Asianet Suvarna News Asianet Suvarna News

ರಾಜೀನಾಮೆ ನೀಡಲು ಮುಂದಾದ ಮತ್ತೋರ್ವ ಕಾಂಗ್ರೆಸ್ ಸಚಿವ ?

ಕಾಂಗ್ರೆಸ್ ಮುಖಂಡ ಹಾಗೂ ಈ ಸಚಿವ ಬೇಸರಗೊಂಡು ರಾಜೀನಾಮೆಗೆ ಮುಂದಾಗಿದ್ದರು ಎನ್ನುವ ವಿಚಾರ ಇದೀಗ ತಡವಾಗಿ ಬೆಳಕಿಗೆ ಬಂದಿದ್ದು, ಬಳಿಕ ಅವರನ್ನು ಸಮಾಧಾನಗೊಳಿಸಲಾಗಿದೆ ಎನ್ನಲಾಗಿದೆ. 

Priyank Kharge Unhappy Over Government
Author
Bengaluru, First Published Sep 22, 2018, 7:50 AM IST

ಬೆಂಗಳೂರು :  ನ್ಯಾಯಾಲಯದ ನೆಪವೊಡ್ಡಿ ಬಡ್ತಿ ಮೀಸಲಾತಿ ಕಾಯ್ದೆ ಅನುಷ್ಠಾನಕ್ಕೆ ಮೀನಮೇಷ ಎಣಿಸುತ್ತಿರುವ ಸರ್ಕಾರದ ಧೋರಣೆಗೆ ಬೇಸತ್ತು ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ ಖರ್ಗೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಸಚಿವ ಪ್ರಿಯಾಂಕ ಖರ್ಗೆ ಅವರು ರಾಜೀನಾಮೆಗೆ ಮುಂದಾದ ಘಟನೆ ನಡೆದಿದ್ದು, ಸಂಪುಟದ ಇತರ ಸದಸ್ಯರು ಅವರನ್ನು ಸಮಾಧಾನಗೊಳಿಸಿದ್ದಾರೆ ಎನ್ನಲಾಗಿದೆ. ಅಲ್ಲದೆ, ಅವರ ವಾದಕ್ಕೆ ಮಣಿದ ಸಂಪುಟ ಸಭೆಯು ಬಡ್ತಿ ಮೀಸಲಾತಿ ಕಾಯ್ದೆ ಜಾರಿ ಕುರಿತು ಶೀಘ್ರವೇ ಸಭೆ ನಡೆಸಿ ಅಂತಿಮ ತೀರ್ಮಾನ ತೆಗೆದುಕೊಳ್ಳುವ ಅಧಿಕಾರವನ್ನು ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಅವರಿಗೆ ನೀಡಿತು ಎಂದು ಮೂಲಗಳು ತಿಳಿಸಿವೆ.

ಸಚಿವ ಸಂಪುಟ ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಪ್ರಿಯಾಂಕ ಖರ್ಗೆ, ಬಡ್ತಿ ಮೀಸಲಾತಿ ಕಾಯ್ದೆಗೆ ರಾಷ್ಟ್ರಪತಿಗಳ ಅಂಕಿತ ದೊರಕಿದೆ. ಸುಪ್ರೀಂಕೋರ್ಟ್‌ ಸೇರಿದಂತೆ ಯಾವ ನ್ಯಾಯಾಲಯವೂ ಈ ಕಾಯ್ದೆಯನ್ನು ಜಾರಿಗೊಳಿಸಬಾರದು ಎಂದು ಲಿಖಿತ ಆದೇಶ ನೀಡಿಲ್ಲ. ಹೀಗಿದ್ದರೂ, ವಿಳಂಬ ಮಾಡುತ್ತಿರುವುದು ಏಕೆ ಎಂದು ಪ್ರಶ್ನಿಸಿದರು ಎನ್ನಲಾಗಿದೆ.

ಈ ಕಾಯ್ದೆ ದಲಿತ ಅಧಿಕಾರಿಗಳ ಆಶೋತ್ತರವಾಗಿದೆ. ಆದರೆ, ಇದಕ್ಕೆ ನ್ಯಾಯಾಲಯದ ಆಕ್ಷೇಪವಿದೆ ಎಂದು ಬಿಂಬಿಸಲಾಗುತ್ತಿದೆ. ವಾಸ್ತವವಾಗಿ ಯಾವ ನ್ಯಾಯಾಲಯವೂ ಲಿಖಿತವಾಗಿ ಕಾಯ್ದೆ ಜಾರಿಗೆ ಅಡ್ಡಿಯಾಗುವಂತಹ ಯಾವ ಆದೇಶವನ್ನೂ ನೀಡಿಲ್ಲ. ಬಡ್ತಿ ಮೀಸಲಾತಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ನಡೆದಿದೆ. ಅದಕ್ಕೆ ರಾಜ್ಯ ಸರ್ಕಾರ ಮಧ್ಯಂತರ ಅರ್ಜಿಯನ್ನು ಹಾಕಿಕೊಂಡು, ಬಡ್ತಿ ಮೀಸಲಾತಿ ಬಗ್ಗೆ ನ್ಯಾಯಾಲಯ ತೆಗೆದುಕೊಳ್ಳುವ ಅಂತಿಮ ತೀರ್ಮಾನಕ್ಕೆ ಬದ್ಧವಾಗಿರುವುದಾಗಿ ಹೇಳಿದೆ.

ಅಂತಿಮ ತೀರ್ಪು ಬರುವವರೆಗೂ ಈಗಾಗಲೇ ರಾಷ್ಟ್ರಪತಿಗಳಿಂದ ಅಂಕಿತ ಪಡೆದಿರುವ ಬಡ್ತಿ ಮೀಸಲಾತಿ ಕಾಯ್ದೆ ಜಾರಿಗೆ ಅವಕಾಶ ನೀಡಬೇಕು ಎಂದು ಕೂಡ ಕೋರಿದೆ. ಈ ಅರ್ಜಿ ವಿಚಾರಣೆ ವೇಳೆ ನ್ಯಾಯಾಲಯವು ಮುಂದಿನ ವಿಚಾರಣೆವರೆಗೆ ಕಾಯ್ದು ನೋಡಬಹುದು ಎಂದು ಸಲಹಾ ರೂಪದಲ್ಲಿ ಹೇಳಿದೆಯೇ ಹೊರತು ಲಿಖಿತ ಆದೇಶ ನೀಡಿಲ್ಲ. ನ್ಯಾಯಾಲಯದ ಈ ವಿಚಾರಣಾ ಪ್ರಕ್ರಿಯೆಯು ಕಾಯ್ದೆಯನ್ನು ಜಾರಿಗೊಳಿಸುವುದನ್ನು ಪ್ರತಿಬಂಧಿಸುತ್ತಿಲ್ಲ.

ಹೀಗಿದ್ದಾಗ್ಯೂ, ರಾಜ್ಯ ಸರ್ಕಾರ ಮಾತ್ರ ನ್ಯಾಯಾಲಯದ ಈ ಅಭಿಪ್ರಾಯವನ್ನೇ ನೆಪ ಮಾಡಿಕೊಂಡು ಪರಿಶಿಷ್ಟಜಾತಿ ಹಾಗೂ ಪರಿಶಿಷ್ಟಪಂಗಡದ ಅಧಿಕಾರಿಗಳಿಗೆ ನೆರವಾಗುವ ಬಡ್ತಿ ಮೀಸಲಾತಿ ಕಾಯ್ದೆಯನ್ನು ಜಾರಿಗೊಳಿಸಲು ಹಿಂಜರಿದಿದೆ. ಇದು ನಾನು ಪ್ರತಿನಿಧಿಸುವ ಸಮುದಾಯದ ಜನರಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು ಎಂದು ಮೂಲಗಳು ಹೇಳಿವೆ.

ಈ ಸಂದರ್ಭದಲ್ಲಿ ಖರ್ಗೆ ಅವರಿಗೆ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಅವರು ಬೆಂಬಲ ನೀಡಿದ್ದು, ಬಡ್ತಿ ಮೀಸಲಾತಿ ಕಾಯ್ದೆ ಜಾರಿಗೆ ಯಾವ ಅಡ್ಡಿಯೂ ಇಲ್ಲ. ಇದಕ್ಕೆ ಬೇಕಿರುವುದು ಸರ್ಕಾರದ ಇಚ್ಛಾಶಕ್ತಿ ಎಂದರು ಎನ್ನಲಾಗಿದೆ.

ಈ ಹಂತದಲ್ಲಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು, ಕಾನೂನು ತಜ್ಞರು ಈ ವಿಚಾರದಲ್ಲಿ ನ್ಯಾಯಾಲಯದ ವಿಚಾರಣೆ ಅಡ್ಡಿಯಾಗುತ್ತದೆ ಎಂದು ಹೇಳಿದ್ದರಿಂದ ಕಾಯ್ದೆಯನ್ನು ಜಾರಿಗೊಳಿಸಲಾಗಿಲ್ಲ ಎಂದಾಗ ಕ್ರುದ್ಧರಾದ ಪ್ರಿಯಾಂಕ ಖರ್ಗೆ, ಸಾಮಾಜಿಕ ನ್ಯಾಯ ದೊರಕಿಸಿಕೊಡಬೇಕಾದದ್ದು ಕಾಂಗ್ರೆಸ್‌ ಪಕ್ಷದ ಸಿದ್ಧಾಂತ. ಪಕ್ಷದ ಈ ಸಿದ್ಧಾಂತ ನಂಬಿಯೇ ನನ್ನ ಸಮುದಾಯ ಸಮ್ಮಿಶ್ರ ಸರ್ಕಾರದ ಪರವಾಗಿದೆ. ನಮ್ಮದೇ ಸರ್ಕಾರವಿದೆ ಎಂಬ ಕಾರಣಕ್ಕೆ ಸಮುದಾಯ ಇದುವರೆಗೂ ಯಾವ ಹೋರಾಟ, ಪ್ರತಿಭಟನೆಯನ್ನು ನಡೆಸಿಲ್ಲ. ಸಮುದಾಯವನ್ನು ಪ್ರತಿನಿಧಿಸುವವರೇ ಸಮಾಜ ಕಲ್ಯಾಣ ಸಚಿವರಾಗಿದ್ದಾರೆ. 

ಮತ್ತು ಉಪ ಮುಖ್ಯಮಂತ್ರಿಯಾಗಿದ್ದಾರೆ. ಸರ್ಕಾರ ಕೂಡ ಸಮುದಾಯದ ಪರವಾಗಿದೆ ಎಂದೇ ಸಮಾಜ ಭಾವಿಸುತ್ತಿದೆ. ಹೀಗಿದ್ದೂ, ಸರ್ಕಾರ ಮಾತ್ರ ಸಮುದಾಯದ ಆಶಯವಾದ ಬಡ್ತಿ ಮೀಸಲಾತಿ ಕಾಯ್ದೆ ಜಾರಿಗೆ ಈಗಲೂ ಹಿಂಜರಿದರೆ ನಾನು ಈ ಸಚಿವ ಸ್ಥಾನದಲ್ಲಿ ಮುಂದುವರೆಯುವುದರಲ್ಲಿ ಅರ್ಥವಿಲ್ಲ. ನನ್ನ ಜನರ ಕೆಲಸ ಮಾಡಲು ಸಾಧ್ಯವಾಗದಿದ್ದರೆ ಈ ಹುದ್ದೆಯ ಅಗತ್ಯವೂ ನನಗೆ ಇಲ್ಲ ಎಂದು ರಾಜೀನಾಮೆಗೆ ಮುಂದಾದರು ಎನ್ನಲಾಗಿದೆ.

ಈ ಸಂದರ್ಭದಲ್ಲಿ ಪರಮೇಶ್ವರ್‌ ಸೇರಿದಂತೆ ಸಂಪುಟದ ಇತರ ಸದಸ್ಯರು ಪ್ರಿಯಾಂಕ ಖರ್ಗೆ ಅವರನ್ನು ಸಮಾಧಾನಪಡಿಸಿದ್ದಾರೆ. ಅನಂತರ ಸಭೆಯು ಬಡ್ತಿ ಮೀಸಲಾತಿ ಜಾರಿ ಬಗ್ಗೆ ಶೀಘ್ರವೇ ಸಭೆ ನಡೆಸಿ ಕಾಯ್ದೆ ಜಾರಿಗೆ ಕೈಗೊಳ್ಳಬೇಕಾದ ಕ್ರಮಗಳನ್ನು ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳುವ ಹೊಣೆಯನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಉಪ ಮುಖ್ಯಮಂತ್ರಿ ಪರಮೇಶ್ವರ್‌ ಅವರಿಗೆ ನೀಡಿತು ಎಂದು ಮೂಲಗಳು ತಿಳಿಸಿವೆ.

Follow Us:
Download App:
  • android
  • ios