ಅಶ್ವಿನ್ ಟೆಸ್ಟ್ನಲ್ಲಿ 4 ಶತಕ 10 ಅರ್ಧಶತಕ ಸಿಡಿಸಿದ್ದಾರೆ. ಹೀಗಾಗಿಯೇ ಅಶ್ವಿನ್ ಆಲ್ರೌಂಡರ್ ಆಗಿ ಪ್ರಚಲಿತ ರಾರಯಂಕಿಂಗ್ನಲ್ಲಿ ನಂ.1 ಸ್ಥಾನ ಪಡೆದಿದ್ದಾರೆ.
ಕ್ರಿಕೆಟ್ನಲ್ಲಿ ಅದ್ವಿತೀಯ ಸಾಧನೆ ಮಾಡಿರುವ ಅಶ್ವಿನ್ ಅವರಿಗೆ 2016ನೇ ಸಾಲಿನ ಐಸಿಸಿ ವರ್ಷದ ಕ್ರಿಕೆಟಿಗ (ಸರ್ ಗಾರ್ಫಿಲ್ಡ್ ಸೋಬರ್ಸ್ ಟ್ರೋಫಿ) ಮತ್ತು ಟೆಸ್ಟ್ ವರ್ಷದ ಕ್ರಿಕೆಟಿಗ ಪ್ರಶಸ್ತಿ ಸಂದಿದೆ. 2013ರಲ್ಲಿ ಅಶ್ವಿನ್ ವರ್ಷದ ಟೆಸ್ಟ್ ಕ್ರಿಕೆಟಿಗ ಪ್ರಶಸ್ತಿ ಪಡೆದಿದ್ದರು. ಇದು 2ನೇ ಬಾರಿ ಟೆಸ್ಟ್ ಕ್ರಿಕೆಟಿಗ ಪ್ರಶಸ್ತಿ ಪಡೆದಿರುವುದಾಗಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ನ ಪ್ರತಿಷ್ಠಿತ ಪ್ರಶಸ್ತಿಯಾದ ಐಸಿಸಿ ವರ್ಷದ ಕ್ರಿಕೆಟಿಗ ಪ್ರಶಸ್ತಿಯನ್ನು ಮಾಜಿ ಕ್ರಿಕೆಟಿಗರಾದ ಕನ್ನಡಿಗ ರಾಹುಲ್ ದ್ರಾವಿಡ್ ಮತ್ತು ಸಚಿನ್ ತೆಂಡೂಲ್ಕರ್ ನಂತರ ಪಡೆಯುತ್ತಿರುವ ಮೂರನೇ ಕ್ರಿಕೆಟಿಗ ಎಂಬ ಹೆಗ್ಗಳಿಕೆ ಅಶ್ವಿನ್ಗೆ ಸಲ್ಲಲಿದೆ. ಅಶ್ವಿನ್ 2011 ನವೆಂಬರ್ 13ರಂದು ತಮ್ಮ ಬಾಲ್ಯದ ಗೆಳತಿ ಪ್ರೀತಿ ನಾರಾಯಣನ್ ಅವರನ್ನು ವರಿಸುವ ಮೂಲಕ ವೈವಾಹಿಕ ಜೀವನಕ್ಕೆ ಕಾಲಿರಿಸಿದರು. ಜುಲೈ 11 2015ರಂದು ಅಶ್ವಿನ್ ದಂಪತಿಗಳಿಗೆ ಹೆಣ್ಣು ಮಗು ಹುಟ್ಟಿತು. ಅಶ್ವಿನ್ ಮಗಳಿಗೆ ಅಕಿರಾ ಎಂಬ ಹೆಸರನ್ನಿಟ್ಟಿದ್ದಾರೆ. ಕುಟುಂಬವನ್ನು ಅಗಾಧವಾಗಿ ಪ್ರೀತಿಸುವ ಅಶ್ವಿನ್ ಐಸಿಸಿಯ ಅತ್ಯುನ್ನತ ಗೌರವ ಪಡೆಯುತ್ತಿದ್ದಂತೆ, ತನ್ನ ಯಶಸ್ಸಿಗೆ ನೆರವಾದ ಕುಟುಂಬದ ಆಪ್ತರನ್ನು, ಸ್ನೇಹಿತರನ್ನು, ತಂದೆ ರವಿಚಂದ್ರನ್, ತಾಯಿ ಚಿತ್ರಾ, ಮಡದಿ ಪ್ರೀತಿ ನಾರಾಯಣನ್ ಮತ್ತು ಅಕಿರಾ ಅವರನ್ನು ಅಭಿನಂದಿಸಿದರು.
1986ರ ಸೆಪ್ಟೆಂಬರ್ 17ರಂದು ತಮಿಳುನಾಡಿನ ಚೆನ್ನೈನ ಪಶ್ಚಿಮ ವಾಂಬಲಾಮ್ನಲ್ಲಿ ಜನಿಸಿದ ಅಶ್ವಿನ್ ಚಿಕ್ಕವಯಸ್ಸಿನಿಂದಲೂ ಓದಿನಲ್ಲಿ ಮುಂದಿದ್ದರು. ಇಲ್ಲಿನ ಪದ್ಮ ಶೇಷಾದ್ರಿ ಬಾಲಭವನ ಮತ್ತು ಸೆಂಟ್ ಬೆಡೇಸ್ನಲ್ಲಿ ಆರಂಭಿಕ ಶಿಕ್ಷಣವನ್ನು ಮುಗಿಸಿದರು. ನಂತರ ಎಸ್ಎಸ್ಎನ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮಾಹಿತಿ ತಂತ್ರಜ್ಞಾನದಲ್ಲಿ ಪದವಿ ಪಡೆದರು. ತಮ್ಮ 30ನೇ ವಯಸ್ಸಿನಲ್ಲಿ ವಿಶ್ವ ಕ್ರಿಕೆಟ್ನಲ್ಲಿ ಅನನ್ಯ ಸಾಧನೆ ಮಾಡಿರುವ ಅಶ್ವಿನ್, ವೃತ್ತಿ ಜೀವನದ ಆರಂಭದಲ್ಲಿದ್ದ ವೇಳೆಯಲ್ಲಿ ಕಿರಿಯರ ವಲಯ ಕ್ರಿಕೆಟ್ ಟೂರ್ನಿಯೊಂದರಲ್ಲಿ ಓಪನರ್ ಆಗಿ ಬ್ಯಾಟ್ ಬೀಸಿದ್ದರು. ನಂತರದ ದಿನಗಳಲ್ಲಿ ಕೆಳಕ್ರಮಾಂಕದಲ್ಲಿ ಬ್ಯಾಟಿಂಗ್ ಇಳಿಯುತ್ತಿದ್ದ ಅಶ್ವಿನ್, ಆಫ್ ಬ್ರೇಕ್ ಬೌಲರ್ ಆಗಿ ಪರಿಣಾಮಕಾರಿ ಪ್ರದರ್ಶನವನ್ನು ನೀಡಿದರು. 2006ರ ಡಿಸೆಂಬರ್ನಲ್ಲಿ ತಮಿಳುನಾಡು ಪರ ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯವನ್ನಾಡುವ ಮೂಲಕ ದೇಶೀ ಕ್ರಿಕೆಟ್ಗೆ ಪದಾರ್ಪಣೆ ಮಾಡಿದರು. ನಾಲ್ಕು ವರ್ಷಗಳ ಕಾಲ ದೇಶೀ ಕ್ರಿಕೆಟ್ನಲ್ಲಿ ಉಳುಮೆ ಮಾಡಿದ ಅಶ್ವಿನ್ಗೆ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿ 2010 ವೃತ್ತಿಜೀವನದ ಮಹತ್ತರ ಮೈಲಿಗಲ್ಲಾಯಿತು.
2010ರಲ್ಲಿ ತವರು ತಂಡ ಚೆನ್ನೈ ಸೂಪರ್ ಕಿಂಗ್ಸ್ ಒಳ ಹೊಕ್ಕ ಅಶ್ವಿನ್ ನಸೀಬು ಬದಲಾಯಿತು. ದಕ್ಷಿಣ ಆಫ್ರಿಕದಲ್ಲಿ ನಡೆದಿದ್ದ ಚಾಂಪಿಯನ್ಸ್ ಲೀಗ್ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಅಶ್ವಿನ್ 13 ವಿಕೆಟ್ ಕೀಳುವ ಮೂಲಕ ಸರಣಿ ಶ್ರೇಷ್ಠ ಪ್ರಶಸ್ತಿ ಬಾಚಿಕೊಂಡಿದ್ದರು. ಐಪಿಎಲ್ ಕ್ರಿಕೆಟ್ನಲ್ಲಿ ಮಿಂಚುತ್ತಿದ್ದಂತೆ ಅದೇ ವರ್ಷ ರಾಷ್ಟ್ರೀಯ ತಂಡಕ್ಕೆ ಬುಲಾವ್ ಬಂದಿತ್ತು. 2010ರ ಜೂನ್ 5ರಂದು ಶ್ರೀಲಂಕಾ ವಿರುದ್ಧದ ಏಕದಿನ ಪಂದ್ಯದಲ್ಲಿ ಅಶ್ವಿನ್ ಮೊದಲ ಬಾರಿಗೆ ಭಾರತ ಹಿರಿಯರ ತಂಡದಲ್ಲಿ ಕಾಣಿಸಿಕೊಂಡರು. ಆರಂಭದಲ್ಲಿ ಸಾಕಷ್ಟುಕ್ರಿಕೆಟಿಗರಿಗೆ ಉಜ್ವಲ ಭವಿಷ್ಯ ನೀಡುವುದು ಟೆಸ್ಟ್ ಪಂದ್ಯಗಳು. ಆದರೆ ಅಶ್ವಿನ್ ವಿಷಯದಲ್ಲಿ ಕೊಂಚ ಬದಲಾವಣೆ. ಐಪಿಎಲ್ನಿಂದ ಗುರುತಿಸಿಕೊಂಡಿದ್ದ ಅಶ್ವಿನ್ಗೆ ಮೊದಲು ಸೀಮಿತ ಓವರ್ಗಳ ಪಂದ್ಯದಲ್ಲಿ ಆಡುವ ಅವಕಾಶ ಲಭಿಸಿತ್ತು. ಒಂದೂವರೆ ವರ್ಷದ ತರುವಾಯ ಟೆಸ್ಟ್ ಪಂದ್ಯದಲ್ಲಿ, ಅದು 2011ರ ನವೆಂಬರ್ ವೆಸ್ಟ್ ಇಂಡೀಸ್ ಎದುರು ಟೆಸ್ಟ್ ಕ್ರಿಕೆಟ್ಗೆ ಅಶ್ವಿನ್ ಅಡಿ ಇಟ್ಟರು. ವಿಶ್ವ ಕ್ರಿಕೆಟ್ನ ಸ್ಪಿನ್ನರ್ಗಳ ಪಾಲಿಗೆ ಅದರಲ್ಲೂ ಆಫ್ ಸ್ಪಿನ್ನರ್ಗಳಲ್ಲಿ ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ ಖ್ಯಾತಿ ಅಪಾರ. ಆ ಕಾಲಘಟ್ಟದ ನಂತರದಲ್ಲಿ ಉದಯಿಸಿರುವುದು ಭಾರತದ ಸ್ಪಿನ್ ದೊರೆ ಅಶ್ವಿನ್ ಸ್ವದೇಶಿ ಪಿಚ್ ಮತ್ತು ವಿದೇಶಿ ಪಿಚ್ ಎರಡರಲ್ಲೂ ಕರಾಮತ್ತು ತೋರಿದ್ದಾರೆ. ಪೆವಿಲಿಯನ್ ಕೊನೆಯಿಂದ ಚೆಂಡನ್ನು ಎತ್ತಿಕೊಂಡು ನಿಂತರೆ, ಎದುರಾಳಿ ಬ್ಯಾಟ್ಸ್ಮನ್ಗಳ ಎದೆಯಲ್ಲಿ ನಡುಕ ಹುಟ್ಟಿಸಿದ ಖ್ಯಾತಿ ಅಶ್ವಿನ್ಗೆ ಸೇರಬೇಕಾದ್ದೆ. ತಂಡ ಸೋಲಿನಂಚಿನಲ್ಲಿದ್ದಾಗ ಸಾಕಷ್ಟುಪಂದ್ಯಗಳನ್ನು ತಮ್ಮ ಕೈಚಳಕದಿಂದಲೇ ಗೆಲುವಿನ ಹಾದಿ ಹಿಡಿಯುವ ಹಾಗೆ ಮಾಡಿದ್ದಾರೆ ಅಶ್ವಿನ್.
ಸದ್ಯದ ವಿಶ್ವ ಕ್ರಿಕೆಟ್ನಲ್ಲಿ ಭಾರತದ ಸ್ಪಿನ್ನರ್ ಅಶ್ವಿನ್ಗೆ ಸರಿಸಾಟಿ ಎನ್ನುವ ಸ್ಪಿನ್ನರ್ ಯಾರೂ ಇಲ್ಲ. ಉಪ ಖಂಡದಲ್ಲಿ ಭಾರತ ಪ್ರಾಬಲ್ಯ ಸಾಧಿಸಿದೆ ಅಂದರೆ ಅದು ಸ್ಪಿನ್ನರ್ಗಳಿಂದಲೇ ಎನ್ನುವುದನ್ನು ಅಶ್ವಿನ್ ರುಜುವಾತು ಮಾಡಿದ್ದಾರೆ. ನೆರೆಯ ಶ್ರೀಲಂಕಾ ತಂಡದಲ್ಲಿ ಮುತ್ತಯ್ಯ ಮುರಳೀಧರನ್ ನಂತರದ ಕಾಲದಲ್ಲಿ ಸಾಕಷ್ಟುಸ್ಪಿನ್ ಬೌಲರ್ಗಳು ಬಂದು ಹೋದರೂ ಯಾರೂ ಕಾಯಂ ಆಗಿ ರಾಷ್ಟ್ರೀಯ ತಂಡದಲ್ಲಿ ಉಳಿದುಕೊಳ್ಳಲಿಲ್ಲ. ಶ್ರೀಲಂಕಾದ ರಂಗಣ ಹೆರಾತ್ ವಯಸ್ಸಿನಲ್ಲಿ ಹಿರಿಯ ಆಟಗಾರರಾಗಿರುವ ಕಾರಣ ಅಶ್ವಿನ್ ಸರಿಸಮನಾಗಿ ಪೈಪೋಟಿ ನೀಡುವುದು ಅಸಾಧ್ಯದ ಮಾತೇ ಸರಿ. ಆದರೂ ಹೆರಾತ್ ಟೆಸ್ಟ್ ಕ್ರಿಕೆಟ್ನಲ್ಲಿ 5 ವಿಕೆಟ್ ಪಡೆದವರ ಪಟ್ಟಿಯಲ್ಲಿ ಅಶ್ವಿನ್ಗಿಂತ ಮುಂದಿದ್ದಾರೆ. ಹೆರಾತ್ 28 ಬಾರಿ ಈ ಸಾಧನೆ ಮಾಡಿದ್ದಾರೆ. ಇದಕ್ಕಾಗಿ 75 ಪಂದ್ಯಗಳ 137 ಇನಿಂಗ್ಸ್ ತೆಗೆದುಕೊಂಡಿದ್ದಾರೆ. ಆದರೆ ಅಶ್ವಿನ್ 44 ಟೆಸ್ಟ್ ಪಂದ್ಯಗಳ 82 ಇನಿಂಗ್ಸ್ನಲ್ಲಿ 24 ಬಾರಿ 5 ವಿಕೆಟ್ಗಳನ್ನು ಪಡೆದಿದ್ದಾರೆ. ಅಲ್ಲದೇ 7 ಬಾರಿ 10 ವಿಕೆಟ್ ಎಗರಿಸಿದ್ದಾರೆ. ಇನ್ನು ಪಾಕಿಸ್ತಾನ ತಂಡದ ಸ್ಪಿನ್ನರ್ಗಳಂತೂ ವಿವಾದಾತ್ಮಕ ಬೌಲಿಂಗ್ ಶೈಲಿಯಿಂದಲೇ ಹೆಚ್ಚು ಪ್ರಚಲಿತದಲ್ಲಿರುತ್ತಾರೆ. ವಿದೇಶಿ ತಂಡದಲ್ಲಿ ಹೇಳಿಕೊಳ್ಳುವಂತಹ ಸ್ಪಿನ್ನರ್ಗಳ ಸಂಖ್ಯೆ ತೀರಾ ವಿರಳವಾಗಿದೆ. ಹೀಗಾಗಿ ಅಶ್ವಿನ್ ಆಫ್ ಸ್ಪಿನ್ ವಿಭಾಗದಲ್ಲಿ ಸಾಟಿ ಇಲ್ಲದ ಸರದಾರ ಎನಿಸಿಕೊಂಡಿದ್ದಾರೆ.
(ಕನ್ನಡ ಪ್ರಭ)
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.