ಲಖನೌ (ಸೆ. 04): ಉತ್ತರ ಪ್ರದೇಶ ಕಾಂಗ್ರೆಸ್‌ ಸಾರಥ್ಯವನ್ನು ಪ್ರಿಯಾಂಕಾ ಗಾಂಧಿ ವಹಿಸಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ. ಕಳೆದ ಮೂರು ತಿಂಗಳಿನಿಂದ ಪ್ರಿಯಾಂಕಾಗೆ ಪಟ್ಟಕಟ್ಟಲು ತಯಾರಿ ನಡೆಯುತ್ತಿದ್ದು, ಸದ್ಯ ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವ ಪುನರ್‌ಸಂಘಟನೆಯ ಭಾಗವಾಗಿ ಹಾಗೂ 2022 ರ ವಿಧಾನಸಭಾ ಚುನಾವಣೆಯ ದೃಷ್ಟಿಯಿಂದ ಸೋನಿಯಾ ಪುತ್ರಿಯನ್ನು ಅಧ್ಯಕ್ಷೆಯನ್ನಾಗಿ ಮಾಡುವುದು ಖಚಿತ ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ.

ಸದ್ಯ ಪ್ರಿಯಾಂಕಾ ಪೂರ್ವ ಉತ್ತರ ಪ್ರದೇಶದ ಕಾರ್ಯದರ್ಶಿಯಾಗಿದ್ದು, ಪಕ್ಷದ ನಾಯಕರು ಹಾಗೂ ಕಾರ್ಯಕರ್ಯರೊಂದಿಗೆ ಉತ್ತಮ ಸಂಬಂಧವಿಟ್ಟುಕೊಂಡಿದ್ದಾರೆ. ಕಾರ್ಯಕರ್ತರು ಹಾಗೂ ಜನರೊಂದಿಗೆ ಪ್ರಿಯಾಂಕಾ ಸಾಮಾನ್ಯರಂತೆ ಬೆರೆಯುತ್ತಿದ್ದು, ಪಕ್ಷ ಹಿತದೃಷ್ಠಿಯಿಂದ ಅವರೇ ಅಧ್ಯಕ್ಷರಾಗುವುದು ಸೂಕ್ತ ಎನ್ನುವ ಮಾತುಗಳು ಪಕ್ಷದ ಪಡಸಾಲೆಯಿಂದ ಕೇಳಿ ಬರುತ್ತಿವೆ.

ಅಲ್ಲದೇ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ಗೂ ಸರಿಯಾದ ತಿರುಗೇಟು ನೀಡುತ್ತಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಸಕ್ರೀಯವಾಗಿ ಪಕ್ಷಕ್ಕೆ ದುಡಿದಿದ್ದ ಪ್ರಿಯಾಂಕಾ ದಿನನಿತ್ಯ 11 ಗಂಟೆ ಪ್ರಚಾರ ನಡೆಸಿದ್ದರು. ಇದರ ಹೊರತಾಗಿಯೂ ರಾಯ್‌ಬರೇಲಿಯಿಂದ ಸೋನಿಯಾಗಾಂಧಿ ಮಾತ್ರ ಗೆದ್ದಿದ್ದರು. ಕೈ ಭದ್ರಕೋಟೆ ಅಮೇಠಿಯಲ್ಲಿ ರಾಹುಲ್‌ ಗಾಂಧಿ ಸೋಲನುಭವಿಸಿದ್ದರು.