ಉತ್ತರ ಬರೆಯಬೇಕಾಗಿದ್ದ ಪ್ರಶ್ನೆಪತ್ರಿಕೆ ಅದಲು ಬದಲಾಗಿ ವಿದ್ಯಾರ್ಥಿಗಳು ಕಂಗಲಾದ ಘಟನೆ ದಾವಣಗೆರೆ ವಿವಿಯಲ್ಲಿ ನಡೆದಿದೆ.
ದಾವಣಗೆರೆ (ನ.23): ಉತ್ತರ ಬರೆಯಬೇಕಾಗಿದ್ದ ಪ್ರಶ್ನೆಪತ್ರಿಕೆ ಅದಲು ಬದಲಾಗಿ ವಿದ್ಯಾರ್ಥಿಗಳು ಕಂಗಲಾದ ಘಟನೆ ದಾವಣಗೆರೆ ವಿವಿಯಲ್ಲಿ ನಡೆದಿದೆ.
ನಿನ್ನೆ ಪುನರಾವರ್ತಿತ ಬಿ. ಎ ಆರನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಪತ್ರಿಕೆ-8 ಐಚ್ಛಿಕ ಇಂಗ್ಲಿಷ್ ಪತ್ರಿಕೆ ಇತ್ತು. ಆನ್ ಲೈನ್ ನಲ್ಲಿ ಬಂದ ಪ್ರಶ್ನೆ ಪತ್ರಿಕೆಗಳಿಗೆ ವಿದ್ಯಾರ್ಥಿಗಳು ಉತ್ತರಿಸಲು ಮುಂದಾದಾಗ ಅದು 2013-14 ನೇ ಸಾಲಿನ ಸಿಲಬಸ್ ವಿಷಯಾಧಾರಿತ ಪ್ರಶ್ನೆಗಳಿರುವುದು ಗಮನಕ್ಕೆ ಬಂದಿದೆ. ವಿಷಯ ಗೊತ್ತಾಗಿ ವಿದ್ಯಾರ್ಥಿಗಳು ಕಕ್ಕಾಬಿಕ್ಕಿಯಾಗಿದ್ದಾರೆ.
ತಕ್ಷಣ ಎಚ್ಚೆತ್ತ ಪರೀಕ್ಷಾ ಮೇಲ್ವಿಚಾರಕರು ಮತ್ತೊಂದು ಕೈ ಬರಹದ ಪ್ರಶ್ನೆ ಪತ್ರಿಕೆಯನ್ನು ಆನ್ ಲೈನ್ನಲ್ಲಿ ತರಿಸಿಕೊಂಡು ವಿದ್ಯಾರ್ಥಿಗಳಿಗೆ ನೀಡಿದ್ದಾರೆ. ಕೈ ಬರಹದ ಪ್ರಶ್ನೆ ಪತ್ರಿಕೆಗೆ ಉತ್ತರಿಸಿದ ವಿದ್ಯಾರ್ಥಿಗಳು ವಿವಿ ನಿರ್ಲಕ್ಷ್ಯದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಪರೀಕ್ಷಾಂಗ ಕುಲಸಚಿವರನ್ನು ಸಂಪರ್ಕಿಸಿದರೆ ಇದೊಂದು ಸಣ್ಣ ತಪ್ಪು ಎಂದು ಹಾರಿಕೆ ಉತ್ತರ ನೀಡಿ ಜಾರಿಕೊಂಡಿದ್ದಾರೆ.
