ಮುಂಬೈ[ಮಾ.02]: ಮಹಾರಾಷ್ಟ್ರದ ಪುಣೆಯಲ್ಲಿ ನಡೆದ ಘಟನೆಯೊಂದು ಎಲ್ಲರಲ್ಲೂ ದಿಗ್ರ್ಭಮೆ ಮೂಡಿಸಿದೆ. ಇಲ್ಲಿನ ಭವಾನಿ ಪೇಟ್ ನಲ್ಲಿ ಪತಿ ತನ್ನ ಪತ್ನಿ ಬಿಸಿ ಎಣ್ಣೆ ಎರಚಿದ್ದಾಳೆಂದು ಆರೋಪಿಸಿದ್ದಾನೆ. ಇನ್ನು ತನ್ನ ಗಂಡನ ಮೇಲೆ ಬಿಸಿ ಎಣ್ಣೆ ಎಸೆದ ಪತ್ನಿ ಅಲ್ಲಿಂದ ಪರಾರಿಯಾಗಿದ್ದಾಳೆ. 

ಶನಿವಾರದಂದು ಈ ಘಟನೆ ನಡೆದಿದ್ದು, ಸಲೀಂ ಶೇಖ್ ಎಂಬಾತ ತನ್ನ ಹೆಂಡತಿಯ ವಿರುದ್ಧ ಪೊಲೀಸ್ ಠಾಣೆಯಲ್ಲಿ FRI ದಾಖಲಿಸಿದ್ದಾನೆ. ಪ್ರಕರಣದ ಕುರಿತು ಮಾಹಿತಿ ನೀಡಿರುವ ಹಿರಿಯ ಪೊಲೀಸ್ ಅಧಿಕಾರಿ 'ಶೇಖ್ ಅಂಗಡಿಯೊಂದಲರಲ್ಲಿ ಕೆಲಸ ಮಾಡುತ್ತಿದ್ದು, ಆತನ ಹೆಂಡತಿ ಗೃಹಿಣಿಯಾಗಿದ್ದಾರೆ. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಇಬ್ಬರ ನಡುವೆ ಮನಸ್ತಾಪವಿದ್ದು, ಪ್ರತಿ ದಿನ ಒಂದಿಲ್ಲೊಂದು ಕಾರಣಕ್ಕೆ ಜಗಳವಾಗುತ್ತಿತ್ತು' ಎಂದಿದ್ದಾರೆ.

ಎಂದಿನಂತೆ ಶನಿವಾರವೂ ಶೇಖ್ ತನ್ನ ಕೆಲಸ ಮುಗಿಸಿ ಮನೆಗೆ ಮರಳಿದ್ದಾನೆ. ಈ ಸಂದರ್ಭದಲ್ಲಿ ಆತನ ಹೆಂಡತಿ ಊಟ ರೆಡಿ ಮಾಡುತ್ತಿದ್ದರು. ಒಲೆಯ ಮೇಲೆ ಎಣ್ಣೆ ಬಿಸಿ ಮಾಡಲು ಇಟ್ಟಿದ್ದರು. ಹೀಗಿರುವಾಗ ಅದ್ಯಾವುದೋ  ಕಾರಣಕ್ಕೆ ಜಗಳವಾಡಿಕೊಂಡಿದ್ದಾರೆ. ಬಳಿಕ ಗಂಡ ಸ್ನಾನಕ್ಕೆ ತೆರಳಿದ್ದಾನೆ. ಆದರೆ ಸ್ನಾನ ಮುಗಿಸಿ ಬಾಗಿಲು ತೆರೆಯುತ್ತಿದ್ದಂತೆಯೇ ಬಿಸಿ ಎಣ್ಣೆ ಹಿಡಿದು ನಿಂತಿದ್ದ ಹೆಂಡತಿ ಆತನ ಮೇಲೆ ಅದನ್ನೆಸೆದಿದ್ದಾಳೆ.

ದೇಹದ ಮೇಲೆಲ್ಲಾ ಬಿಸಿ ಎಣ್ಣೆ ಬಿದ್ದಿದ್ದು, ಉರಿ ಹಾಗೂ ನೋವು ತಡೆಯಲಾರದ ಗಂಡ ನರಳಲಾರಂಭಿಸಿದ್ದಾನೆ. ಗಂಡನ ಈ ನರಳಾಟ ಕಂಡ ಹೆಂಡತಿಯ ಕೋಪ ಇಳಿದು ಹೋಗಿದೆ. ಆತನ ಈ ನರಳಾಟ ನೋಡಲಾಗದೆ ಆಕೆ ಅಲ್ಲಿಂದ ಕಾಲ್ಕಿತ್ತಿದ್ದಾಳೆ. ಆದರೆ ಸಲೀಂ ನರಳಾಟ ಹೆಚ್ಚಾಗಿದ್ದು, ಇದನ್ನು ಕೇಳಿದ ಅಕ್ಕ ಪಕ್ಕದ ಮನೆಯವರು ಓಡಿ ಬಂದಿದ್ದಾರೆ ಹಾಗೂ ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ದಾರೆ.