ಚಂಡೀಗಢ, (ಮೇ 27): ಲೋಕಸಭೆ ಚುನಾವಣೆ ಫಲಿತಾಂಶದ ಬಳಿಕ ನೈತಿಕ ಹೊಣೆ ಹೊತ್ತು  ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ಸ್ಥಾನಕ್ಕೆ ಸುನೀಲ್ ಜಖಾರ್ ಅವರು ರಾಜೀನಾಮೆ ನೀಡಿದ್ದಾರೆ.

ಗುರ್ ದಾಸ್ ಪುರ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಸುನೀಲ್, ಬಿಜೆಪಿ ಅಭ್ಯರ್ಥಿ ಸನ್ನಿ ಡಿಯೋಲ್ ವಿರುದ್ಧ ಸೋಲು ಕಂಡಿದ್ದಾರೆ. ಈ ಹಿನ್ನೆಲೆಯಲ್ಲಿ ತಮ್ಮ ಸೋಲು ಹಾಗೂ ಪಕ್ಷದ ಕಳಪೆ ಸಾಧನೆಯ ಹೊಣೆ ಹೊತ್ತು ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವುದಾಗಿ ತಿಳಿಸಿದ್ದಾರೆ.

ಇತ್ತೀಚೆಗೆ ಉತ್ತರಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಾಜ್ ಬಬ್ಬರ್ ಅವರು ಕೂಡಾ ಪಕ್ಷದ ಕಳಪೆ ಪ್ರದರ್ಶನದ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಅಷ್ಟೇ ಅಲ್ಲದೇ ಮಹಾರಾಷ್ಟ್ರ ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ಮಾಜಿ ಮುಖ್ಯಮಂತ್ರಿ ಅಶೋಕ್‌ ಚವಾಣ್‌ ರಾಜೀನಾಮೆ ನೀಡಿರುವುದನ್ನು ಇಲ್ಲಿ ಸ್ಮರಿಸಲಬಹುದು.

542 ಸ್ಥಾನಗಳ ಪೈಕಿ ಎನ್‌ಡಿಎ 353, ಯುಪಿಎ 91 ಸ್ಥಾನಗಳಲ್ಲಿ ಇತರರಿಗೆ 98 ಸೀಟುಗಳು ಸಿಕ್ಕಿವೆ. ಇನ್ನು  ಕರ್ನಾಟಕದಲ್ಲಿ 28 ಸ್ಥಾನಗಳ ಪಕಿ ಕಾಂಗ್ರೆಸ್ ಜೆಡಿಎಸ್ ತಲಾ 1 ಸ್ಥಾನವನ್ನು ಮಾತ್ರ ಗೆದ್ದುಕೊಂಡರೆ, ಬಿಜೆಪಿ 25 ಹಾಗೂ ಒಂದು ಕ್ಷೇತ್ರ ಪಕ್ಷೇತರ ಪಾಲಾಗಿದೆ.