ಬೆಂಗಳೂರು[ಆ.10]: ಗ್ರಾಮ ಪಂಚಾಯತಿಗಳ ವರಮಾನ ಹೆಚ್ಚಿಸುವ ಜೊತೆಗೆ ಆಸ್ತಿಯ ಮಾಹಿತಿಯನ್ನು ಕರಾರುವಾಕ್ಕಾಗಿ ಪಡೆಯುವ ಉದ್ದೇಶದಿಂದ ರಾಜ್ಯದ ಎಲ್ಲ ಜಿಲ್ಲೆಯ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿರುವ ಆಸ್ತಿಯನ್ನು ಡಿಜಿಟಲೀಕರಣ ಗೊಳಿಸಲು ರಾಜ್ಯ ಸರ್ಕಾರ ಮುಂದಾಗಿದೆ.

ಗ್ರಾಮ ಪಂಚಾಯತಿಗಳಲ್ಲಿ ಈಗಾಗಲೇ ಆಸ್ತಿಗಳ ವಿವರ ಲಭ್ಯವಿದ್ದರೂ ನಾನಾ ಕಾರಣಗಳಿಂದ ಸಂಪೂರ್ಣ ಆಸ್ತಿಗಳ ಮಾಹಿತಿ ಲಭ್ಯವಿಲ್ಲದ ಹಿನ್ನೆಲೆಯಲ್ಲಿ ಅನೇಕರು ತೆರಿಗೆ ಕಟ್ಟುವುದರಿಂದ ತಪ್ಪಿಸಿಕೊಳ್ಳುತ್ತಿದ್ದಾರೆ. ಅಲ್ಲದೇ ವರ್ಷದಿಂದ ವರ್ಷಕ್ಕೆ ಹೊಸ ಆಸ್ತಿಗಳು ನಿರ್ಮಾಣವಾಗುತ್ತಿದ್ದರೂ ತೆರಿಗೆ ವ್ಯಾಪ್ತಿಯಲ್ಲಿ ಸೇರ್ಪಡೆಯಾಗದ ಹಿನ್ನೆಲೆಯಲ್ಲಿ ಡಿಜಿಟಲೀಕರಣ ಮಾಡಲು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ ಉದ್ದೇಶಿಸಿದೆ.

ಪ್ರಾಯೋಗಿಕವಾಗಿ ಬೆಂಗಳೂರು ನಗರ ಜಿಲ್ಲೆಯಲ್ಲಿನ ಆಸ್ತಿಗಳನ್ನು ಡಿಜಿಟಲೀಕರಣ ಮಾಡಲು ಹಾಗೂ ತುಮಕೂರು ಜಿಲ್ಲೆಯಲ್ಲಿ ಆಸ್ತಿಗಳ ಮಾಹಿತಿಯನ್ನು ಮ್ಯಾನ್ಯೂಯಲ್ ಸಮೀಕ್ಷೆ ಮೂಲಕ ಕೈಗೆತ್ತಿಕೊಳ್ಳಲು ಇಲಾಖೆ ನಿರ್ಧರಿಸಿದೆ. ಈ ಪ್ರಕ್ರಿಯೆ ಪೂರ್ಣಗೊಂಡ ನಂತರ ಎಲ್ಲ ಜಿಲ್ಲೆಗಳಲ್ಲಿ ಹಂತ ಹಂತವಾಗಿ ಅನುಷ್ಠಾನಕ್ಕೆ ತರಲು ಇಲಾಖೆ ನಿರ್ಧರಿಸಿದೆ. ಡಿಜಿಟಲೀಕರಣ ಪ್ರಕ್ರಿಯೆ ವೇಳೆಯಲ್ಲಿ ‘ಪಂಚತಂತ್ರ’ ಮತ್ತು ಇ-ಸ್ವತ್ತು ತಂತ್ರಾಂಶಗಳಲ್ಲಿ ಸೇರದೇ ಇರುವ ಹೊಸ ಆಸ್ತಿಗಳನ್ನು ಗುರುತಿಸಿ, ಇಂತಹ ಆಸ್ತಿಗಳನ್ನು ತೆರಿಗೆ ವ್ಯಾಪ್ತಿಗೆ ತರಲಾಗುವುದು. 

ಪಂಚತಂತ್ರ ತಂತ್ರಾಂಶದಲ್ಲಿದ್ದು, ಇ-ಸ್ವತ್ತು ತಂತ್ರಾಂಶದಲ್ಲಿ ಇಲ್ಲದೇ ಇರುವ ಆಸ್ತಿಗಳನ್ನು ದಾಖಲೆಗಳೊಂದಿಗೆ ಇ-ಸ್ವತ್ತು ತಂತ್ರಾಂಶಕ್ಕೆ ಸೇರ್ಪಡೆ ಮಾಡಲಾಗುವುದು. ಈಗಾಗಲೇ ಇ-ಸ್ವತ್ತು ತಂತ್ರಾಂಶದಲ್ಲಿರುವ ಆಸ್ತಿಗಳನ್ನು ಪರಿಶೀಲಿಸಿ ದೃಢೀಕರಿಸಲಾಗುವುದು ನಂತರ ಕರ್ನಾಟಕ ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರ(ಕೆಎಸ್‌ಆರ್‌ಎಸ್ ಎಸಿ)ದಿಂದ ಪಡೆದ ನಕ್ಷೆಯೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ‘ಪಾಲಿಗನ್’ (ವಿವಿಧ ಕೋನಗಳಿಂದ ಆಸ್ತಿ ಚಿತ್ರಣ) ಸಿದ್ಧಪಡಿಸಲಾಗುವುದು.

ಹೆಚ್ಚುವರಿ ಮಾನವ ಸಂಪನ್ಮೂಲ:

ಡಿಜಿಟಲೀಕರಣ ಪ್ರಕ್ರಿಯೆಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಗ್ರಾಮ ಪಂಚಾಯತಿ ಸಿಬ್ಬಂದಿಗಳ ಜೊತೆ ಹೊರ ಗುತ್ತಿಗೆ ಸಂಸ್ಥೆಯಿಂದ ಪ್ರತಿ ಗ್ರಾಮ ಪಂಚಾಯತಿಗೆ ಎಂಟು ಜನರನ್ನು ನೀಡಲಾಗುತ್ತದೆ. ಗ್ರಾಮ ಪಂಚಾಯತಿ ಕಾರ್ಯದರ್ಶಿ, ದ್ವಿತೀಯ ದರ್ಜೆ ಲೆಕ್ಕ ಸಹಾಯಕ, ಕ್ಲರ್ಕ್ ಅಥವಾ ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್ ಮತ್ತು ಬಿಲ್ ಕಲೆಕ್ಟರ್‌ಗಳ ನೇತೃತ್ವದಲ್ಲಿ ನಾಲ್ಕು ತಂಡಗಳನ್ನು ರಚಿಸಿಲಾಗುವುದು. ಪ್ರತಿ ತಂಡಕ್ಕೆ ಇಬ್ಬರು ಹೊರ ಗುತ್ತಿಗೆ ನೌಕರರನ್ನು ನೇಮಿಸಲು ಉದ್ದೇಶಿಸಲಾಗಿದೆ.

ಮೂರು ತಿಂಗಳಲ್ಲಿ ಪ್ರಕ್ರಿಯೆ:

ಬೆಂಗಳೂರು ನಗರ ಜಿಲ್ಲೆಯ ಗ್ರಾಮ ಪಂಚಾಯತಿಗಳ ಆಸ್ತಿಗಳ ಡಿಜಟಲೀಕರಣ ಪ್ರಕ್ರಿಯೆಯನ್ನು ಮೂರು ತಿಂಗಳಲ್ಲಿ ಪೂರ್ಣಗೊಳಿಸಲು ಕಾಲಾವಧಿ ನಿಗದಿಪಡಿಸಲಾಗಿದೆ.

ತುಮಕೂರಿನಲ್ಲಿ ಮ್ಯಾನ್ಯುಯಲ್ ಸಮೀಕ್ಷೆ: 

ತುಮಕೂರು ಜಿಲ್ಲೆಯ ಗ್ರಾಮ ಪಂಚಾಯತಿಗಳ ಆಸ್ತಿಯನ್ನು ಗ್ರಾಮ ಪಂಚಾಯತಿಗಳ ಸಿಬ್ಬಂದಿಗಳ ಮೂಲಕವೇ ಮ್ಯಾನ್ಯೂಯಲ್ ಮೂಲಕ ಸಮೀಕ್ಷೆ ಮಾಡಲು ಉದ್ದೇಶಿಸಲಾಗಿದೆ. ಇದಕ್ಕಾಗಿ ಸಿದ್ಧಪಡಿಸಿದ ನಮೂನೆಯಲ್ಲಿ ಪ್ರತಿ ಮನೆ/ಆಸ್ತಿ ಬಳಿ ಭೇಟಿ ನೀಡಿ ವಿವರ ಭರ್ತಿ ಮಾಡುವ ಜೊತೆಗೆ ಆಸ್ತಿಯ ಫೋಟೋ ತೆಗೆಯಲಾಗುವುದು. ಈ ರೀತಿ ಸಂಗ್ರಹಿಸಿದ ಮಾಹಿತಿಯನ್ನು ಆಸ್ತಿಯ ಪೋಟೊದೊಂದಿಗೆ ಕಂಪ್ಯೂಟರ್‌ನಲ್ಲಿ ಅಳವಡಿಸಲು ಉದ್ದೇಶಿಸಲಾಗಿದೆ.

ಬೆಂಗಳೂರು ಮತ್ತು ತುಮಕೂರಿನಲ್ಲಿ ನಡೆಯುವ ಪ್ರಾಯೋಗಿಕ ಆಸ್ತಿ ಸಮೀಕ್ಷೆ ಪ್ರಕ್ರಿಯೆಯನ್ನು ಜಿಲ್ಲಾ ಪಂಚಾಯತ್ ಮುಖ್ಯಕಾರ್ಯ ನಿರ್ವಾಹಕ ಅಧಿಕಾರಿಗಳು ಮೇಲ್ವಿಚಾರಣೆ ಮಾಡಲಿದ್ದಾರೆ. ಉಪ ಕಾರ್ಯದರ್ಶಿ ನೋಡಲ್ ಅಧಿಕಾರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.

ಈ ಎಲ್ಲ ಪ್ರಕ್ರಿಯೆ ಪೂರ್ಣಗೊಂಡ ನಂತರ ನಿಯಮಾನುಸಾರ ತೆರಿಗೆ ನಿರ್ಧರಣೆ ಮಾಡಿ, ತೆರಿಗೆ ವಿಧಿಸಬೇಕೆಂದು ಇಲಾಖೆ ಹೊರಡಿಸಿರುವ ಆದೇಶದಲ್ಲಿ ತಿಳಿಸಲಾಗಿದೆ.