ಬೆಂಗಳೂರು[ಸೆ.21]: ಫೇಸ್‌ಬುಕ್‌ನಲ್ಲಿ ನಕಲಿ ಖಾತೆ ತೆರೆದು ತನ್ನ ಸ್ನೇಹಿತೆಗೆ ಅಶ್ಲೀಲ ಫೋಟೋಗಳನ್ನುಕಳುಹಿಸಿ ಕಿರುಕುಳ ನೀಡುತ್ತಿದ್ದ ಆರೋಪದ ಮೇರೆಗೆ ಖಾಸಗಿ ಕಂಪನಿ ಉದ್ಯೋಗಿಯೊಬ್ಬನನ್ನು ಸೈಬರ್‌ ಕ್ರೈಂ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಹೆಬ್ಬಗೋಡಿಯ ತಿರುಪಾಳ್ಯದ ನಿವಾಸಿ ಎಚ್‌.ಎಸ್‌.ಪ್ರಶಾಂತ್‌ ಬಂಧಿತ. ಖಾಸಗಿ ಕಂಪನಿ ಉದ್ಯೋಗಿ ಪ್ರಶಾಂತ್‌, ಫೇಸ್‌ಬುಕ್‌ನಲ್ಲಿ ‘ಕಲ್ಪನ ರುಕ್ಕು’ ಹೆಸರಿನಲ್ಲಿ ನಕಲಿ ಖಾತೆ ತೆರೆದಿದ್ದ. ಬಳಿಕ ಆ ಖಾತೆ ಮೂಲಕ ಎಸ್‌ಎಸ್‌ಎಲ್‌ಸಿಯಲ್ಲಿ ಸಹಪಾಠಿ ಆಗಿದ್ದ ಸಂತ್ರಸ್ತೆಗೆ ಫ್ರೆಂಡ್‌ ರಿಕ್ವೆಸ್ಟ್‌ ಕಳುಹಿಸಿದ್ದ. ಆನಂತರ ಚಾಟಿಂಗ್‌ ಮಾಡುತ್ತಾ ನಿರಂತರವಾಗಿ ಅಶ್ಲೀಲ ಸಂದೇಶ, ಫೋಟೋಗಳನ್ನು ರವಾನಿಸಿ ಲೈಂಗಿಕ ಇಚ್ಛೆಗೆ ಸಹಕರಿಸುವಂತೆ ಒತ್ತಾಯಿಸುತ್ತಿದ್ದ. 

ಫೇಸ್‌ಬುಕ್‌ ಮೆಸೆಂಜರ್‌ನಲ್ಲಿ ಕಾಲ್‌ ಮಾಡಿ ಕಿರುಕುಳ ನೀಡುತ್ತಿದ್ದ. ಫೇಸ್‌ಬುಕ್‌ ನಕಲಿ ಖಾತೆಯ ಐಪಿ ವಿಳಾಸದ ಬೆನ್ನತ್ತಿದ್ದಾಗ ಆರೋಪಿ ಸಿಕ್ಕಿಬಿದ್ದ ಎಂದು ಅಧಿಕಾರಿಗಳು ವಿವರಿಸಿದ್ದಾರೆ.