ನಗರದಲ್ಲಿ ಫುಟ್‌ಬಾಲ್ ಕ್ರೀಡೆಗೆ ಪ್ರೋತ್ಸಾಹ ನೀಡುವುದು ಹಾಗೂ ಬೆಂಗಳೂರು ನಗರವನ್ನು ಪ್ರವಾಸಿತಾಣವಾಗಿ ವಿಶ್ವಾದ್ಯಂತ ಪರಿಚಯಿಸಲು ಹೊಸ ಒಡಂಬಡಿಕೆ ಮಾಡಿಕೊಳ್ಳಲಾಗಿದೆ ಎಂದು ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಹಾಗೂ ಪ್ರವಾಸೋದ್ಯಮ ಸಚಿವ ಪ್ರಿಯಾಂಕ್ ಖರ್ಗೆ ಪ್ರಕಟಿಸಿದರು.
ಬೆಂಗಳೂರು (ಜ.05): ನಗರದಲ್ಲಿ ಫುಟ್ಬಾಲ್ ಕ್ರೀಡೆಗೆ ಪ್ರೋತ್ಸಾಹ ನೀಡುವುದು ಹಾಗೂ ಬೆಂಗಳೂರು ನಗರವನ್ನು ಪ್ರವಾಸಿತಾಣವಾಗಿ ವಿಶ್ವಾದ್ಯಂತ ಪರಿಚಯಿಸಲು ಹೊಸ ಒಡಂಬಡಿಕೆ ಮಾಡಿಕೊಳ್ಳಲಾಗಿದೆ ಎಂದು ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಹಾಗೂ ಪ್ರವಾಸೋದ್ಯಮ ಸಚಿವ ಪ್ರಿಯಾಂಕ್ ಖರ್ಗೆ ಪ್ರಕಟಿಸಿದರು.
ರಾಜ್ಯ ಸರ್ಕಾರದ ಪ್ರವಾಸೋದ್ಯಮ ಇಲಾಖೆಯಿಂದ ಬೆಂಗಳೂರು ನಗರದ ಜೆಎಸ್ಡಬ್ಲ್ಯು ಹಾಗೂ ಬೆಂಗಳೂರು ಪುಟ್ಬಾಲ್ ಕ್ಲಬ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಗಳ ಜತೆ ಉತ್ತೇಜನ ಚಟುವಟಿಕೆಗಳನ್ನು ಕೈಗೊಳ್ಳಲು ಗುರುವಾರ ಪರಸ್ಪರ ಒಡಂಬಡಿಕೆ ಮಾಡಿಕೊಳ್ಳಲಾಗಿದೆ ಎಂದ ಸುದ್ದಿಗಾರರಿಗೆ ತಿಳಿಸಿದರು.
ಬೆಂಗಳೂರನ್ನು ಕ್ರೀಡಾಭಿಮಾನಿಗಳ ಹಾಗೂ ಯುವ ಜನರ ನೆಚ್ಚಿನ ಕ್ರೀಡಾ ತಾಣವನ್ನಾಗಿಸುವ ಸಂಕಲ್ಪದೊಂದಿಗೆ ಪ್ರವಾಸೋದ್ಯಮ ಇಲಾಖೆ ಹಾಗೂ ಬೆಂಗಳೂರು ಫುಟ್ಬಾಲ್ ಕ್ಲಬ್ ಒಪ್ಪಂದ ಮಾಡಿಕೊಂಡಿವೆ. ವಿಶ್ವ ಪುಟ್ಬಾಲ್ ನಕ್ಷೆಯಲ್ಲಿ ಭಾರತಕ್ಕೆ ಸ್ಥಾನ ಕಲ್ಪಿಸುವುದು ಪುಟ್ಬಾಲ್ ಕ್ಲಬ್ನ ಮುಖ್ಯ ಧ್ಯೇಯವಾಗಿದೆ ಎಂದು ಹೇಳಿದರು.
ನಿಜವಾದ ಅರ್ಥದಲ್ಲಿ ಕಾಸ್ಮೋಪಾಲಿಟನ್ ನಗರವಾಗಿರುವ ಬೆಂಗಳೂರಿನ ಆಹ್ಲಾದಕರ ವಾತಾವರಣ ಕ್ರೀಡೆಗೆ ಪೂರಕವಾಗಿದೆ. ಫುಟ್ಬಾಲ್ ಸಂಸ್ಕೃತಿ ಹಾಗೂ ಅಭಿಮಾನಿಗಳನ್ನು ಹೊಂದಿರುವ ಯುರೋಪಿನ ನಗರಗಳಿಗೆ ಭಾರತದಲ್ಲಿ ಸಾಟಿಯಾಗಿ ನಿಲ್ಲಬಲ್ಲ ಏಕೈಕ ನಗರ ಬೆಂಗಳೂರು ಎಂದ ಪ್ರಿಯಾಂಕ್ ಖರ್ಗೆ, ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಪ್ರವಾಸೋದ್ಯಮ ಇಲಾಖೆ ಬೆಂಗಳೂರನ್ನು ಕ್ರೀಡಾತಾಣವನ್ನಾಗಿ ರೂಪಿಸಲು ಮುಂದಾಗಿದೆ ಎಂದರು.
ಈ ಯೋಜನೆಯ ಪ್ರಚಾರಕ್ಕಾಗಿ ಭಾರತೀಯ ಹಾಗೂ ವಿದೇಶಿ ಆಟಗಾರರನ್ನು ಹೊಂದಿರುವ ದೇಶೀಯ ಪುಟ್ಬಾಲ್ ಕ್ಲಬ್ ಕೈ ಜೋಡಿಸಲಿವೆ. ಇದರಿಂದ ಕರ್ನಾಟಕ, ಅದರಲ್ಲೂ ವಿಶೇಷವಾಗಿ ಬೆಂಗಳೂರಿಗೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಲಿದೆ. ನಗರದ ಬ್ರಾಂಡ್ ಮೌಲ್ಯ ಹೆಚ್ಚಿಸುವಲ್ಲಿ ಬೆಂಗಳೂರು ಪುಟ್ಬಾಲ್ ಕ್ಲಬ್ ಸಹಯೋಗದೊಂದಿಗೆ ಪ್ರವಾಸೋದ್ಯಮ ಇಲಾಖೆ ನಡುವೆ ಏರ್ಪಟ್ಟಿರುವ ಈ ಒಪ್ಪಂದ ನೆರವಾಗಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ ನವಿನ್ರಾಜ್ಸಿಂಗ್, ನಿರ್ದೇಶಕಿ ವಿ. ಮಂಜುಳಾ ಹಾಗೂ ಜೆಎಸ್ಡಬ್ಲೂ ಬೆಂಗಳೂರು ವಿಭಾಗದ ಮುಖ್ಯಸ್ಥ ಮುಸ್ತಫಾ ಘೋಸ್ ಹಾಜರಿದ್ದರು.
![]()
