ಕೊಪ್ಪಳ (ಮೇ. 14): ಏಳೆಂಟು ವರ್ಷದ ಬಾಲಕ ಚಿಂದಿ ಆಯುತ್ತಾ, ಭಿಕ್ಷೆ ಬೇಡುತ್ತಿದ್ದ. ಶಿಕ್ಷಕರೊಬ್ಬರ ಕಣ್ಣಿಗೆ ಬಿದ್ದು ಶಾಲೆ ಸೇರಿದ ಈತ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್‌ನಲ್ಲಿ ಪಾಸಾಗಿದ್ದಾನೆ. ದ್ವಿತೀಯ ಪಿಯು ಫಲಿತಾಂಶ ಪ್ರಕಟವಾದ ಮೇಲೆ ಯಾವ ಕಾಲೇಜಿಗೆ ಪ್ರವೇಶ ಪಡೆಯಬೇಕು ಎಂದು ತೇರ್ಗಡೆ ಹೊಂದಿದ ವಿದ್ಯಾರ್ಥಿಗಳೆಲ್ಲಾ ತಲೆಕೆಡಿಸಿಕೊಂಡಿದ್ದರೆ, ಈತ ಮಾತ್ರ ಮಹಾರಾಷ್ಟ್ರದ ಇಚಲಕರಂಜಿಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದಾನೆ.

ಕೊಪ್ಪಳ ತಾಲೂಕಿನ ಕುದರಿಮೋತಿ ಗ್ರಾಮದ ಚಂದ್ರು ಲಕ್ಷ್ಮಪ್ಪ ಕೊಂಡಪಲ್ಲಿ ಎಂಬುವನ ಜೀವನದ ಕತೆ ಇದು. ಧಾರವಾಡದ ಮಾಳಮಡ್ಡಿಯ ಕೆಇ ಬೋರ್ಡ್‌ ಕಾಲೇಜು ಮತ್ತು ಹಾಸ್ಟೆಲ್‌ನಲ್ಲಿ ಇದ್ದುಕೊಂಡು ಕಲಾ ವಿಭಾಗದಲ್ಲಿ ಶೇ.89 ರಷ್ಟುಅಂಕ ಪಡೆಯುವ ಮೂಲಕ ಡಿಸ್ಟಿಂಕ್ಷನ್‌ನಲ್ಲಿ ಈತ ಪಾಸಾಗಿದ್ದಾನೆ.

ಕೊಪ್ಪಳ ತಾಲೂಕಿನ ಕುದರಿಮೋತಿ ಗ್ರಾಮದ ಚಂದ್ರು ತಂದೆ- ತಾಯಿಗಳು ವೇಷಗಾರರು. ಹೀಗಾಗಿ 8-10 ವರ್ಷಗಳ ಹಿಂದೆ ಸಹಜವಾಗಿಯೇ ಚಂದ್ರು ಬಾಲ್ಯದಲ್ಲಿ ಭಿಕ್ಷೆ ಬೇಡುತ್ತಿದ್ದ. ಬಸ್‌ ನಿಲ್ದಾಣದ ಸುತ್ತಮುತ್ತ ಚಿಂದಿಯನ್ನು ಆಯುತ್ತಿದ್ದ. ಈ ವೇಳೆ ಕುದರಿಮೋತಿ ಶಾಲೆಯ ಮುಖ್ಯೋಪಾಧ್ಯಾಯ ದೇವರಡ್ಡಿ ಬಿಸರಳ್ಳಿ ಈತನನ್ನು ಶಾಲೆಗೆ ಸೇರಿಸಿದ್ದರು.

ರಜಾ ದಿನ, ಬಿಡುವಿನ ಸಮಯದಲ್ಲಿ ಕೂಲಿ ಕೆಲಸ ಮಾಡುವುದು. ಶಾಲೆಯಿಂದ ಮನೆಗೆ ಹೋದ ಬಳಿಕ ಕೆಲವೊಮ್ಮೆ ಕೂಲಿ ಕೆಲಸ ಮಾಡುತ್ತಲೇ ಓದಿನಲ್ಲಿ ಮಗ್ನನಾಗುತ್ತಿದ್ದ. ಹೀಗೆ ರಜಾದಿನಗಳಲ್ಲಿ ಕೆಲಸ ಮಾಡತ್ತಾ ತನ್ನ ಓದಿಗೆ ಹಣ ಹೊಂದಿಸಿಕೊಳ್ಳುತ್ತಿದ್ದ.

ಪ್ರತಿ ವರ್ಷ ರಜೆಯಲ್ಲಿ ಈತ ಕೆಲಸ ಅರಸಿ ಊರೂರು ಗುಳೆ ಹೋಗುತ್ತಾನೆ. ಈಗ ಫಲಿತಾಂಶ ಪ್ರಕಟವಾಗಿದ್ದರೂ ಚಂದ್ರು ಮಹಾರಾಷ್ಟ್ರಕದ ಇಚಲಕರಂಜಿಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದಾನೆ.