Asianet Suvarna News Asianet Suvarna News

ಕರ್ನಾಟಕ ಸರ್ಕಾರದ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಗರಂ

ಕರ್ನಾಟಕ ಸರ್ಕಾರದ ವಿರುದ್ಧ ಮತ್ತೊಮ್ಮೆ ಪ್ರಧಾನಿ ನರೇಂದ್ರ ಮೋದಿ ಗರಂ ಆಗಿದ್ದಾರೆ. ಕರ್ನಾಟಕದಲ್ಲಿ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದು 6 ತಿಂಗಳು ಉರುಳಿದರೂ ಸರಿಯಾಗಿ 1000 ರೈತರ ಸಾಲವೂ ಮನ್ನಾ ಆಗಿಲ್ಲ ಎಂದು ಕುಟುಕಿದ್ದಾರೆ. 

Prime Minister Narendra Modi Slams Again Karnataka Govt About Farm Loan Waiver Issue
Author
Bengaluru, First Published Dec 17, 2018, 7:17 AM IST

ರಾಯ್‌ ಬರೇಲಿ: ಪಂಚರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಪ್ರಚಾರ ಸಂದರ್ಭದಲ್ಲಿ ಕರ್ನಾಟಕದ ಸಾಲಮನ್ನಾ ಬಗ್ಗೆ ವಾಗ್ದಾಳಿ ನಡಸಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇದೀಗ ಮತ್ತೊಮ್ಮೆ ವಾಗ್ದಾಳಿ ನಡೆಸಿದ್ದಾರೆ. ಕರ್ನಾಟಕದಲ್ಲಿ ಜೆಡಿಎಸ್- ಕಾಂಗ್ರೆಸ್ ಸರ್ಕಾರದ ಸಾಲ ಮನ್ನಾ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೊಮ್ಮೆ ವಾಗ್ದಾಳಿ ನಡೆಸಿದ್ದಾರೆ. 

ಕರ್ನಾಟಕದಲ್ಲಿ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದು 6 ತಿಂಗಳು ಉರುಳಿದರೂ ಸರಿಯಾಗಿ 1000 ರೈತರ ಸಾಲವೂ ಮನ್ನಾ ಆಗಿಲ್ಲ ಎಂದು ಕುಟುಕಿದ್ದಾರೆ. ಕಾಂಗ್ರೆಸ್ಸಿನ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಸ್ವಕ್ಷೇತ್ರ ಉತ್ತರಪ್ರದೇಶದ ರಾಯ್‌ಬರೇಲಿಗೆ ಪ್ರಧಾನಿಯಾದ ಬಳಿಕ ಇದೇ ಮೊದಲ ಬಾರಿಗೆ ಭೇಟಿ ನೀಡಿ, ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ಸಾಲ ಮನ್ನಾ ಕುರಿತು ಕಾಂಗ್ರೆಸ್ ದೊಡ್ಡ ಮಾತುಗಳನ್ನೆಲ್ಲಾ ಆಡುತ್ತಿದೆ.  ಆದರೆ ಅವೆಲ್ಲಾ ಶುದ್ಧ ಸುಳ್ಳು. ಅಧಿಕಾರಕ್ಕೆ ಬಂದರೆ 10 ದಿನದಲ್ಲಿ ಸಾಲ ಮನ್ನಾ ಮಾಡಿಬಿಡುತ್ತೇವೆ ಎಂದು ಕರ್ನಾಟಕದಲ್ಲಿ ಹೇಳಿದ್ದರು. 

ಆದರೆ ಆರು ತಿಂಗಳಾದ ಬಳಿಕ ವಾಸ್ತವವೇ ಬೇರೆ ಇದೆ. ಕಳೆದ ಆರು ತಿಂಗಳಲ್ಲಿ ಕರ್ನಾಟಕದಲ್ಲಿ ಸರಿಯಾಗಿ 1000 ರೈತರ ಸಾಲವೂ ಮನ್ನಾ ಆಗಿಲ್ಲ ಎಂದು ಪತ್ರಿಕಾ ವರದಿಗಳೇ ಹೇಳುತ್ತಿವೆ. ಆ ರಾಜ್ಯದಲ್ಲಿ ಸಾಲಗಾರ ರೈತರಿಗೆ ಬಂಧನ ವಾರಂಟ್ ಜಾರಿ ಮಾಡಲಾಗಿದೆ. ದೇಶದ ರೈತ ಸಮುದಾಯದಿಂದ ಬರುತ್ತಿರುವ ಸತ್ಯವನ್ನು ತಡೆಯಲು, ಮುಚ್ಚಿಡಲು ತನ್ನ ಎಲ್ಲ ಶಕ್ತಿಯನ್ನೂ ಕಾಂಗ್ರೆಸ್ ಪ್ರಯೋಗಿಸುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಛತ್ತೀಸ್‌ಗಢ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಅಧಿಕಾರ ಲಭಿಸಿದ್ದರ ಹಿಂದೆ ಆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ನೀಡಿದ್ದ ಸಾಲ ಮನ್ನಾ ಭರವಸೆಯೇ ಪ್ರಧಾನ ಕಾರಣ ಎಂಬ ವಿಶ್ಲೇಷಣೆಗಳು ಬಂದಿದ್ದವು. ಆ ರಾಜ್ಯಗಳ ಚುನಾವಣೆ ಫಲಿತಾಂಶ ಪ್ರಕಟಗೊಂಡ ಬಳಿಕ ಮೋದಿ ಅವರು ಕಾಂಗ್ರೆಸ್ಸಿನ ಸಾಲ ಮನ್ನಾ ಭರವಸೆ ಬಗ್ಗೆ ಮೊದಲ ಬಾರಿಗೆ ವಾಗ್ದಾಳಿ ನಡೆಸಿದ್ದಾರೆ. ಪಂಚರಾಜ್ಯಗಳ ವಿಧಾನಸಭೆ ಚುನಾವಣೆಗಳ ಸಂದರ್ಭದಲ್ಲೂ ಕರ್ನಾಟಕದಲ್ಲಿ ಜಾರಿಯಾಗುತ್ತಿರುವ ಸಾಲ ಮನ್ನಾ ಬಗ್ಗೆ ಮೋದಿ ಹರಿಹಾಯ್ದಿದ್ದರು. 

‘ಕೃಷಿ ಸಮಸ್ಯೆಗೆ ಕಾಂಗ್ರೆಸ್ಸೇ ಕಾರಣ’: ಇದೇ ವೇಳೆ, ದೇಶದ ಕೃಷಿ ಕ್ಷೇತ್ರದಲ್ಲಿರುವ ಸಮಸ್ಯೆಗಳಿಗೆ ಕಾಂಗ್ರೆಸ್ಸೇ ಕಾರಣ. 10 ವರ್ಷಗಳ ಕಾಲ ಅಧಿಕಾರದಲ್ಲಿದ್ದರೂ ಸ್ವಾಮಿನಾಥನ್ ಸಮಿತಿಯ ವರದಿಯನ್ನು ಕಾಂಗ್ರೆಸ್ ಜಾರಿಗೆ ತಂದಿರಲಿಲ್ಲ. ಅವರಿಗೆ ಯೋಧರ ಬಗ್ಗೆಯೂ ಚಿಂತೆ ಇಲ್ಲ, ರೈತರ ಬಗ್ಗೆಯೂ ಕಳಕಳಿ ಇಲ್ಲ ಎಂದು ಹರಿಹಾಯ್ದರು.  ಎನ್‌ಡಿಎ ಸರ್ಕಾರ ರೈತರ ಆದಾಯವನ್ನು ಹೆಚ್ಚಳ ಮಾಡಲು ಕನಿಷ್ಠ ಬೆಂಬಲ ಬೆಲೆಗೆ ಸಂಬಂಧಿಸಿದ ಸ್ವಾಮಿನಾಥನ್ ಸಮಿತಿಯ ವರದಿಯನ್ನು ಜಾರಿಗೆ ತಂದಿತು. ತನ್ಮೂಲಕ ಮುಂಗಾರು ಹಾಗೂ ಹಿಂಗಾರು ಹಂಗಾಮಿನ 22 ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಸಿಗುವಂತೆ ನೋಡಿಕೊಂಡಿತು. 

ಈ ನಿರ್ಧಾರದಿಂದ ದೇಶದ ರೈತರಿಗೆ 60 ಸಾವಿರ ಕೋಟಿ ರು. ಸಿಗುವಂತಾಯಿತು. ಆದರೆ ಕಾಂಗ್ರೆಸ್ಸಿನ ವಾತಾವರಣ ಅದನ್ನು ಎಂದಿಗೂ ಹೇಳುವುದಿಲ್ಲ ಎಂದರು.

Follow Us:
Download App:
  • android
  • ios