ತೈಲ ಬೆಲೆ ಏರಿಕೆ ಖಂಡಿಸಿ ಜರ್ಮನಿಯಲ್ಲೂ ಪ್ರತಿಭಟನೆ | ಕಾರನ್ನು ರಸ್ತೆಯಲ್ಲಿ ಬಿಟ್ಟು ಪ್ರತಿಭಟನೆ | ಇದರಿಂದ ತೈಲ ಬೆಲೆ ತಗ್ಗಿಸಿದ ಸರ್ಕಾರ 

ಬೆಂಗಳೂರು (ಸೆ. 12): ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಬಗ್ಗೆ ದೇಶಾದ್ಯಂತ ಖಂಡನೆ ವ್ಯಕ್ತವಾಗುತ್ತಿದೆ. ಈ ನಡುವೆ ರಸ್ತೆಯಲ್ಲಿ ಕಣ್ಣಿಗೆ ಕಾಣುವಲ್ಲಿಯ ತನಕ ಕಾರುಗಳನ್ನು ನಿಲ್ಲಿಸಿರುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಇದರೊಂದಿಗೆ ‘ಜರ್ಮನಿಯಲ್ಲಿ ಅಲ್ಲಿನ ಸರ್ಕಾರ ಪೆಟ್ರೋಲ್ ಡೀಸೆಲ್ ಬೆಲೆಯನ್ನು ಏರಿಸಿದ ಒಂದು ಗಂಟೆಯ ಒಳಗಾಗಿ ಪ್ರತಿಯೊಬ್ಬರೂ ಅವರವರ ಕಾರನ್ನು ನಡುರಸ್ತೆಯಲ್ಲೇ ಬಿಟ್ಟು ಮನೆಗೆ ನಡೆದಿದ್ದಾರೆ. ಇದಾದ ಬಳಿಕ ಅಲ್ಲಿನ ಸರ್ಕಾರ ತೈಲ ಬೆಲೆಯನ್ನು ತಗ್ಗಿಸಿದೆ. ಜನರು ಬುದ್ಧಿವಂತಿಕೆಯಿಂದ ಕೆಲಸ ಮಾಡಿದರೆ ಯಾವ ಸರ್ಕಾರವೂ ಜನರನ್ನು ಮೂರ್ಖರಾಗಿಸಲು ಸಾಧ್ಯವಿಲ್ಲ. ಇದನ್ನು ಆದಷ್ಟು ಶೇರ್ ಮಾಡಿ’ ಎಂದು ಹೇಳಲಾಗಿದೆ.

‘ಇಂಡಿಯಾ ದೇಖೋ’ ಇದನ್ನು ಮೊದಲಿಗೆ ಪೋಸ್ಟ್ ಮಾಡಿದ್ದು 19000 ಬಾರಿ ಶೇರ್ ಆಗಿದೆ. ಬಳಿಕ ಇದು ವೈರಲ್ ಆಗಿದೆ. ಆದರೆ ನಿಜಕ್ಕೂ ಜರ್ಮನಿಯಲ್ಲಿ ತೈಲ ಬೆಲೆ ಏರಿಕೆ ವಿರುದ್ಧ ಈ ರೀತಿ ಪ್ರತಿಭಟನೆ ನಡೆಸಲಾಗಿತ್ತೇ ಎಂದು ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಹುಡುಕಾಟ ನಡೆಸಿದಾಗ ಇದು ಸುಳ್ಳು ಸುದ್ದಿ ಎಂಬುದು ಸಾಬೀತಾಗಿದೆ. ವಾಸ್ತವವಾಗಿ ಇದು ಜರ್ಮನಿಯ ಫೋಟೋ ಅಲ್ಲ.

ಈ ಬಗ್ಗೆ ಮಾಧ್ಯಮವೊಂದರಲ್ಲಿ ವರದಿಯಾಗಿದ್ದು ಅದರಲ್ಲಿ, 2012 ರ ಅಕ್ಟೋಬರ್‌ನಲ್ಲಿ ಚೀನಾದಲ್ಲಿ ದಶಕಗಳ ಇತಿಹಾಸದಲ್ಲಿಯೇ ಮೊದಲ ಬಾರಿಗೆ ರಾಷ್ಟ್ರೀಯ ರಜಾ ದಿನ ಘೋಷಿಸಿ 8 ದಿನ ಉಚಿತ ಟೋಲ್ ಘೋಷಿಸಲಾಗಿತ್ತು. ಇದರ ಉಪಯೋಗ ಪಡೆಯಲು 1.3 ಕೋಟಿ ಜನರು ಒಟ್ಟಿಗೇ ಮಕ್ಕಳೊಂದಿಗೆ ರಸ್ತೆಗಿಳಿದಿದ್ದರು. ಪರಿಣಾಮವಾಗಿ ಈ ರೀತಿ ಟ್ರಾಫಿಕ್ ಜಾಮ್ ಉಂಟಾಗಿತ್ತು ಎಂದಿತ್ತು. ಹಾಗಾಗಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ವಿರುದ್ಧ ರಸ್ತೆಯಲ್ಲೇ ಕಾರು ನಿಲ್ಲಿಸಿ ಜರ್ಮನಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಸುದ್ದಿ ಸುಳ್ಳು. 

- ವೈರಲ್ ಚೆಕ್