ರಿಯಾದ್‌[ಸೆ.30]: ಸಾಮಾಜಿಕ ಕಟ್ಟುಪಾಡುಗಳಿಗೆ ಹೆಸರಾಗಿರುವ ಸೌದಿ ಅರೇಬಿಯಾಕ್ಕೆ ವಿದೇಶಿಯರ ಪ್ರವಾಸಕ್ಕೆ ಅನುಮತಿ ನೀಡಿದ ಬೆನ್ನಲ್ಲೇ ಸಾಮಾಜಿಕ ಸಭ್ಯತೆ ಕಾಪಾಡುವ ಹಿನ್ನೆಲೆ ಬಹಿರಂಗ ಚುಂಬನ ಮತ್ತು ಬಿಗಿಯಾದ ಬಟ್ಟೆಧರಿಸಿದಲ್ಲಿ ದಂಡ ವಿಧಿಸುವುದಾಗಿ ಅಲ್ಲಿನ ಸರ್ಕಾರದ ಎಚ್ಚರಿಕೆ ನೀಡಿದೆ.

ಈಚೆಗಷ್ಟೇ ಸೌದಿ ಸರ್ಕಾರ ವಿದೇಶಿಗರಿಗೆ ಪ್ರವಾಸಿ ವೀಸಾ ನೀಡಲು ಒಪ್ಪಿಗೆ ನೀಡಿತ್ತು. ಸೌದಿಗೆ ಆಗಮಿಸುವ ವಿದೇಶಿಗರು ಸಾಮಾಜಿಕ ಕಟ್ಟಳೆಗಳನ್ನು ಮೀರದಂತೆ ನಿಯಮ ರೂಪಿಸಿದೆ. ಅಲ್ಲದೇ ಸರ್ಕಾರದ ಆಂತರಿಕ ಸಚಿವಾಲಯ 19 ನಡಾವಳಿಗಳನ್ನು ‘ಅಪರಾಧ’ ಎಂದು ಪಟ್ಟಿಮಾಡಿದ್ದು, ಇವುಗಳಿಗೆ ದಂಡದ ಪ್ರಮಾಣವನ್ನು ನಿಗದಿಪಡಿಸಿಲ್ಲ.

ಪುರುಷ ಮತ್ತು ಮಹಿಳೆಯರು ತಮಗಿಷ್ಟವಾದ ಉಡುಪುಗಳನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವಿದೆ. ಆದರೆ, ಅದು ಸಾಮಾಜಿಕ ಸಭ್ಯತೆಗೆ ಧಕ್ಕೆ ತರುವಂತಿರಬಾರದು. ಮಹಿಳೆಯರು ಬಿಗಿಯಾದ ಉಡುಪು ಮತ್ತು ಬಟ್ಟೆಯ ಮೇಲೆ ಅಸಭ್ಯ ಚಿತ್ರ, ಭಾಷೆಯನ್ನು ಹೊಂದಿರಬಾರದು ಎಂದು ಕರಾರು ಹಾಕಿದೆ.

ಆರ್ಥಿಕತೆಗೆ ಚೇತರಿಕೆ ನೀಡುವ ಕ್ರಮವಾಗಿ ಸೌದಿಯ ರಾಜ ಮಹಮದ್‌ ಬಿನ್‌ ಸಲ್ಮಾನ್‌ ಪ್ರವಾಸೋದ್ಯಮಕ್ಕೆ ಆದ್ಯತೆ ನೀಡಿ, ಪ್ರಪಂಚದ 43 ದೇಶಗಳಿಗೆ ಪ್ರವಾಸಿ ವೀಸಾ ನೀಡಲು ಒಪ್ಪಿಗೆ ನೀಡಿದ್ದಾರೆ. ಕಟ್ಟಾಸಂಪ್ರದಾಯಸ್ಥ ರಾಷ್ಟ್ರವಾದ ಸೌದಿಗೆ ಪ್ರವಾಸಿಗರು ಭೇಟಿ ನೀಡಿದಾಗ ಸಾಮಾಜಿಕ ಸಭ್ಯತೆ ಕಾಪಾಡುವ ನಿಟ್ಟಿನಲ್ಲಿ ಪ್ರಚೋದನಕಾರಿ ವಸ್ತ್ರ ಧರಿಸುವುದಕ್ಕೆ ನಿಷೇಧ ಹೇರಿದೆ.