ಡೆಹ್ರಾಡೂನ್[ಫೆ.23]: ಪುಲ್ವಾಮಾದಲ್ಲಿ ನಡೆದ ಆತ್ಮಾಹುತಿ ದಾಳಿಯಲ್ಲಿ ಮೊದಲು ದೇಶವು ತನ್ನ 40 CRPF ಯೋಧರನ್ನು ಕಳೆದುಕೊಂಡಿತು. ಇದಾದ ಬಳಿಕ ಫೆಬ್ರವರಿ 18ರಂದು ನಡೆದ ಎನ್ಕೌಂಟರ್‌ನಲ್ಲಿ ನಾಲ್ವರು ಯೋಧರು ಹುತಾತ್ಮರಾಗಿದ್ದರು. ಜೈಷ್-ಎ-ಮೊಹಮ್ಮದ್ ಸಂಘಟನೆಯ ಉಗ್ರರೊಂದಿಗೆ ನಡೆದಿದ್ದ ಗುಂಡಿನ ಕಾಳಗದಲ್ಲಿ ಹುತಾತ್ಮರಾದ ನಾಲ್ವರು ಯೋಧರಲ್ಲಿ ಮೇಜರ್ ವಿಭೂತಿ ಡೌಂಡಿಯಾಲ್ ಕೂಡಾ ಒಬ್ಬರು. ಡೆಹ್ರಾಡೂನ್ ನಿವಾಸಿಯಾಗಿದ್ದ ಮೇಜರ್ ವಿಭೂತಿ ಡೌಂಡಿಯಾಲ್ ಮದುವೆ 10 ತಿಂಗಳ ಹಿಂದಷ್ಟೇ ನಡೆದಿದ್ದು, ಏಪ್ರಿಲ್ 10 ರಂದು ವೆಡ್ಡಿಂಗ್ ಆ್ಯನಿವರ್ಸರಿ ಇತ್ತು.

ಹುತಾತ್ಮ ಮೇಜರ್ ವಿಭೂತಿ ಡೌಂಡಿಯಾಲ್ ಅಂತಿಮ ಯಾತ್ರೆಯಲ್ಲಿ ಅವರ ಪತ್ನಿ ನಿಕಿತಾ ಕೌಲ್ ಆಡಿದ್ದ ಮಾತುಗಳು ಬಹುತೇಕ ಎಲ್ಲರನ್ನೂ ಭಾವುಕರನ್ನಾಗಿಸಿತ್ತು. ಹೀಗಿರುವಾಗಲೇ ಇವರ ಮದುವೆ ವಿಡಿಯೋ ಒಂದು ವೈರಲ್ ಆಗಿದ್ದು, ಇದನ್ನು ಅನೇಕರು ಶೇರ್ ಮಾಡಿಕೊಳ್ಳುತ್ತಿದ್ದಾರೆ. ಇದರಲ್ಲಿ ಹುತಾತ್ಮ ಮೇಜರ್ ತನ್ನ ಪತ್ನಿ ನಿಕಿತಾರೊಂದಿಗೆ ಡಾನ್ಸ್ ಮಾಡುತ್ತಿರುವ ದೃಶ್ಯಗಳಿವೆ.

ಸೇನಾ ಮೇಜರ್ ವಿಭೂತಿ ಡೌಂಡಿಯಾಲ್ ಮದುವೆ ದಿನ ನಿಕಿತಾರೊಂದಿಗೆ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದರು. ಅಲ್ಲದೇ ಮಂಡಿಯೂರಿ ತನ್ನ ಮುದ್ದಿನ ಮಡದಿ ನಿಕಿತಾಗೆ ಪ್ರೀತಿಯಿಂದ ಗುಲಾಬಿ ಹೂವೊಂದನ್ನು ನೀಡಿದ್ದರು.

ಇದಕ್ಕೂ ಮೊದಲು ಹುತಾತ್ಮ ಮೇಜರ್ ವಿಭೂತಿ ಡೌಂಡಿಯಾಲ್ ರವರ ಅಂತಿಮ ಯಾತ್ರೆಯ ವಿಡಿಯೋ ಒಂದೂ ವೈರಲ್ ಆಗಿದ್ದು, ಇದರಲ್ಲಿ ಪತ್ನಿ ನಿಕಿತಾ ತನ್ನ ಗಂಡನ ಪಾರ್ಥೀವರ ಶರೀರದ ಬಳಿ ತೆರಳಿ 'ನೀನು ನನ್ನನ್ನು ಪ್ರೀತಿಸುತ್ತೀ ಎಂದು ಸುಳ್ಳು ಹೇಳಿದ್ದಿ. ನನಗೆ ತುಂಬಾ ಅಸೂಯೆಯಾಗುತ್ತಿದೆ, ಆದರೂ ನನ್ನಿಂದ ಏನೂ ಮಾಡಲು ಸಾಧ್ಯವಿಲ್ಲ. ನಾವೆಲ್ಲರೂ ನಿನ್ನನ್ನು ತುಂಬಾ ಪ್ರೀತಿಸುತ್ತೇವೆ. ನೀನು ದೇಶಕ್ಕಾಗಿ ಹುತಾತ್ಮನಾಗಿದ್ದೀ, ನೀನು ಬಹಳ ಧೈರ್ಯವಂತ. ನೀನೊಬ್ಬ ಒಳ್ಳೆಯ ಗಂಡ ನನಗೆ ನನ್ನ ಕೊನೆಯ ಉಸಿರಿರುವವರೆಗೂ ಹೆಮ್ಮೆ ಇರುತ್ತದೆ. ನಾನು ನಿನ್ನನ್ನು ಎಂದೆಂದಿಗೂ ಪ್ರೀತಿಸುತ್ತೇನೆ ವಿಭೂ.... ನೀನು ನಮ್ಮೊಂದಿಗಿಲ್ಲ ಎಂಬ ನೋವು ಯಾವತ್ತೂ ಕಾಡಲಿದೆ ಆದರೆ ನೀನು ಯಾವತದ್ತೂ ನನ್ನೊಂದಿಗಿರುತ್ತೀ ಎಂದು ನನಗೆ ತಿಳಿದಿದೆ' ಎಂದಿದ್ದರು. ಅಲ್ಲದೇ ಜನರನ್ನುದ್ದೇಶಿಸಿ 'ಯಾರೂ ನಮಗೆ ಸಹಾನುಭೂತಿ ತೋರಿಸಬೇಡಿ. ಧೈರ್ಯದಿಂದಿರಿ ಹಾಗೂ ಈ ವೀರ ಯೋಧನಿಗೆ ಸೆಲ್ಯೂಟ್ ಮಾಡಿ' ಎಂದಿದ್ದರು. ಈ ಮಾತುಗಳು ಅಲ್ಲಿದ್ದ ಎಲ್ಲರನ್ನೂ ಭಾವುಕರನ್ನಾಗಿಸಿತ್ತು.