ಶ್ರೀನಗರ: ಪಠಾಣ್‌ಕೋಟ್‌ ದಾಳಿ ಹಾಗೂ ಐಸಿ-814 ವಿಮಾನ ಹೈಜಾಕ್‌ ಪ್ರಕರಣದ ರೂವಾರಿ ಜೈಷ್‌-ಎ-ಮೊಹಮ್ಮದ್‌ ಸಂಘಟನೆಯ ಮುಖ್ಯಸ್ಥ ಮಸೂದ್‌ ಅಜರ್‌ ಪಾಕಿಸ್ತಾನದ ಸೇನಾ ಆಸ್ಪತ್ರೆಯಲ್ಲಿದ್ದುಕೊಂಡೇ ಪುಲ್ವಾಮಾ ದಾಳಿ ರೂಪಿಸಿದ್ದಾನೆ ಎಂದು ತಿಳಿದುಬಂದಿದೆ.

ಗಂಭೀರ ಅನಾರೋಗ್ಯಕ್ಕೆ ತುತ್ತಾಗಿರುವ ಮಸೂದ್‌ ಅಜರ್‌ ಕಳೆದ ನಾಲ್ಕು ತಿಂಗಳಿನಿಂದ ರಾವಲ್ಪಿಂಡಿ ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಕಳೆದ ಆರು ತಿಂಗಳಿನಿಂದ ಆತ ಪಾಕಿಸ್ತಾನ ಸೇನೆಯ ಬೆಂಬಲವಿರುವ ಯುನೈಟೆಡ್‌ ಜಿಹಾದ್‌ ಕೌನ್ಸಿಲ್‌ ಸಭೆಗಳಿಗೂ ಹಾಜರಾಗಿಲ್ಲ. 

ಆದರೆ, ಪುಲ್ವಾಮಾ ದಾಳಿಗೆ 8 ದಿನಗಳ ಮುನ್ನ ಅವನೊಂದು ಆಡಿಯೋ ಸಂದೇಶ ಬಿಡುಗಡೆ ಮಾಡಿದ್ದು, ಅದರಲ್ಲಿ ಕಳೆದ ಅಕ್ಟೋಬರ್‌ನಲ್ಲಿ ಭದ್ರತಾ ಪಡೆಗಳಿಂದ ಹತ್ಯೆಗೀಡಾದ ತನ್ನ ಸಂಬಂಧಿ ಉಸ್ಮಾನ್‌ನ ಸಾವಿಗೆ ಪ್ರತೀಕಾರ ತೆಗೆದುಕೊಳ್ಳುವಂತೆ ಕರೆ ನೀಡಿದ್ದಾನೆ. ಈ ದಾಳಿ ನಡೆಸುವ ಯೋಜನೆಯನ್ನು ಅವನು ಯನೈಟೆಡ್‌ ಜಿಹಾದ್‌ ಕೌನ್ಸಿಲ್‌ಗೂ ತಿಳಿಸದೆ, ಜೈಷ್‌ ಸಂಘಟನೆಯಲ್ಲಿರುವ ತನ್ನ ಆಪ್ತರ ಮೂಲಕ ಮಾಡಿಸಿದ್ದಾನೆ ಎಂದು ಮೂಲಗಳು ಹೇಳಿವೆ. ಆಡಿಯೋದಲ್ಲಿ ಅಜರ್‌ ಭಾರತದ ಮೇಲೆ ಗಡಿಯಲ್ಲಿ ಯುದ್ಧ ಸಾರುವಂತೆ ಪ್ರಚೋದನಕಾರಿಯಾಗಿ ಮಾತನಾಡಿದ್ದಾನೆ.

ಇನ್ನು, ಜಮ್ಮು ಕಾಶ್ಮೀರದಲ್ಲಿ ಒಟ್ಟು 60 ಜೈಷ್‌ ಉಗ್ರರಿದ್ದು, ಅವರಲ್ಲಿ 35 ಮಂದಿ ಪಾಕಿಸ್ತಾನದಿಂದ ಬಂದವರು, ಇನ್ನುಳಿದವರು ಸ್ಥಳೀಯ ಯುವಕರು ಎಂದು ಹೇಳಲಾಗಿದೆ.