ಪುಣೆ (ಡಿ. 24): ಸಂಚಾರ ನಿಯಮ ಉಲ್ಲಂಘಿಸಿ, ಅದರ ದಂಡ ಪಾವತಿ ಮಾಡದೇ ಇರುವವರ ಪಾಸ್ಪೋರ್ಟ್‌ ಅರ್ಜಿಗಳನ್ನು ತಡೆ ಹಿಡಿಯುವ ವಿನೂತನ ಯೋಜನೆಯೊಂದನ್ನು ಪುಣೆ ಪೊಲೀಸರು ಜಾರಿಗೆ ತಂದಿದ್ದಾರೆ. ಹೀಗಾಗಿ ದಂಡ ಬಾಕಿ ಉಳಿಸಿಕೊಂಡ 360 ಜನರ ಪಾಸ್‌ಪೋರ್ಟ್‌ ಅರ್ಜಿಗಳು ಇದೀಗ, ಪಾಸ್‌ಪೋರ್ಟ್‌ ಕಚೇರಿಯಲ್ಲಿ ಬಾಕಿ ಉಳಿಯುವಂತಾಗಿದೆ.

ಸಂಚಾರಿ ನಿಯಮ ಉಲ್ಲಂಘಿಸಿದವರ ಮಾಹಿತಿ ಮತ್ತು ದಂಡ ಬಾಕಿ ಮಾಹಿತಿಯನ್ನು ಪಾಸ್‌ಪೋರ್ಟ್‌ ಕಚೇರಿ ಮತ್ತು ನಡತೆ ಪ್ರಮಾಣ ಪತ್ರ ಇಲಾಖೆಗೆ ಜೋಡಣೆ ಮಾಡುವ ಯೋಜನೆಯನ್ನು ಪೊಲೀಸರು ಕೆಲ ತಿಂಗಳ ಹಿಂದೆ ಆರಂಭಿಸಿದ್ದರು. ಹೀಗಾಗಿ ಯಾರಾರ‍ಯರು ದಂಡ ಬಾಕಿ ಉಳಿಸಿಕೊಂಡಿರುತ್ತಾರೋ ಅವರ ಅರ್ಜಿಗಳು ಪಾಸ್‌ಪೋರ್ಟ್‌ ಕಚೇರಿಯಲ್ಲಿ ವಿಲೇವಾರಿ ಆಗುವುದಿಲ್ಲ. ಇದೇ ಕಾರಣಕ್ಕಾಗಿ ಇದುವರೆಗೆ 360 ಪಾಸ್‌ಪೋರ್ಟ್‌ ಅರ್ಜಿಗಳು  ಕಚೇರಿಯಲ್ಲೇ ಬಾಕಿ ಉಳಿದುಕೊಂಡಿವೆ. ದಂಡ ಪಾವತಿ ಮಾಡಿದಾಕ್ಷಣ ಪಾಸ್‌ಪೋರ್ಟ್‌ ಕಚೇರಿಗೆ ಮಾಹಿತಿ ರವಾನೆಯಾಗಿ ಅಲ್ಲಿಂದ ಅರ್ಜಿಗಳೂ ವಿಲೇವಾರಿಯಾಗುತ್ತದೆ.

ನಗರದ ಜನಸಂಖ್ಯೆಗಿಂತ ಹೆಚ್ಚು ವಾಹನಗಳನ್ನು ಹೊಂದಿರುವ ಕುಖ್ಯಾತಿಗೆ ಪಾತ್ರವಾಗಿರುವ ಪುಣೆಯಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡುವುದರ ಜೊತೆಗೆ ಜನರಲ್ಲಿ ಸಂಚಾರ ನಿಯಮಗಳ ಬಗ್ಗೆ ಅರಿವು ಮೂಡಿಸಲು ಈ ಕ್ರಮ ಅಗತ್ಯ ಎಂದು ಪೊಲೀಸರು ಹೇಳಿದ್ದಾರೆ. ಪುಣೆಯಲ್ಲಿ 35 ಲಕ್ಷ ಜನ ವಾಸವಿದ್ದರೆ, ನಗರದಲ್ಲಿ ನೋಂದಣಿಯಾಗಿರುವ ವಾಹನಗಳ ಸಂಖ್ಯೆ 36 ಲಕ್ಷ ಇದೆ.