"ಪ್ರಧಾನಿ ಮೋದಿ ತೆಗೆದುಕೊಂಡಿರುವ ಹಲವು ಕ್ರಾಂತಿಕಾರಿ ನಿರ್ಧಾರಗಳಿಂದ ನಾನು ಪ್ರೇರಿತನಾಗಿದ್ದೇನೆ," ಎಂದು ಹನ್ಸ್ ಬಣ್ಣಿಸಿದ್ದಾರೆ.

ನವದೆಹಲಿ(ಡಿ. 10): "ಪ್ರಧಾನಿ ನರೇಂದ್ರ ಮೋದಿ ಒಬ್ಬ "ಬಬ್ಬರ್ ಶೇರ್"(ಸಿಂಹ). ಅವರು ನೀಡುವ ಯಾವುದೇ ಜವಾಬ್ದಾರಿಯನ್ನು ಶಿರಸಾವಹಿಸಿ ಮಾಡುತ್ತೇನೆ" - ಇದು ಖ್ಯಾತ ಪಂಜಾಬೀ ಜಾನಪದ ಗಾಯಕ ಹನ್ಸ್ ರಾಜ್ ಹನ್ಸ್ ಅವರು ಮಾಡಿರುವ ಬಣ್ಣನೆ. ಹನ್ಸ್ ರಾಜ್ ಹನ್ಸ್ ಅವರು ಕಾಂಗ್ರೆಸ್ ತೊರೆದು ಕಮಲದ ತೆಕ್ಕೆಗೆ ಬಿದ್ದಿದ್ದಾರೆ. ಅಮಿತ್ ಶಾ ಉಪಸಸ್ಥಿತಿಯಲ್ಲಿ ಶನಿವಾರ ಹನ್ಸ್ ಅವರು ಬಿಜೆಪಿ ಸೇರಿಕೊಂಡಿದ್ದಾರೆ.

"ದೇಶದ ಹಿತಾಸಕ್ತಿಗೋಸ್ಕರ ಪ್ರಧಾನಿ ಮೋದಿ ತೆಗೆದುಕೊಂಡಿರುವ ಹಲವು ಕ್ರಾಂತಿಕಾರಿ ನಿರ್ಧಾರಗಳಿಂದ ನಾನು ಪ್ರೇರಿತನಾಗಿದ್ದೇನೆ. ಮೋದಿ ಅಡಿಯಲ್ಲಿ ಭಾರತವು ವಿಶ್ವಮಟ್ಟದಲ್ಲಿ ಮುಂಚೂಣಿಯಲ್ಲಿದೆ. ಇದು ಪ್ರತಿಯೊಬ್ಬ ಭಾರತೀಯರಿಗೂ ಹೆಮ್ಮೆಯ ವಿಚಾರ" ಎಂದು ಹನ್ಸ್ ಬಣ್ಣಿಸಿದ್ದಾರೆ.

ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರನ್ನೂ ಶ್ಲಾಘಿಸಿದ ಹನ್ಸ್, ಅಮಿತ್ ಅವರ ನೇತೃತ್ವದಲ್ಲಿ ಬಿಜೆಪಿಯ ಪ್ರಭಾವ ಮತ್ತು ಜನಪ್ರಿಯತೆ ಅಗಾಧವಾಗಿ ವ್ಯಾಪಿಸಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ದಲಿತ ಸಮುದಾಯಕ್ಕೆ ಸೇರಿದ ಗಾಯಕ ಹಾಗೂ ಪದ್ಮಶ್ರೀ ವಿಜೇತ ಹನ್ಸ್ ರಾಜ್ ಹನ್ಸ್ ಸೇರ್ಪಡೆಯಿಂದ ಪಂಜಾಬ್'ನಲ್ಲಿ ಬಿಜೆಪಿಯ ಬಲ ಇನ್ನಷ್ಟು ವೃದ್ಧಿಯಾಗುವ ನಿರೀಕ್ಷೆ ಇದೆ. ಮುಂದಿನ ವರ್ಷ ಪಂಜಾಬ್'ನಲ್ಲಿ ಚುನಾವಣೆಗಳು ನಡೆಯಲಿವೆ. ಅಧಿಕಾರರೂಢ ಬಿಜೆಪಿ-ಅಕಾಲಿದಳ ಮೈತ್ರಿಕೂಟಕ್ಕೆ ಈ ಬಾರಿ ತೀವ್ರ ಪೈಪೋಟಿ ಇದೆ. ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷಗಳು ಅಧಿಕಾರ ಹಿಡಿಯಲು ಅತೀವ ಸಾಹಸ ಮಾಡುತ್ತಿವೆ. ಆಪ್ ಪಕ್ಷ ಪಂಜಾಬ್'ನಲ್ಲಿ ಆಲೌಟ್ ಸಮರ ಮಾಡುತ್ತಿದೆ. ದಿಲ್ಲಿ ಬಳಿಕ ಎರಡನೇ ರಾಜ್ಯದಲ್ಲಿ ಅಧಿಕಾರ ಹಿಡಿಯುವ ಸನ್ನಾಹದಲ್ಲಿದೆ.