Asianet Suvarna News Asianet Suvarna News

ತಿಂಗಳೊಳಗೆ ಬೇಡಿಕೆ ಈಡೇರಿಸದಿದ್ದರೆ ಶಿಕ್ಷಕರಿಂದ ವಿಧಾನಸೌಧ ಮುತ್ತಿಗೆ

ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಪ್ರತ್ಯೇಕ ವೇತನ ಶ್ರೇಣಿ ನಿಗದಿಗೆ ಆಗ್ರಹ | 1 ರಿಂದ 5 ನೇ ತರಗತಿವರೆಗಿನ ಬೋಧನೆ ಮಿತಿಗೆ ವಿರೋಧ | ಬೇಡಿಕೆ ಈಡೇರಿಸಲು ತಿಂಗಳ ಗಡುವು ನೀಡಿ ಆಕ್ರೋಶ | ಶಿಕ್ಷಕರ ದಿನಾಚರಣೆಯಂದೇ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ನಿರ್ಧಾರ

Primary school teachers protest for better salary, transfer
Author
Bengaluru, First Published Jul 10, 2019, 11:17 AM IST
  • Facebook
  • Twitter
  • Whatsapp

 ಬೆಂಗಳೂರು (ಜು. 10): ತಮ್ಮ ಬೇಡಿಕೆಗಳನ್ನು ಎರಡು ತಿಂಗಳೊಳಗೆ ಈಡೇರಿಸದಿದ್ದರೆ ಶಿಕ್ಷಕರ ದಿನಾಚರಣೆ ದಿನದಂದು (ಸೆ.5) ವಿಧಾನಸೌಧಕ್ಕೆ ಮುತ್ತಿಗೆ ಹಾಕುವುದಾಗಿ ಶಿಕ್ಷಕರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಜಿಲ್ಲಾಧಿಕಾರಿ ಕಚೇರಿಗಳು ಹಾಗೂ ಶಿಕ್ಷಣ ಇಲಾಖೆ ಜಿಲ್ಲಾ ಉಪ ನಿರ್ದೇಶಕರ ಕಚೇರಿ ಮುಂಭಾಗ ಶಿಕ್ಷಕರು ಪ್ರತಿಭಟನೆ ನಡೆಸಿದರು. ಪ್ರತಿಭಟನೆ ನಂತರ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್‌ ಅವರಿಗೆ ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿದ ಅವರು ಸಮಸ್ಯೆ ಬಗೆಹರಿಸಲು ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡುವುದಾಗಿ ಭರವಸೆ ನೀಡಿದರು.

ಹೊಸಪೇಟೆ ಮತ್ತು ಧಾರವಾಡ ಹೊರತುಪಡಿಸಿ ರಾಜ್ಯದ ಸುಮಾರು 45 ಸಾವಿರಕ್ಕೂ ಹೆಚ್ಚಿನ ಶಾಲೆಗಳ ಶಿಕ್ಷಕರು ಪ್ರತಿಭಟನೆ ನಡೆಸಿದರು. ಇದರಿಂದ ಪ್ರಾಥಮಿಕ ಶಾಲೆಗಳಲ್ಲಿ ಮಂಗಳವಾರ ಯಾವುದೇ ರೀತಿಯಲ್ಲಿ ಪಾಠ ಪ್ರವಚನಗಳು ನಡೆಯಲಿಲ್ಲ ಎಂದು ತಿಳಿದು ಬಂದಿದೆ.

ನಗರದ ಮೌರ್ಯ ವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಸಂಘದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಿ, ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಪ್ರತ್ಯೇಕ ವೇತನ ಶ್ರೇಣಿ ನಿಗದಿ ಮಾಡಬೇಕು ಹಾಗೂ 2014ಕ್ಕಿಂತ ಮೊದಲು ನೇಮಕವಾದ ಪ್ರಾಥಮಿಕ ಶಾಲಾ ಶಿಕ್ಷಕರನ್ನು 1ರಿಂದ 5ನೇ ತರಗತಿಗೆ ಬೋಧನೆಗೆ ಸೀಮಿತಗೊಳಿಸಿರುವ ಆದೇಶ ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.

ಪ್ರಾಥಮಿಕ ಶಾಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪದವೀಧರ ಶಿಕ್ಷಕರಿಗೆ ಬಡ್ತಿ ನೀಡದಿರುವುದರಿಂದ ಅನ್ಯಾಯವಾಗುತ್ತಿದೆ. ಆರನೇ ವೇತನ ಆಯೋಗದ ಅಂತಿಮ ವರದಿ ಶಿಫಾರಸಿನ ಮೇರೆಗೆ ಮುಖ್ಯ ಶಿಕ್ಷಕರಿಗೆ 10, 15, 20, 25 ಮತ್ತು 30 ವರ್ಷದ ಬಡ್ತಿ ನೀಡಬೇಕು. ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಉಪ ನಿರ್ದೇಶಕ ಹುದ್ದೆವರೆಗೂ ಬಡ್ತಿ ನೀಡಬೇಕು. ನೂತನ ಪಿಂಚಣಿ ಯೋಜನೆ ರದ್ದುಗೊಳಿಸಿ ಹಳೆಯ ಪಿಂಚಣಿ ಯೋಜನೆ ಮುಂದುವರಿಸಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಶಿಕ್ಷಣ ತಜ್ಞ ಡಾ.ವಿ.ಪಿ. ನಿರಂಜನಾರಾಧ್ಯ ಸೇರಿದಂತೆ ನೂರಾರು ಶಿಕ್ಷಕರು ಪಾಲ್ಗೊಂಡಿದ್ದರು.

Follow Us:
Download App:
  • android
  • ios